ಬೆಂಗಳೂರು: ಬಿಜೆಪಿ ದೇಶವನ್ನು ಧರ್ಮ, ಜಾತಿ ಆಧಾರದಲ್ಲಿ ಒಡೆಯುವ ಕೆಲಸ ಮಾಡುತ್ತಿದೆ. ನಾವೆಲ್ಲಾ ನಮ್ಮ ಮುಂಚೂಣಿ ನಾಯಕರ ನೇತೃತ್ವದಲ್ಲಿ ಕೆಲಸ ಮಾಡಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದು ರಾಹುಲ್ ಗಾಂಧಿ ಅವರನ್ನು ಪ್ರಧಾನಿ ಮಾಡಬೇಕು ಎಂದು ಎಲ್ಲ ಸಂಕಲ್ಪತೊಡೋಣ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು ರಾಜೀವ್ ಗಾಂಧಿ ಹಾಗೂ ದೇವರಾಜ ಅರಸು ದೇಶ ಕಂಡ ಮಹಾನ್ ನಾಯಕರು. ನಮ್ಮ ದೇಶ ಬಲಿಷ್ಠ ರಾಷ್ಟ್ರ ಆಗಬೇಕು ಎಂದು ಕನಸು ಕಂಡವರು. 1985 ರಲ್ಲಿ ನಮ್ಮ ತಂದೆ ಸೇವಾದಳದ ಕ್ಯಾಂಪಿಗೆ ಕಲ್ಕತ್ತಾಗೆ ಕಳುಹಿಸಿದ್ದರು. ಆ ಸಮಾರಂಭಕ್ಕೆ ರಾಜೀವ್ ಗಾಂಧಿ ಆಗಮಿಸಿದ್ದರು. ಸದಾ ಹಸನ್ಮುಖಿಯಾಗಿದ್ದ ರಾಜೀವ್ ಗಾಂಧಿ ಅವರನ್ನು ನೋಡಿದರೆ ಸ್ಪೂರ್ತಿ ಬರುತ್ತಿತ್ತು. ನಮಗೆ ಅವರೇ ಮಾದರಿ ಎಂದರು.
ಯುವ ಶಕ್ತಿಯ ಸಬಲೀಕರಣಕ್ಕೆ ಕಾರ್ಯಕ್ರಮ ರೂಪಿಸಿದವರು. ಆಧುನಿಕ ಭಾರತದ ಬಗ್ಗೆ ಆಲೋಚನೆ ಮಾಡಿದವರು. ಆಗಲೇ ಏಷ್ಯನ್ ಗೇಮ್ಸ್ ನಡೆಸಿ ದೆಹಲಿಗೆ ಹೊಸ ರೂಪ ನೀಡಿದರು. ಇಂದಿರಾಗಾಂಧಿ ಅವರ ಹತ್ಯೆಯ ನಂತರ ದೇಶದ ಚುಕ್ಕಾಣಿ ಹಿಡಿದು ಅತ್ಯಂತ ಸಮರ್ಥವಾಗಿ ದೇಶ ಮುನ್ನಡೆಸುತ್ತಾರೆ. 404 ಲೋಕಸಭಾ ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಾಣ ಮಾಡಿದರು ಎಂದು ಹೇಳಿದರು.
ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತಂದು ಮಹಿಳೆಯರು, ಪರಿಶಿಷ್ಟರು, ಹಿಂದುಳಿದವರು ರಾಜಕೀಯಕ್ಕೆ ಬರಲು ಕಾರಣರಾದರು. ಚಿಕ್ಕ ವಯಸ್ಸಿನಲ್ಲಿ ದೇಶಕ್ಕಾಗಿ ಪ್ರಾಣ ಬಿಟ್ಟರು ಎಂದರು.