ಚಿತ್ರರಂಗದಿಂದ ದೂರವಾಗಿಲ್ಲ: ಸಿನಿಮಾ ನನ್ನ ಫಸ್ಟ್ ಲವ್. ಅದು ನನ್ನ ಹೃದಯದಲ್ಲಿದೆ. ಕರೊನಾ ಬಳಿಕ ಒಂದು ರೀತಿಯಲ್ಲಿ ಗ್ಯಾಪ್ ತೆಗೆದುಕೊಂಡಿದ್ದೆ, ಇನ್ನೊಂದು ರೀತಿಯಲ್ಲಿ ಗ್ಯಾಪ್ ಬಂತು. ದಶಕಗಳ ಕಾಲ ಬಿಜಿಯಾಗಿದ್ದವರು, ತುಂಬ ವಯಸ್ಸಾಗಿದೆ. ಇವರ ಜತೆ ಹೇಗೆ ಕೆಲಸ ಮಾಡುವುದು? ಎಂಬ ಆಲೋಚನೆ ಚಿತ್ರ ರಂಗದವರಿಗೂ ಬಂದಿತ್ತು ಅನಿಸುತ್ತದೆ. ಹೀಗಾಗಿ ಸ್ವಲ್ಪ ಅಂತರ ನಿರ್ವಣವಾಗಿತ್ತು. ಅದರ ನಡುವೆ ಸೀರಿಯಲ್ ಮಾಡುತ್ತಿದ್ದೆ, ಅದುಇದು ಕೆಲಸ ಮಾಡುತ್ತಿದ್ದೆ. ಏನೇ ಮಾಡಿದರೂ ಸಂತೋಷದಿಂದ ಮಾಡುತ್ತಿದ್ದೆ. ನಾನೇನೇ ಮಾಡಲಿ, ಬಿಡಲಿ ಜನರ ಪ್ರೀತಿ ವಿಶ್ವಾಸ ಹೆಚ್ಚಾಯಿತೇ ಹೊರತು, ಎಂದಿಗೂ ಕಡಿಮೆಯಾಗಿಲ್ಲ. ಅದು ನನಗೆ ಹುರುಪು ನೀಡುತ್ತಿತ್ತು. ಹೀಗಾಗಿ ಪ್ರತಿದಿನ ಜನರ ಜತೆ ಮಾತನಾಡುತ್ತಿದ್ದೆ. ಹೀಗೆ ಜನರ ಜತೆ ಬೆರೆಯುತ್ತ ಬದುಕಿನ ಬಗ್ಗೆ ತುಂಬ ತಿಳಿದುಕೊಂಡೆ, ಈ ವಯಸ್ಸಿನಲ್ಲೂ ತಿಳಿದುಕೊಳ್ಳಬೇಕಾದದ್ದು ಬಹಳಷ್ಟಿದೆ. ಇವತ್ತಿನ ಯುವಜನರಿಂದಲೂ ಹಲವು ವಿಷಯ ಕಲಿತಿದ್ದೇನೆ.
ಕೆಲಸದ ಸಮಾಧಾನ: ನಾನು 58 ವರ್ಷಗಳ ಸಿನಿಮಾ ಜೀವನದಲ್ಲಿ ಎರಡು ಕಥೆಗಳನ್ನು ವಾಪಸ್ ಕಳುಹಿಸಿರಬಹುದಷ್ಟೇ. ನನಗೆ ಯಾವ ಪಾತ್ರವೂ ಬೇಡ ಅಂತ ಅನ್ನಿಸುತ್ತಿರಲಿಲ್ಲ. ಅಂತಹ ಪಾತ್ರವೂ ನನಗೆ ಬರಲಿಲ್ಲ. ಪ್ರತಿ ಪಾತ್ರವೂ ನಿರ್ದೇಶಕರ ಮನಸ್ಸಿನಲ್ಲಿ ಒಂದು ಸವಾಲಿನಂತೆ ಇರುತ್ತಿತ್ತು. ಎಲ್ಲ ಪಾತ್ರಗಳೂ ಒಂದಕ್ಕಿಂತ ಒಂದು ಭಿನ್ನವಾಗಿರುತ್ತಿತ್ತು. ನಾನಲ್ಲದ ಪಾತ್ರದಲ್ಲಿ ಪ್ರೇಕ್ಷಕರು ನೋಡಿ ಫೀಲ್ ಆಗುವಂತೆ ನಟಿಸಬೇಕಿತ್ತು. ಹಾಗಂತ ನೂರಕ್ಕೆ ನೂರು ಪರ್ಸೆಂಟ್ ನಾನು ಎಲ್ಲ ಪಾತ್ರಗಳಲ್ಲೂ ಗೆದ್ದಿದ್ದೇನೆ ಅಂತ ಹೇಳುತ್ತಿಲ್ಲ. ನನಗೆ ಜನ ಶೇಕಡ 60ರಷ್ಟು ಅಂಕ ನೀಡಿದ್ದಾರೆ. ಆ ಸಂತೋಷವಿದೆ. ಇನ್ನುಳಿದ ಶೇಕಡ 40ರಷ್ಟು ಅಂಕವನ್ನು ಪಡೆಯಬೇಕು ಅಂತ ಸವಾಲಿನಂತೆ ಸ್ವೀಕರಿಸಿ, ಪ್ರತಿ ಪಾತ್ರದಲ್ಲೂ ಇನ್ನೂ ಚೆನ್ನಾಗಿ ನಟಿಸಲು ಯತ್ನಿಸಿದ್ದೇನೆ. ಹಾಗೆ ಮಾಡುವಾಗ ಕಲಾವಿದನಿಗೆ ಒಂದು ತೃಪ್ತಿ ಸಿಗುತ್ತದೆ. ಶೂಟಿಂಗ್ ಮುಗಿಸಿ ಮನೆಗೆ ಬಂದು ಮಲಗುವಾಗ ಇವತ್ತು ಇಂತಹ ಸೀನ್ ಆಯಿತು, ಹೀಗೆ ಮಾಡಿದೆ, ಅದನ್ನು ಹೀಗೂ ಮಾಡಬಹುದಿತ್ತು ಅಂತ ಸಮಾಧಾನ ಸಿಗಬೇಕು. ಇವತ್ತು ಫಸ್ಟ್ ಕ್ಲಾಸ್ ಆಗಿ ಮಾಡಿದೆ ಅಂತ ಖುಷಿಯಾಗುವಂತಿರಬೇಕು. ಈ ಆಸೆ ನನಗೆ ಮೊದಲಿನಂತೆ ಈಗಲೂ ಇದೆ.
ಚಪ್ಪಾಳೆಯ ಸದ್ದು...: ನಟನಾಗಿರದಿದ್ದರೆ ಬಹುಶಃ ನನ್ನ ಅಸ್ತಿತ್ವವೇ ಇರಲಿಲ್ಲವೇನೋ? ಏಳನೇ ವಯಸ್ಸಿನಲ್ಲಿ ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಕಟ್ಟೆಯ ಮೇಲೆ ಮೊದಲ ಬಾರಿಗೆ ನಾಟಕ ಮಾಡಿದೆ. ನಮ್ಮ ತಾತ ‘ಬ್ರಹ್ಮ ವಿಷ್ಣು ಮಹೇಶ್ವರ’ ನಾಟಕ ಬರೆದು ಆಡಿಸಿದ್ದರು. ಅದರಲ್ಲಿ ನಟಿಸಿದ್ದೆ. 300 ಜನರು ನಾಟಕ ನೋಡಲು ಬಂದಿದ್ದರು. ಎರಡು, ಮೂರು ಸೀನ್ಗಳಾದ ಬಳಿಕ ಡೈಲಾಗ್ ಮರೆತುಬಿಟ್ಟೆ. ತಾತನತ್ತ ನೋಡಿದೆ... ಅವರು ‘ಡೈಲಾಗ್ ಹೇಳು ಮಗೂ’ ಅಂತ ಸಂಜ್ಞೆ ಮಾಡಿದರು. ಡೈಲಾಗ್ ಹೇಳಿದೆ. ಅಷ್ಟೂ ಜನ ಚಪ್ಪಾಳೆ ಹೊಡೆದರು. ಇವರೇಕೆ ಚಪ್ಪಾಳೆ ಹೊಡೆದರು? ನಾನು ಅಷ್ಟು ಚೆನ್ನಾಗಿ ಹೇಳಿದೆನಾ? ಅಂತ ತಾತನನ್ನು ಕೇಳಿದೆ. ಅವರು ‘ಚೆನ್ನಾಗಿತ್ತು ಮಗೂ’ ಅಂದರು. ಚೆನ್ನಾಗಿ ಹೇಳಿದರೆ ಜನ ಚಪ್ಪಾಳೆ ಹೊಡೆಯುತ್ತಾರೆ. ಆ ಚಪ್ಪಾಳೆ ನನಗೆ ಬೇಕು, ನನಗದು ಮುಖ್ಯ ಅಂತ ಅಂದೇ ಅನ್ನಿಸಿತು. ನನ್ನಪ್ಪ ಲಾಯರ್ ಆಗಿದ್ದರು. ನಮ್ಮ ಸಂಬಂಧಿಗಳಲ್ಲಿ ಬಹುತೇಕರು ಡಾಕ್ಟರ್, ಲಾಯರ್, ಇಂಜಿನಿಯರ್ಗಳೇ ಇದ್ದರು. ಆದರೆ, ನಾನು ಏಳನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಚಪ್ಪಾಳೆ ನೋಡಿ ನಟನಾಗಬೇಕು ಅಂತ ತೀರ್ವನಿಸಿಬಿಟ್ಟಿದ್ದೆ.
ಇವತ್ತಿನವರು ಪುಟ್ಟಣ್ಣ ಕಣಗಾಲ್ರಂತೆ ಯೋಚಿಸಬೇಕು: ಪುಟ್ಟಣ್ಣ ಕಣಗಾಲ್ ನನ್ನ ಗುರುಗಳು. ಪ್ರತಿ ಬಾರಿ ಕಥೆ ಮಾಡಿದಾಗಲೂ ಅವರು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಹೇಳುತ್ತಿದ್ದರು. ಸಾಮಾನ್ಯ ಜನರ ಪ್ರತಿಕ್ರಿಯೆ ಪಡೆದು, ಅದಕ್ಕೆ ಅನುಗುಣವಾಗಿ ತಾವೊಂದು ನಿರ್ಧಾರ ತೆಗೆದುಕೊಂಡು ಸಿನಿಮಾ ಮಾಡುತ್ತಿದ್ದರು. ಇವತ್ತು ಆ ರೀತಿ ಯೋಚಿಸುವುದು ಕಡಿಮೆ ಆಗಿದೆ. ಹಾಗೆ ಯೋಚಿಸಿ ಸಿನಿಮಾ ಮಾಡಿದರೆ ಇವತ್ತೂ ಜನ ಥಿಯೇಟರ್ಗೆ ಬರುತ್ತಾರೆ.
ಕಂಟೆಂಟ್ ಮುಖ್ಯ, ಸ್ಟಾರ್ ಅಲ್ಲ: ಡಾ. ರಾಜಕುಮಾರ್ ಅವರು ‘ನನ್ನ ಹೆಸರಿಗೆ ಎಂಟು ದಿನ ಸಿನಿಮಾ ಓಡುತ್ತದೆ. ಒಂಬತ್ತನೇ ದಿನದ ಕಥೆ ಏನು?’ ಎಂದು ಹೇಳುತ್ತಿದ್ದರು. ನಾನು ಮತ್ತು ವಿಷ್ಣುವರ್ಧನ್ ಕೂಡ ಹಾಗೇ, ‘ನಮ್ಮ ಹೆಸರಿಗೆ ಮೂರು ದಿನ ಸಿನಿಮಾ ಓಡುತ್ತದೆ, ನಾಲ್ಕನೇ ದಿನದಿಂದ ಕಥೆ ಏನು?’ ಎಂದು ಕೇಳುತ್ತಿದ್ದೆವು. ಹೀಗಾಗಿ ಕಥೆಯೇ ಹೀರೋ. ಕಥೆ ಚೆನ್ನಾಗಿದ್ದರೆ ರಾಜಕುಮಾರ್, ವಿಷ್ಣುವರ್ಧನ್, ಶ್ರೀನಾಥ್ ಯಾರಿದ್ದರೂ ಚೆನ್ನಾಗಿ ಓಡುತ್ತದೆ. ಆದರೆ, ಕಥೆಯೇ ಚೆನ್ನಾಗಿಲ್ಲದಿದ್ದರೆ, ಯಾರಿದ್ದರೂ ಓಡಲ್ಲ.
ಅಪ್ಪನೇ ಮೊದಲ ಹೀರೋ: ನನ್ನ ಜೀವನದ ಮೇಲೆ ತುಂಬ ಪ್ರಭಾವ ಬೀರಿದ ವ್ಯಕ್ತಿ, ನನ್ನ ತಂದೆ. ನಾನು 11 ತಿಂಗಳ ಮಗುವಾಗಿದ್ದಾಗ ಅಮ್ಮ ವಿಧಿವಶರಾದರು. ಆಗ ನನ್ನಣ್ಣನಿಗೆ ಎರಡು ವರ್ಷ. ಅಪ್ಪ ಇನ್ನೊಂದು ಮದುವೆಯಾಗದೆ ನನ್ನನ್ನು ಮತ್ತು ಅಣ್ಣನನ್ನು ಸಾಕಿ ಬೆಳೆಸಿದರು. ವೃತ್ತಿಯಲ್ಲಿ ವಕೀಲರಾಗಿದ್ದ ಅವರು ಕೆಲಸ ಮತ್ತು ಮನೆ ಎರಡನ್ನೂ ತೂಗಿಸಿಕೊಂಡು ಹೋಗುತ್ತಿದ್ದರು. ನೀನೇನಾಗಬೇಕು? ಎಂದು ಕೇಳಿದಾಗ ನಟನಾಗಬೇಕು ಎಂದಾಗ, ಆಯಿತು ನಾಟಕ ಮಾಡು ಅಂತ ಎಲ್ಲ ಹಂತದಲ್ಲೂ ಬೆನ್ನೆಲುಬಾಗಿ ನಿಂತವರು ಅಪ್ಪ. ತಮ್ಮ ಮನಸ್ಸಿನ ಆಸೆಯಂತೆ ಏನೂ ಹೇಳದೆ, ನನ್ನ ಇಷ್ಟ ಏನು ಅಂತ ಕೇಳಿ, ಅದಕ್ಕೆ ಸಪೋರ್ಟ್ ಮಾಡಿದರು. ನಂತರ ನನ್ನ ಕೆಲಸದಲ್ಲಿ ನಾನು ಸಂತೋಷಪಡುವುದನ್ನು ನೋಡಿ ಅವರೂ ಸಂತೋಷಪಡುತ್ತಿದ್ದರು.
ನೆಮ್ಮದಿಯ ಬದುಕು: ಪ್ರತಿದಿನ ರಾತ್ರಿ 10.15ಕ್ಕೆ ಸರಿಯಾಗಿ ಮಲಗುತ್ತೇನೆ. ಬೆಳಗ್ಗೆ 4 ಗಂಟೆಗೆ ಏಳುತ್ತೇನೆ. ಎದ್ದ ತಕ್ಷಣ ಒಂದಷ್ಟು ಆತ್ಮೀಯರಿಗೆ ಗುಡ್ವಾರ್ನಿಂಗ್ ಮೆಸೇಜ್ ಕಳುಹಿಸುತ್ತೇನೆ. 4.05ರ ಒಳಗೆ ಅವರಿಗೆ ಮೆಸೇಜ್ ಹೋಗದಿದ್ದರೆ, 4.07ಕ್ಕೆ ಸರಿಯಾಗಿ ಕರೆ ಮಾಡಿ, ‘ಯಾಕೆ ಸರ್? ಏನಾಯಿತು?’ ಎಂದು ಕೇಳುತ್ತಾರೆ. ಕೆಲವೊಮ್ಮೆ 4.15 ಆದರೂ ಮಲಗಿಕೊಂಡುಬಿಟ್ಟರೆ, ಸಾಲು ಕರೆಗಳು ಬರುತ್ತವೆ. ನಂತರ 5ರಿಂದ 6ರವರೆಗೆ ವಾಕ್, 6-6.30ವರೆಗೆ ಕಾಫಿ, 6.30ರಿಂದ 6.45ರವರೆಗೆ ತರಕಾರಿ ಮಾರುವವರು, ಜನರ ಜತೆ ಮಾತನಾಡುತ್ತೇನೆ. ಈ ವೇಳೆ ಸಿನಿಮಾ ಬಿಟ್ಟು ಬೇರೆಲ್ಲ ವಿಷಯಗಳ ಬಗ್ಗೆ ಮಾತನಾಡುತ್ತೇನೆ. ಏಕೆಂದರೆ ಸಿನಿಮಾ ಬಗ್ಗೆ ನಾನು ಯಾರನ್ನೂ ಕೇಳುವುದೂ ಇಲ್ಲ, ಯಾರೂ ಹೇಳುವುದೂ ಇಲ್ಲ. ನಾವು ಸಿನಿಮಾ ಬಗ್ಗೆ ಮಾತನಾಡಿದರೆ ಇವರೇನಾದರೂ ತಪು್ಪ ತಿಳಿದುಕೊಳ್ಳುತ್ತಾರೋ ಏನೋ ಎಂಬ ಭಾವನೆ ಅವರಲ್ಲಿರುತ್ತದೆ. ನಂತರ ಹೊರಗೆ ಎಲ್ಲಾದರೂ ಹೋಗುವುದಿದ್ದರೆ ಹೋಗುತ್ತೇನೆ. ಸ್ನೇಹಿತರು, ಸಂಬಂಧಿಕರನ್ನು ಭೇಟಿಯಾಗುತ್ತೇನೆ. ಯಾರಾದರೂ ಬಂದು ಹೋಗುವವರು, ಕರೆ ಮಾಡಿ ಮಾತನಾಡುವವರ ಜತೆ ಮಾತು... ಹೀಗೆ ದಿನ ಮುಗಿದುಹೋಗುತ್ತದೆ.
ಕನಸು ಬೀಳುತ್ತಿಲ್ಲ ಎಂಬ ಕೊರಗಿದೆ: ಮನುಷ್ಯನಿಗೆ ಕನಸು ಬೇಕು. ಏಕೆಂದರೆ, ಆಂತರ್ಯದಲ್ಲಿ ನಾವೇನು ಅಂದುಕೊಳ್ಳುತ್ತೇವೆಯೋ ಅದು ಉಪಪ್ರಜ್ಞೆಯಲ್ಲಿ ಬರುವುದೇ ಕನಸು. ಅದೆಷ್ಟು ಜನರಿಗೆ ಬೀಳುವ ಕನಸು ನೆನಪಿನಲ್ಲಿ ಇರುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನನಗೆ ಬಿದ್ದ ಕನಸು ಸಂಪೂರ್ಣವಾಗಿ ನೆನಪಿರುತ್ತದೆ. ಕನಸನ್ನು ನನಸು ಮಾಡಿಕೊಳ್ಳಲು ಯತ್ನಿಸುತ್ತೇನೆ. ಕನಸು ನನಗೆ ಬದುಕಿನಷ್ಟೇ ಮುಖ್ಯ. ನೆನಪು ಮತ್ತು ಮರೆವು ಎರಡೂ ಮನುಷ್ಯನಿಗೆ ಬೇಕು. ಕೆಲವೊಂದು ನೆನಪಿನಲ್ಲಿದ್ದರೆ ಖುಷಿಯಾಗಿರಲು ಸಾಧ್ಯ. ಕೆಲ ವಿಷಯಗಳನ್ನು ಮರೆತರೆ ಮಾತ್ರ ಮನುಷ್ಯ ಖುಷಿಯಾಗಿರಲು ಸಾಧ್ಯ. ಅವೆರಡರ ಮಧ್ಯ ಬರುವುದೇ ಕನಸು. ಆದರೆ ಈಚೆಗೆ ನನಗೆ ಕನಸೇ ಬೀಳುತ್ತಿಲ್ಲ. ಪ್ರತಿದಿನ ಮಲಗುವಾಗ ಇವತ್ತು ಕನಸಿನಲ್ಲಿ ನನ್ನ ಜತೆಗಿದ್ದವರು, ನನ್ನ ಜತೆ ನಟಿಸಿದವರು, ಗೆಳೆಯರು ಯಾರಾದರೂ ಬಂದು ಮಾತನಾಡಿಸುತ್ತಾರೆ ಅಂತ ಅಂದುಕೊಳ್ಳುತ್ತೇನೆ. ಇದುವರೆಗೆ ಯಾರೂ ಬಂದಿಲ್ಲ. ನನ್ನನ್ನು ಕಂಡರೆ ಎಲ್ಲರಿಗೂ ಅಷ್ಟೊಂದು ಬೇಸರವಾಗಿಬಿಟ್ಟಿದೆಯಾ ಅಂತಲೂ ಕೆಲವೊಮ್ಮೆ ಅನಿಸಿದ್ದಿದೆ.
ಒಂದು ದಿನವೂ ಪೂಜೆ ತಪ್ಪಿಸಲ್ಲ: ಪ್ರತಿದಿನ ವಾಕಿಂಗ್ ಮುಗಿಸಿ, ಸ್ನಾನ ಮಾಡಿ 45 ನಿಮಿಷ ಪೂಜೆ ಮಾಡುತ್ತೇನೆ. ಕಳೆದ 63 ವರ್ಷಗಳಿಂದ ತಪ್ಪದೇ ಪೂಜೆ ಮಾಡುತ್ತಿದ್ದೇನೆ. ಪೂಜೆ ಮಾಡುವಾಗ ನನ್ನ ಸಮಸ್ಯೆಗೆ ಪರಿಹಾರ ಕೇಳುತ್ತೇನೆ. ನಾನು ನಂಬಿದ ದೇವರು ನನ್ನನ್ನು ಮುನ್ನಡೆಸುತ್ತಾನೆ. ಒಂದು ದಿನ ಪೂಜೆ ಮಾಡದಿದ್ದರೂ ಚಡಪಡಿಸುತ್ತೇನೆ. ಹೀಗಾಗಿ ದೂರದ ಅಮೆರಿಕ ಅಥವಾ ಎಲ್ಲಿಗೇ ಹೋದರೂ ಸೂರ್ಯನನ್ನು ನೋಡಿದ ದಿನ ಪೂಜೆ ತಪ್ಪಿಸುವುದಿಲ್ಲ. ಹಾಗಂತ ನೀವೂ ಪೂಜೆ ಮಾಡಿ ಅಂತ ಬೇರೆಯವರಿಗೆ ಉಪದೇಶ ಮಾಡುವುದಿಲ್ಲ. ಒಟ್ಟಾರೆ ಹೇಳಬೇಕೆಂದರೆ, ನಾನು ಮಾಡಿರುವ ಎಲ್ಲ ಸಿನಿಮಾಗಳೂ ಖುಷಿ ನೀಡಿವೆ. ನನಗಾಗಿ ಬಂದ ಕಥೆ, ಪಾತ್ರಗಳು, ನನ್ನನ್ನು ಉಳಿಸಿ, ಬೆಳೆಸಿದ ಜನ... ಎಲ್ಲರಿಗೂ ಧನ್ಯವಾದಗಳು.
ನಿರೂಪಣೆ: ಹರ್ಷವರ್ಧನ್ ಬ್ಯಾಡನೂರು