ಐದು ವರ್ಷಗಳ ಆಡಳಿತಾವಧಿ ಪೂರ್ಣಗೊಳಿಸಿ ಎರಡನೇ ಅವಧಿಗೆ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸೇತರ ನಾಯಕ ಎಂಬ ಹೆಗ್ಗಳಿಕೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನ ಇಂದು. ಕಳೆದ ಏಳು ವರ್ಷಗಳಲ್ಲಿ ಜಗತ್ತು ಭಾರತವನ್ನು ನೋಡುವ ದೃಷ್ಟಿಯೇ ಬದಲಾಗಿದೆ. ಇಲ್ಲಿನ ಶಕ್ತಿ, ಉತ್ಸಾಹವನ್ನು, ಅಭಿವೃದ್ಧಿಯ ಓಟವನ್ನು ಅಂತಾರಾಷ್ಟ್ರೀಯ ವಲಯ ಗಮನಿಸುತ್ತಿದೆ. ಒಂದೊಂದೇ ರಂಗಗಳನ್ನು ಸ್ವಾವಲಂಬಿಗೊಳಿಸುವ, ಸಶಕ್ತಗೊಳಿಸುವ ಪ್ರಕ್ರಿಯೆ ಪರಿಣಾಮಕಾರಿಯಾಗಿ ನಡೆದಿದೆ. ದೇಶದ ನೇತೃತ್ವ ಸಮರ್ಥವಾಗಿದ್ದರೆ ಅದ್ಭುತ ಬದಲಾವಣೆಗಳನ್ನು ಹೇಗೆ ಸಾಕಾರಗೊಳಿಸಬಹುದು ಎಂಬುದಕ್ಕೆ ಈ ಕಾಲಘಟ್ಟ ಸಾಕ್ಷಿ. ಪ್ರಮುಖ ಯೋಜನೆಗಳನ್ನು ಪರಿಣಾಮಕಾರಿಯಾಗಿ ಶ್ರೀಸಾಮಾನ್ಯನವರೆಗೆ ತಲುಪಿಸಿದರೆ ಮಹತ್ವದ ಬದಲಾವಣೆ ಸಾಧ್ಯ ಎಂಬುದನ್ನು ಈ ಅವಧಿ ತೋರಿಸಿಕೊಟ್ಟಿದೆ. ಆಯುಷ್ಮಾನ್ ಭಾರತ್, ಜನಧನ, ಉಜ್ವಲ, ಸಬ್ಸಿಡಿ ನೇರ ಪಾವತಿ, ಬೇವು ಲೇಪಿತ ಯೂರಿಯಾ, ಮಣ್ಣಿನ ಆರೋಗ್ಯ ಕಾರ್ಡ್, ಬೆಳೆವಿಮೆ, ಕಿಸಾನ್ ಸಮ್ಮಾನ್, ಮೂಲಸೌಕರ್ಯ ವೃದ್ಧಿ ಸೇರಿದಂತೆ ಹಲವು ಯೋಜನೆಗಳು ಜನರ ಜೀವನಸ್ತರ ಉತ್ತಮಪಡಿಸುತ್ತಿರುವುದು ಸಮಾಧಾನಕರ ಸಂಗತಿ. ಯೋಜನೆಗಳ ಫಲಾನುಭವಿಗಳೊಂದಿಗೆ ತಾವೇ ಕುಳಿತು ಮಾತನಾಡಿದ ಪ್ರಧಾನಿ ಮೋದಿ ಲಾಭ, ಕುಂದುಕೊರತೆ ಎರಡನ್ನೂ ಅರಿತುಕೊಂಡರು.
ಸಂಕೀರ್ಣ ಮತ್ತು ದೀರ್ಘಾವಧಿ ಸಮಸ್ಯೆಗಳನ್ನು ಪರಿಹರಿಸಿದ್ದಲ್ಲದೆ ಆಂತರಿಕ ಭದ್ರತೆ, ಸೇನಾ ಆಧುನೀಕರಣಕ್ಕೆ ಒತ್ತು ನೀಡಿದ ಕ್ರಮ ಸುಧಾರಣೆ ಹಾದಿಯ ಪ್ರಮುಖ ಮೈಲಿಗಲ್ಲುಗಳಾದವು. ವಿದೇಶಾಂಗ ನೀತಿಗೆ ಹೊಸ ದಿಕ್ಕು, ನೂತನ ಶಿಕ್ಷಣ ನೀತಿ ಗಮನ ಸೆಳೆದಿವೆ. ಕರೊನಾ ಸೋಂಕಿನ ಹಾವಳಿ ಅಭಿವೃದ್ಧಿಯ ವೇಗಕ್ಕೆ ತಡೆಯಾಗಿದ್ದು ನಿಜ. ಈಗಲೂ ಹಲವು ಜ್ವಲಂತ ಸಮಸ್ಯೆಗಳು ಮುಂದಿವೆ. ಕರೊನಾದಿಂದ ನೆಲಕಚ್ಚಿರುವ ಆರ್ಥಿಕತೆಗೆ ಜೀವ ತುಂಬಬೇಕಿದೆ. ಬೆಲೆಯೇರಿಕೆ ಜನಸಾಮಾನ್ಯರ ಸಂಕಷ್ಟವನ್ನು ಹೆಚ್ಚಿಸಿದ್ದು, ಜೀವನಾವಶ್ಯಕ ಬೆಲೆಗಳ ನಿಯಂತ್ರಣಕ್ಕೆ ಅವಶ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮೇಲಿನ ಹಂತದಲ್ಲಿ ಭ್ರಷ್ಟಾಚಾರಕ್ಕೆ ಕೊಂಚ ಕಡಿವಾಣ ಬಿದ್ದಿದ್ದರೂ, ಕೆಳ ಹಂತದಲ್ಲಿ ವ್ಯವಸ್ಥೆಯ ಶುದ್ಧೀಕರಣ ಆಗಬೇಕಿದೆ. ಇಂಥ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸಕಾಲದಲ್ಲಿ ಅವುಗಳಿಗೆ ಮದ್ದರೆದರೆ ಪರಿಹಾರದ ಹಾದಿ ಕಷ್ಟವೇನಲ್ಲ.
ದೇಶ ಮತ್ತು ಅಭಿವೃದ್ಧಿಯ ಪ್ರಶ್ನೆ ಬಂದಾಗ ರಾಜಕೀಯ ಗೌಣವಾಗಬೇಕು. ಆಡಳಿತದಲ್ಲಿನ ತಪು್ಪಗಳನ್ನು ಎತ್ತಿ ತೋರಿಸುವುದು ಪ್ರತಿಪಕ್ಷಗಳ ಕರ್ತವ್ಯವೇ ಹೌದು. ಹಾಗಂತ, ವಿರೋಧಕ್ಕಾಗಿ ವಿರೋಧಿಸುವ ನೀತಿ ಬೇಡ. ಅಭಿವೃದ್ಧಿ ಸಾಧಿಸಲು ಭಾರತದ ಬಳಿ ಸಾಕಷ್ಟು ಅವಕಾಶಗಳಿವೆ. ಆ ನಿಟ್ಟಿನಲ್ಲಿ ನಮ್ಮ ಕೊರತೆಗಳು, ವ್ಯವಸ್ಥೆಯ ದೌರ್ಬಲ್ಯಗಳು ನಿವಾರಣೆಗೊಳ್ಳಬೇಕು. ಸಮರ್ಥ ನಾಯಕತ್ವದಿಂದ ಮಾತ್ರ ಇದು ಸಾಧ್ಯವಾಗಬಲ್ಲದು. ಪ್ರಧಾನಿ ನರೇಂದ್ರ ಮೋದಿ ಮೊದಲಿನ ಉತ್ಸಾಹದಲ್ಲೇ ಹೊಸ ಸವಾಲುಗಳನ್ನೂ ಎದುರಿಸಿ, ದೇಶವನ್ನು ಮಹಾಶಕ್ತಿಯಾಗಿಸಲಿ.