ನ್ಯೂಸ್

ಎಕೆರೆಗೆ 15 ಸಾವಿರ  ಘೋಷಿಸಲಿ

ಕೋಲಾರ ಡೆಸ್ಕ್

ಶ್ರೀನಿವಾಸಪುರ: ರಾಜ್ಯ ಸರ್ಕಾರ ಮಾವು ಬೆಳೆಗಾರರ ಸಮಸ್ಯೆಗಳಿಗೆ ತಕ್ಷಣ ಸ್ಪಂದನೆ ನೀಡಬೇಕು. ಮಾವಿಗೆ ಬೆಲೆ ಇಲ್ಲದೆ ಮರಗಳಲ್ಲೆ ಇರುವ ಹಣ್ಣಿಗೆ ಅಂತ್ರಾಸ್​ ರೋಗ ಕಾಡುತ್ತಿದೆ. ಕೂಡಲೆ ಸರ್ಕಾರ ಒಂದು ಎಕೆರೆಗೆ 15 ಸಾವಿರ ರೂ.ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಆಗ್ರಹಿಸಿದರು.

ತಾಲೂಕಿನ ಮಾವಿನ ತೋಟಗಳಿಗೆ, ಎಪಿಎಂಸಿ ಮಾರುಕಟ್ಟೆಗೆ ಭೇಟಿ ನೀಡಿ ರೈತರ ಮತ್ತು ಮಂಡಿ ಮಾಲೀಕರ ಸಮಸ್ಯೆ ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಮಾವಿನ ಬೆಂಬಲ ಬೆಲೆ ವಿಷಯದಲ್ಲಿ ಜನಪ್ರತಿನಿಧಿಗಳು ರಾಜಕಾರಣ ಮಾಡುವುದನ್ನು ಬಿಟ್ಟು ಒಗ್ಗಟ್ಟಾಗಿ ಹೋರಾಟ ನಡೆಸುವ ಮೂಲಕ ಸರ್ಕಾರದಿಂದ ಬೆಂಬಲ ಬೆಲೆ ಘೋಷಿಸಿ ರೈತರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದರು.

ತೋತಾಪುರಿ ಮಾವಿಗೆ ಬೆಲೆ ಕುಸಿದಿದ್ದು, ರೈತರು ಮರಗಳಲ್ಲಿಯೇ ಮಾವನ್ನು ಬಿಟ್ಟಿದ್ದಾರೆ. ನಾನು ತೋಟಗಳಿಗೆ ಭೇಟಿ ನೀಡಿದಾಗ ರೈತರು ಕಣ್ಣೀರು ಹಾಕಿದರು, 1 ಟನ್​ ಮಾವು ಬೆಳೆಯಬೇಕಾದರೆ 5,900 ರೂ. ಖರ್ಚು ಬರುತ್ತದೆ. ಮಾರುಕಟ್ಟೆಯಲ್ಲಿ ಕೆಜಿ 3 ರೂ.ಗೆ ಮಾರಾಟವಾಗುತ್ತಿದೆ, ರೈತರು ಮಾರುಕಟ್ಟೆಗೆ ಕಾಯಿ ತೆಗೆದುಕೊಂಡು ಹೋಗಬೇಕಾದರೆ ಟನ್ನಿಗೆ 5 ಸಾವಿರ ಖರ್ಚು ತಗಲುತ್ತದೆ ಎಂದರು.

ಮಾಜಿ ಎಂಎಲ್​ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರ ಎಕರೆಗೆ 12 ಸಾವಿರದಿಂದ 15 ಸಾವಿರ ರೂ. ಬೆಂಬಲ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್​, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಡಾ.ವೇಣುಗೋಪಾಲ್​, ತಾಲೂಕು ಅಧ್ಯಕ್ಷ ರೋಣೂರು ಚಂದ್ರಶೇಖರ್​, ಮಾಜಿ ಅಧ್ಯಕ್ಷ ಲಕ್ಷ್ಮಣ್ ಗೌಡ, ಬಂಗವಾದಿ ಶಿವಶಂಕರ್​, ಮಾವು ಮಂಡಳಿಯ ಮಾಜಿ ಅಧ್ಯಕ್ಷ ವಾಸುದೇವ್​, ಮುಖಂಡರಾದ ಮಾಗೇರಿ ನಾರಾಯಣಸ್ವಾಮಿ, ಬಂಗವಾದಿ ವಕೀಲ ನಾಗರಾಜ್​, ಕೊಟ್ರಗೂಳಿ ನಾರಾಯಣಸ್ವಾಮಿ, ಲಕ್ಷ್ಮಣ್ ​ ರೆಡ್ಡಿ ಇದ್ದರು.

ರೈತರಿಂದ ರಾಜಕಾರಣಿಗಳ ತರಾಟೆ

ಸರ್ಕಾರ ಐಪಿಎಲ್​ ಕ್ರಿಕೆಟ್​ ಪಂದ್ಯಾವಳಿಗೆ ನೀಡಿದಷ್ಟು ಪ್ರೋತ್ಸಾಹವನ್ನು ರೈತರಿಗೆ ನೀಡುತ್ತಿಲ್ಲ. ಇನ್ನು 5 ದಿನ ಕಾಯಿ ಮರಗಳಲ್ಲೆ ಇದ್ದರೆ ಬೆಳೆಯನ್ನೇ ಮರೆಯಬೇಕಾಗುತ್ತದೆ. 15 ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿಲ್ಲ. ಈಗ ತೋಟಗಳಿಗೆ ಬಂದರೆ ಏನು ಪ್ರಯೋಜನ ಎಂದು ನೀಲಟೂರು ರೈತ ನರೇಂದ್ರ ಅವರು ಸದಾನಂದಗೌಡ ಮತ್ತು ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.