ಬಿ.ಎಸ್. ದ್ವಾರಕಾನಾಥ್ ದೈವ ಚಿಂತಕರು
ಚೈತ್ರ ಮಾಸದ ಶುದ್ಧ ತ್ರಯೋದಶಿ ದಿನ ರಾತ್ರಿ 9 ಗಂಟೆಗೆ 9 ನಿಮಿಷ ದೀಪ ಪ್ರಜ್ವಲನ ಮಾಡಲು ದೇಶದ ಪ್ರಧಾನಿಗಳು ಕರೆ ನೀಡಿರುವುದು ಅತ್ಯಂತ ಸ್ವಾಗತಾರ್ಹ. ಕಾರ್ತಿಕ ಮಾಸದಲ್ಲಿ ಲಕ್ಷ ದೀಪೋತ್ಸವ, ಮಾರ್ಗಶಿರ ಮಾಸದಲ್ಲಿ ವಿಷ್ಣುದೀಪೋತ್ಸವ ನಡೆಯುವಂತೆ ಇದೀಗ ಪ್ರಧಾನಿಯವರು ಕರೆ ನೀಡಿರುವ ಸಮಯವನ್ನು ‘ವಸಂತ ದೀಪೋತ್ಸವ’ ಎಂದು ನಾವೆಲ್ಲರೂ ಸಂಭ್ರಮಿಸಬಹುದು.
ದೇವರು ಜ್ಯೋತಿಸ್ವರೂಪ. ದುರ್ಗಾಪರಮೇಶ್ವರಿಯನ್ನು ದೀಪದ ಪ್ರತೀಕ ಎಂದೇ ಭಾವಿಸಲಾಗಿದೆ. ದುರ್ಗಾ ಸೂಕ್ತದಲ್ಲಿ ತಿಳಿಸಿರುವ ‘ಜಾತವೇದಸೇ ಸುನವಾಮ ಸೋಮ ಮರಾತೀಯತೋ ನಿದಹಾತಿ ವೇದಃ, ಸ ನಃ ಪರ್ಷದತಿ ದುರ್ಗಾಣಿ ವಿಶ್ವಾ ನಾವೇವ ಸಿಂಧುಂ ಧುರಿತಾತ್ಯಗ್ನಿಃ’ ಎನ್ನುವಂತೆ, ವಿಶ್ವವೆಂಬ ಸಮುದ್ರದಲ್ಲಿ ಜನರೆಲ್ಲರೂ ಜೀವನವೆಂಬ ನೌಕೆಯಲ್ಲಿ ಅಗ್ನಿ, ಜಲ ಸೇರಿ ಯಾವುದೇ ದುರಂತಕ್ಕೆ ಒಳಪಡದೆ ಸುರಕ್ಷಿತವಾಗಿ ದಡ ಸೇರಿಸು ಎಂದು ದುರ್ಗೆಯನ್ನು ಪ್ರಾರ್ಥಿಸುತ್ತೇವೆ. ಪ್ರಧಾನಿಯವರು ನೀಡಿರುವ ಕರೆಯು ಈಗ ಎಲ್ಲೆಡೆ ಮೂಡಿರುವ ಅಂಧಕಾರ, ಭಯ, ಆತಂಕವನ್ನು ದೂರ ಮಾಡಲು ಸಾಕ್ಷಾತ್ ದುರ್ಗೆಯ ಆರಾಧನೆಗೆ ನೀಡಿದ ಕರೆಯಂತಿದೆ. ‘ದುರ್ಗಾ ದೀಪಂ ಜ್ವಲೇತ್, ರಾಷ್ಟ್ರೇ ಲಕ್ಷ್ಮೀ ಸ್ಥಿರಾಭವೇತ್‘ ಹಾಗೂ ‘ಮಾರಿಕಾದಿಮಹಾರೋಗೇ ಪಠತಾ ಸೌಖ್ಯದಂ ನೃಣಾಮ್ ಎಂದು ಸ್ವತಃ ನಾರದ ಮಹರ್ಷಿಗಳೇ ಹೇಳಿದ್ದಾರೆ.
ಒಟ್ಟಾರೆ ದೇಶ ಈಗ ಸಂಕಷ್ಟದ ಸಮಯದಲ್ಲಿ ಮುಂದೆ ಸಾಗುತ್ತಿದೆ. ನಾಲ್ಕನೇ ತಿಂಗಳಿನ ಐದನೇ ದಿನ, ಒಟ್ಟು ಸೇರಿಸಿದರೂ ಒಂಭತ್ತು ಸಂಖ್ಯೆ ಬರುವ ಭಾನುವಾರ. ಪಂಚದುರ್ಗೆಯರ ಆರಾಧನೆ ಅತಿ ಶ್ರೇಷ್ಠವಾದದ್ದು. ಮೂಲದುರ್ಗೆ, ಜಲದುರ್ಗೆ, ಅಗ್ನಿದುರ್ಗೆ, ವನದುರ್ಗೆ ಹಾಗೂ ಅಗ್ರದುರ್ಗೆಯರ ಆರಾಧನೆಯಿಂದ ಅಂಧಕಾರ ನಿವಾರಣೆಯಾಗುತ್ತದೆ. ದೇಶದ ಚುಕ್ಕಾಣಿ ಹಿಡಿದಿರುವವರಿಗೂ ಈ ವಿಚಾರ ತಿಳಿದಂತಿದೆ. ಅದರಂತೆಯೇ ದೇಶಕ್ಕೆ ಎರಗಿರುವ ಈ ವಿಕೋಪವನ್ನು ಪರಿಹರಿಸಲು, ಅದರ ನಂತರ ಮತ್ತೆ ಎದುರಾಗುವ ಆರ್ಥಿಕ ಸಂಕಷ್ಟವನ್ನು ನೀಗಲು, ಜನರಲ್ಲಿ ಶಾಂತಿ-ನೆಮ್ಮದಿ ಮೂಡಲು ಪ್ರತಿಪಕ್ಷಗಳು, ನಾಡಿನ ತಜ್ಞರು, ಧಾರ್ವಿುಕ ಸಾಧಕರ ವಿಶ್ವಾಸವನ್ನು ಒಟ್ಟುಗೂಡಿಸಬೇಕು. ಈ ಮೂಲಕ ಪಂಚ ದುರ್ಗೆಯರ ಆರಾಧನೆ ಎಲ್ಲರಿಗೂ ಒಳಿತನ್ನು ಉಂಟುಮಾಡುತ್ತದೆ. ಚತುರಾಮ್ನಾಯ ಪೀಠದಲ್ಲಿ ಜ್ಞಾನಪೀಠ ಎಂದೇ ಹೆಸರಾಗಿರುವ ಶ್ರೀ ಕ್ಷೇತ್ರ ಶೃಂಗೇರಿಯಲ್ಲಿ ಶ್ರೀ ಭಾರತೀ ತೀರ್ಥ ಜಗದ್ಗುರುಗಳು ದುರ್ಗಾದೇವಿಯನ್ನು ಆರಾಧನೆ ಮಾಡುತ್ತಿದ್ದಾರೆ.
ದೀಪ ಪ್ರಜ್ವಲನ ಮಾಡಬೇಕು ಎಂದ ಕೂಡಲೇ ನಮ್ಮ ಬುದ್ಧಿಗೆ ನಿಲುಕುವಂತೆ ಟೀಕೆ-ಟಿಪ್ಪಣಿ ಮಾಡಬಾರದು. ದೇವರ ಮೇಲಿನ ನಂಬಿಕೆ ವೈಯಕ್ತಿಕವಾದದ್ದು. ಆದರೆ ಈ ಸಮಯದಲ್ಲಿ ಎಲ್ಲರಲ್ಲೂ ಭಯ, ಆತಂಕ ಆವರಿಸಿದೆ. ದೀಪವನ್ನು ಬೆಳಗುವುದರಿಂದ ಏಕಾಂಗಿತನ, ವ್ಯಾಕುಲತೆ ದೂರವಾಗಿ ಉತ್ಸಾಹ ಮೂಡುತ್ತದೆ, ಈ ಯುದ್ಧವನ್ನು ಗೆಲ್ಲುತ್ತೇವೆಂಬ ನಂಬಿಕೆ ಮೂಡುತ್ತದೆ. ನಂಬಿಕೆಯ ಮೇಲೆಯೇ ಇಡೀ ಜಗತ್ತು ನಡೆಯುತ್ತಿರುವುದು. ದೀಪ ಬೆಳಗುವ ಮೂಲಕ ದೇಶದ ಜನರಲ್ಲಿ ಧೈರ್ಯ, ಒಗ್ಗಟ್ಟು ಮೂಡಿಸಿದರೆ ಇಡೀ ದೇಶ ಆರೋಗ್ಯಕರವಾಗುತ್ತದೆ.
ದುಃಖಂ ಹರತಿ ದುರ್ಗಾಃ ಎನ್ನುವಂತೆ, ಭಾನುವಾರ ಎಲ್ಲರ ಮನೆಗಳಲ್ಲೂ ಬೆಳಗುವ ದೀಪಗಳು ದುರ್ಗಾ ಸ್ವರೂಪದಲ್ಲಿ ತಾಯಿ ಭಾರತಾಂಬೆಗೇ ಸಲ್ಲಿಕೆಯಾಗಿ, ರಾಷ್ಟ್ರದ ದುಃಖ ಹರಣವಾಗಲಿ ಎಂಬುದು ಎಲ್ಲರ ಆಶಯವಾಗಲಿ.