ಮೇರಿ ಮಿಟ್ಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್.ಚನ್ನಬಸಪ್ಪ ಚಾಲನೆ ನೀಡಿದರು. ಡಾ. ಆರ್.ಸೆಲ್ವಮಣಿ, ಸ್ನೇಹಲ್ ಲೋಖಂಡೆ ಕೆ.ಟಿ.ಕೆ.ಉಲ್ಲಾಸ್ ಇದ್ದರು.  
ನ್ಯೂಸ್

ಮಣ್ಣು ಸಂಗ್ರಹಕ್ಕೆ ಎಲ್ಲರೂ ಕೈಜೋಡಿಸೋಣ: ಬಿ.ವೈ.ರಾಘವೇಂದ್ರ ಕರೆ

ಶಿವಮೊಗ್ಗ: ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತೆತ್ತ ಯೋಧರು, ದೇಶದ ಪರಂಪರೆ ಉಳಿಸಿ ಬೆಳೆಸಿ ಮುನ್ನೆಡೆಸಿದ ರಾಜ ಮಹಾರಾಜರು ಮತ್ತು ನಾಡಿನ ಸಂಸ್ಕಾರ-ಸಂಸ್ಕೃತಿಯ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಲು ಕೇಂದ್ರ ಸರ್ಕಾರ ತಾಲೂಕು ಮಟ್ಟದ ಮೇರಿ ಮಿಟ್ಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆ ಹಮ್ಮಿಕೊಂಡಿದ್ದು ಪ್ರತಿ ಹಳ್ಳಿಗಳಲ್ಲೂ ಯಾತ್ರೆಗೆ ಕೈಜೋಡಿಸಬೇಕಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಕಚೇರಿ ಎದುರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನೆಹರು ಯುವಕೇಂದ್ರ, ತಾಪಂ, ಕುವೆಂಪು ವಿವಿಯ ಎನ್‌ಎಸ್‌ಎಸ್ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಮೇರಿ ಮಿಟ್ಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ಜಿಲ್ಲೆಯ ಶಿಕಾರಿಪುರದ ಈಸೂರು ಗ್ರಾಮ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾಗಿ ದೇಶದ ಗಮನ ಸೆಳೆದಿತ್ತು. ಕೆಳದಿ ಶಿವಪ್ಪ ನಾಯಕರೂ ತಮ್ಮದೇ ಕೊಡುಗೆ ನೀಡಿದ್ದಾರೆ. ಇಡೀ ದೇಶದಲ್ಲಿ ಲಕ್ಷಾಂತರ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಪ್ರಾಣ ತೆತ್ತಿದ್ದಾರೆ. ಅವರಲ್ಲೆರಿಗೂ ಗೌರವ ಸೂಚಿಸಲು ಮೇರಿ ಮಿಟ್ಟಿ ಮೇರಾ ದೇಶ್ ಅಮೃತ ಕಳಶ ಯಾತ್ರೆಯು ಪ್ರಮುಖ ಕಾರ್ಯಕ್ರಮವಾಗಿದೆ. ಎಲ್ಲ ಹಳ್ಳಿಯ ಮಣ್ಣು ಸಂಗ್ರಹಿಸಿ ದೆಹಲಿಯ ಕರ್ತವ್ಯ ಪಥ್‌ನಲ್ಲಿ ಉದ್ಯಾನ ನಿರ್ಮಿಸಲು ಬಳಸಿಕೊಳ್ಳಲಾಗುವುದು ಎಂದು ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಪೇಕ್ಷೆಯಂತೆ ಯುವಶಕ್ತಿಗೆ ಅರಿವು ಮೂಡಿಸುವ ಕೆಲಸವನ್ನು ದೇಶದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಈ ಯೋಜನೆ ಮಾಡಿದೆ. ದೆಹಲಿಯ ಪ್ರಮುಖ ರಸ್ತೆಯಲ್ಲಿ ಕರ್ತವ್ಯ ಪಥ ಎಂದು ಘೋಷಣೆ ಮಾಡಿ ದೇಶದ 8 ಲಕ್ಷ ಗ್ರಾಮಗಳಿಂದ ಸಸಿ ಮತ್ತು ಮಣ್ಣು ತಂದು ಅಲ್ಲಿ ಸಸಿ ನೆಡುವ ಪುಣ್ಯದ ಕಾರ್ಯ ಮಾಡಲಾಗುತ್ತಿದೆ. ಇದರಲ್ಲಿ ಭಾಗವಹಿಸಿದ ಒಂದು ಅವಕಾಶ ನಿಮಗೂ ಸಲ್ಲುತ್ತದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಇದು ಮಣ್ಣು ಮಾತ್ರ ಅಲ್ಲ. ಮಾತೃಭೂಮಿ ಎಂದು ನಾವು ಈ ದೇಶದ ಮಣ್ಣನ್ನು ಪೂಜಿಸುತ್ತೇವೆ. ಉದಾತ್ತ ಭಾವನೆಯಿಂದ ನಾವು ಈ ಮಣ್ಣನ್ನು ಗೌರವಿಸುತ್ತೇವೆ. ಕರ್ತವ್ಯ ಪಥ ಈ ದೇಶಕ್ಕೆ ಮಾತ್ರವಲ್ಲ. ಜಗತ್ತಿಗೇ ಶಕ್ತಿ ತುಂಬುವಂಥದ್ದು ಎಂದರು.
ಈ ಸಂದರ್ಭದಲ್ಲಿ ನಮ್ಮ ದೇಶದ ಸಂವಿಧಾನ ಮತ್ತು ಕಾನೂನು ಪಾಲಿಸುತ್ತೇವೆ. ದೇಶಕ್ಕೆ ಅಪಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳುವುದಿಲ್ಲ. ದೇಶಕ್ಕೆ ಗೌರವ ತರುತ್ತೇವೆ ಎಂದು ಪ್ರಮಾಣ ವಚನ ಸ್ವೀಕರಿಸಲಾಯಿತು.
ನಗರದ ಪ್ರಮುಖ ರಸ್ತೆಗಳಲ್ಲಿ ಅಮೃತ ಕಳಶ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಡಿಸಿ ಡಾ. ಆರ್.ಸೆಲ್ವಮಣಿ, ಜಿಪಂ ಸಿಇಒ ಸ್ನೇಹಲ್ ಲೋಖಂಡೆ, ನೆಹರು ಯುವ ಕೇಂದ್ರದ ಅಧಿಕಾರಿ ಕೆ.ಟಿ.ಕೆ.ಉಲ್ಲಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್, ಭಾರತೀಯ ಅಂಚೆ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಸೇರಿ ಸಾವಿರಕ್ಕೂ ಅಧಿಕ ಮಂದಿ ಅಭಿಯಾನದಲ್ಲಿ ಭಾಗವಹಿಸಿದ್ದರು.