ನ್ಯೂಸ್

ಯತ್ನಾಳ್, ರಮೇಶ್ ಜಾರಕಿಹೊಳಿಗೆ ಉಚ್ಚಾಟಿಸಲಿ: ಮಾಜಿ ಸಚಿವರಿಬ್ಬರ ಒತ್ತಾಯ | Complaint to BJP high command

ಬೆಂಗಳೂರು: ಕಾಂಗ್ರೆಸ್‌ನ ಏಜೆಂಟರಂತೆ ವರ್ತಿಸುತ್ತಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಪಕ್ಷದ ವರಿಷ್ಠರಿಗೆ ದೂರು ಸಲ್ಲಿಸಿ, ಉಚ್ಚಾಟನೆಗೆ ಒತ್ತಾಯಿಸಲು ನಿರ್ಧರಿಸಿರುವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಗದ್ದುಗೆಗೆ ಕಿತ್ತಾಟ, ಡಿನ್ನರ್ ಕೂಟ ನಡೆದಿರುವುದು ಜನರ ಗಮನಕ್ಕೆ ಬಂದಿದೆ. ಇದನ್ನು ಮರೆಮಾಚಲು ಹಿರಿಯ ನಾಯಕರಾದ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಲಂಗುಲಗಾಮಿಲ್ಲದೆ ಮಾತನಾಡಿದ್ದಾರೆ ಎಂದು ದೂರಿದರು.

ಗೌರವ ಕೊಟ್ಟು, ಪಡೆದುಕೊಳ್ಳಬೇಕು, ಯತ್ನಾಳ್ ಹರಕುಬಾಯಿ, ರಮೇಶ್ ಜಾರಕಿಹೊಳಿ ಹಗುರ ಹೇಳಿಕೆಗಳ ವಿರುದ್ಧ ಕ್ರಮಕ್ಕೆ ವರಿಷ್ಠರಿಗೆ ಒತ್ತಾಯಿಸುತ್ತೇವೆ. ಮುಂದಿನ ಶನಿವಾರ ಸಭೆ ಸೇರಿ ಚರ್ಚಿಸಿ ವರಿಷ್ಠರ ಬಳಿಗೆ ತೆರಳಿ ದೂರು ನೀಡಲು ನಿರ್ಧರಿಸುತ್ತೇವೆ ಎಂದು ರೇಣುಕಾಚಾರ್ಯ ತಿಳಿಸಿದರು.

ವರ್ಚಸ್ಸಿಗೆ ಧಕ್ಕೆ

ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮಾತನಾಡಿ ಲಘು ಹೇಳಿಕೆಗಳು, ಬೀದಿಯಲ್ಲಿ ಅರಚಾಡುವುದರಿಂದ ರಾಜಕೀಯ ನಾಯಕ ಅನ್ನಲ್ಲ. ಯತ್ನಾಳ್, ರಮೇಶ್ ಜಾರಕಿಹೊಳಿಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿದರು.

ಇಬ್ಬರಿಗೂ ಪಕ್ಷದ ಸಿದ್ಧಾಂತ, ಸಂಸ್ಕಾರವಿಲ್ಲ. ಪಕ್ಷದ ಮರ್ಯಾದೆ ಬೀದಿಯಲ್ಲಿ ಹರಾಜು ಹಾಕುತ್ತಿದ್ದು, ಯಾವತ್ತೋ ಉಚ್ಚಾಟಿಸಬೇಕಾಗಿತ್ತು. ಈ ವರ್ತನೆ ಬಗ್ಗೆವರಿಷ್ಠರಿಗೆ ದೂರು ಸಲ್ಲಿಕೆ ನಿಶ್ಚಿತವೆಂದರು.