ನ್ಯೂಸ್

ಯಕ್ಷಗಾನ ರಾಜ್ಯದ ಕಲೆಯಾಗಲಿ: ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ

ಬೆಂಗಳೂರು ಯಕ್ಷಗಾನ ಕರ್ನಾಟಕದ ವಿಶಿಷ್ಟ ಕಲೆಯಾಗಿದೆ. ಒಂದು ಕಾಲಕ್ಕೆ ಉತ್ತರ ಕರ್ನಾಟಕ, ಹಳೆ ಮೈಸೂರು ಭಾಗ, ಮಲೆನಾಡು ಪ್ರದೇಶದಲ್ಲಿಯೂ ಪ್ರದರ್ಶನಗೊಳ್ಳುತ್ತಿತ್ತು. ಆದರೆ ಇಂದು ಕರಾವಳಿ ಕಲೆಯಾಗಿ ಬಿಂಬಿತವಾಗುತ್ತಿದ್ದು, ಇದನ್ನು ಕರ್ನಾಟಕದ ಕಲೆಯಾಗಿಸಬೇಕಿದೆ ಎಂದು ವಿಮರ್ಶಕ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಭಾನುವಾರ ಡಾ. ಆನಂದರಾಮ ಉಪಾಧ್ಯ ಅವರ ರಚಿತ ‘ಯಕ್ಷ ಸಂಕಾಶ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 15-16ನೇ ಶತಮಾನದ ಕನ್ನಡ ಸಾಹಿತ್ಯವನ್ನು ಗಮನಿಸಿದಾಗ ಅನೇಕ ಪ್ರಯೋಗಗಳನ್ನು ಕಾಣುತ್ತೇವೆ. ಕುಮಾರವ್ಯಾಸ ಭಾಮಿನಿ ಷಟ್ಬದಿಯನ್ನು ಬರೆದ, , ರತ್ನಾಕರವರ್ಣಿ ಸಾಂಗತ್ಯ, ಸರ್ವಜ್ಞ ತ್ರಿಪದಿ, ಕನಕದಾಸ ಮತ್ತು ಪುರುಂದರದಾಸರು ಕೀರ್ತನೆಗಳನ್ನು ರಚನೆ ಮಾಡಿದರು. ಅದೇ ಕಾಲದಲ್ಲಿ ಯಕ್ಷ ಕವಿ ಕೆಂಪಣ್ಣಗೌಡ ಯಕ್ಷಗಾನದ ಕುರಿತು ಬರೆದ ಶನಿಮಹಾತ್ಮೆ, ನಳಚರಿತೆ, ಕರಿರಾಯ ಚರಿತೆ ಕಾವ್ಯ ನಮಗೆ ಅಪರಿಚಿತವಾಗಿದೆ. ಇದನ್ನು ರಚಿಸಿದವರು ಮಂಡ್ಯ ಭಾಗದ ಕೆಂಪಣ್ಣಗೌಡ ಎಂಬುದನ್ನು ತಿಳಿಯಬೇಕಿದೆ ಎಂದರು.

ಇಡೀ ರಾಜ್ಯದಲ್ಲಿ ಪಡುವಲಪಾಳ್ಯ, ಮೂಡಲಪಾಳ್ಯದ ಪ್ರಕಾರಗಳಿದ್ದವು. ಇಂದು ಪಡುವಲ ಪಾಳ್ಯ ಬೆಳೆಯುತ್ತಿದ್ದು, ಮೂಡಲ ಪಾಳ್ಯ ಕ್ಷೀಣಿಸುತ್ತಿದೆ. ಆದ್ದರಿಂದ ಯಕ್ಷಗಾನ ಕರಾವಳಿಗೆ ಮಾತ್ರ ಸೀಮಿತಗೊಳಿಸಬಾರದು ಎಂದರು.

ಲಾಂಛನ ಕಲೆಯಾಗಲಿ:

ಯಕ್ಷಗಾನವನ್ನು ಕರ್ನಾಟಕದ ಲಾಂಛನ ಕಲೆಯಾಗಿಸಿದರೆ ಕೂಡ ತಪ್ಪಲ್ಲ. ಹೊರಜಗತ್ತಿಗೆ ಯಕ್ಷಗಾನ ಕರ್ನಾಟಕದ ಅಸ್ಮಿತೆಯಾಗಿ ಕಾಣಬೇಕಿದೆ. ಸರ್ಕಾರದ ಹಂಗಿಲ್ಲದೆ ಜನರೇ ಪೋಷಿಸಿ ಬೆಳೆಸುತ್ತಿರುವ ಕಲೆ ಎಂದರೆ ಅದು ಯಕ್ಷಗಾನವಾಗಿದೆ ಎಂದರು.

ಸಾಹಿತ್ಯ ಪ್ರಕಾರವಾಗಿ ಚರ್ಚೆಯಾಗಲಿ:

ಯಕ್ಷಗಾನ ಪ್ರದರ್ಶನ ಕಲೆಯಾಗಿ ಪ್ರಸಿದ್ಧವಾಗಿದೆ. ಆದರೆ, ಸಾಹಿತ್ಯ ಪ್ರಕಾರವಾಗಿ ಚರ್ಚೆಯಾಗಿಲ್ಲ. ಕೆಂಪಣ್ಣಗೌಡ ಅವರು ಯಕ್ಷಗಾನ ಮಹಾಭಾರತ, ರಾಮಾಯಣ ಸೇರಿ ಅಧ್ಯಯನ ಮಾಡಿದ್ದರು. ಯಕ್ಷಗಾನದ ಕುರಿತು ಪ್ರೀತಿ, ಅಭಿಮಾನದಿಂದ ಮಾತನಾಡುವವರು ಹೆಚ್ಚಿದ್ದಾರೆ. ಆದರೆ, ವಿಮರ್ಶಾತ್ಮಕವಾಗಿ ಮಾತನಾಡುವವರು ಅಪರೂಪವಾಗಿದ್ದಾರೆ. ಇಂತಹ ಸಮಯದಲ್ಲಿ ಉಪಾಧ್ಯ ಅವರು ಯಕ್ಷಗಾನದ ಬಗ್ಗೆ ಪ್ರೀತಿಯನ್ನಿಟ್ಟುಕೊಂಡು ಅಧ್ಯಯನ ನೆಲೆಯಲ್ಲಿ ಪುಸ್ತಕ ರಚನೆ ಮಾಡಿರುವುದು ಆರೋಗ್ಯಕರ ಬೆಳವಣಿಗೆ ಎಂದು ಶ್ಲಾಸಿದರು.

ಕಾರ್ಯಕ್ರಮದಲ್ಲಿ ಪತ್ರಕರ್ತ ಜೋಗಿ ಉಪಸ್ಥಿತರಿದ್ದರು.

ಯಕ್ಷಗಾನದ ಮುಮ್ಮೇಳ ಹಾಗೂ ಹಿಮ್ಮೇಳ ಕಲಾವಿದರು ಪ್ರಸಿದ್ಧರಾಗುತ್ತಿದ್ದಾರೆ. ಆದರೆ, ಪ್ರಸಂಗ ಬರೆದವರ ಹೆಸರು ಯಾರಿಗೂ ಗೊತ್ತಾಗುತ್ತಿಲ್ಲ. ಕೊನೇ ಪಕ್ಷ ಪ್ರಸಂಗ ಬರೆದವರ ಹೆಸರನ್ನು ಹಾಕಿ ಆಟದಲ್ಲಿ ಅವರಿಗೆ ಗೌರವ ಸಲ್ಲಿಸಬೇಕು. - ಡಾ. ತಲ್ಲೂರು ಶಿವರಾಮಶೆಟ್ಟಿ, ಅಧ್ಯಕ್ಷ, ಯಕ್ಷಗಾನ ಅಕಾಡೆಮಿ