ತಿ.ನರಸೀಪುರ : ಸಶಕ್ತ ಸಮಾಜವನ್ನು ನಿರ್ಮಾಣ ಮಾಡಲು ಮಹಿಳೆಯರು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಬೇಕು. ಎಲ್ಲ ಕ್ಷೇತ್ರಗಳಲ್ಲೂ ಪಾಲ್ಗೊಳ್ಳುತ್ತಿರುವ ಮಹಿಳೆಯರಿಗೆ ಉತ್ತಮ ಸಮಾಜವನ್ನು ಕಟ್ಟುವ ಜವಾಬ್ದಾರಿ ಇದೆ ಎಂದು ಸಂಜೀವಿನಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷೆ ರುದ್ರಮ್ಮ ತಿಳಿಸಿದರು.
ಪಟ್ಟಣದ ಚಿಕ್ಕಮ್ಮತಾಯಿ ಯಾತ್ರಿ ಭವನದಲ್ಲಿ ಶನಿವಾರ ತಾಲೂಕು ಸಂಜೀವಿನಿ ಗ್ರಾ.ಪಂ. ಮಟ್ಟದ ಮಹಿಳಾ ನೌಕರರ ಒಕ್ಕೂಟ(ಎಂಬಿಕೆ, ಎಲ್ ಸಿ ಆರ್ ಪಿ, ಕೃಷಿಸಖಿ, ಪಶುಸಖಿ)ದ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಟುಂಬದ ಚೌಕಟ್ಟಿಗೆ ಸೀಮಿತವಾಗಿದ್ದ ಮಹಿಳೆಗೆ ಬದಲಾದ ಸನ್ನಿವೇಶದಲ್ಲಿ ಕಾಲ ಕ್ರಮೇಣ ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ದಾಪುಗಾಲು ಹಾಕುತ್ತಿದ್ದಾಳೆ. ಜಾಗತಿಕ ಕಾಲಘಟ್ಟದಲ್ಲಿ ಪ್ರತಿಯೊಬ್ಬ ಮಹಿಳೆಯರು ಸ್ವತಂತ್ರರಾಗಿ ಸಬಲರಾಗಿದ್ದಾರೆ. ಪುರುಷರಷ್ಟೇ ಸಮಾನತೆ ಹೊಂದಿದ್ದಾಳೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದರಿಂದಲೇ ದೇಶದ ಅತ್ಯುನ್ನತ ಹುದ್ದೆ ರಾಷ್ಟ್ರಪತಿ ಸೇರಿದಂತೆ ಸಚಿವ ಸಂಪುಟಗಳಲ್ಲಿ ಉನ್ನತ ಸ್ಥಾನವನ್ನು ಪಡೆದು ಆಡಳಿತ ನಡೆಸುವ ಅವಕಾಶ ಸಿಕ್ಕಿದೆ ಎಂದರು.
ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗೆ ಆಯೋಜಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಸೇವಾಶ್ರಯ ಫೌಂಡೇಶನ್ ಅಧ್ಯಕ್ಷ ಆರ್.ಮಣಿಕಂಠರಾಜ್ ಗೌಡ, ಕಲಾ ಟ್ರಸ್ಟ್ ಅಧ್ಯಕ್ಷ ಸೋಸಲೆ ಶಶಿಕಾಂತ್, ಬೃಂದಾ ಆಸ್ಪತ್ರೆಯ ವ್ಯವಸ್ಥಾಪಕ ಗುರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಸಂಘದ ಜಿಲ್ಲಾಧ್ಯಕ್ಷೆ ಸರೋಜಮ್ಮ, ಸಂಜೀವಿನಿ ಕಾರ್ಯಕ್ರಮ ವ್ಯವಸ್ಥಾಪಕಿ ರೂಪಶ್ರೀ, ಗ್ರಾ.ಪಂ. ಮಾಜಿ ಅಧ್ಯಕ್ಷೆ ಚಂದ್ರಮ್ಮ, ಗ್ರಾ.ಪಂ. ಮಟ್ಟದ ಮಹಿಳಾ ನೌಕರರ ಒಕ್ಕೂಟದ ಪದಾಧಿಕಾರಿಗಳಾದ ಶಾಂತಮ್ಮ, ಕೋಮಲಾ, ಸಾಕಮ್ಮ, ಶ್ವೇತಾ, ರೋಜಾ, ಹೊನ್ನಮ್ಮ, ತ್ರಿವೇಣಿ ನಗರ ಮಹದೇವಮ್ಮ,ಬೈರಾಪುರ ಮಹದೇವಮ್ಮ, ನಾಡನಹಳ್ಳಿ ಚಂದ್ರಶೇಖರ್ ಹಾಗೂ ಇತರರು ಇದ್ದರು.