ಒಕ್ಕಲಿಗರ ಮಹಿಳಾ ವೇದಿಕೆಯಿಂದ ಏರ್ಪಡಿಸಿದ್ದ ಸಾಂಪ್ರದಾಯಿಕ ಸಸ್ಯಾಹಾರಿ ಖಾದ್ಯಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶಾಂತಾ ಸುರೇಂದ್ರ, ಪ್ರತಿಮಾ ಡಾಕಪ್ಪ, ವಿಜಯಕುಮಾರ್, ಎಚ್.ಎಸ್.ಸುಂದರೇಶ್ ಮುಂತಾದವರಿದ್ದರು. 
ನ್ಯೂಸ್

ಮಹಿಳೆಯರು ಕೀಳರಿಮೆ ತೊರೆದು ಸಂಸ್ಕೃತಿ ಪ್ರಸಾರ ಮಾಡಲಿ

ಶಿವಮೊಗ್ಗ: ಇಂದು ಬಹುತೇಕ ಮಂದಿ ಶ್ರಮ ಜೀವನಕ್ಕೆ ಬೆನ್ನು ತೋರಿಸುತ್ತಿದ್ದಾರೆ. ರೈತರ ಮಕ್ಕಳಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಮಕ್ಕಳನ್ನು ಹೆರುವ, ಪೋಷಿಸುವ ಪರಿಶ್ರಮವೇ ಬೇಡ ಎಂಬ ನಿರ್ಧಾರಕ್ಕೆ ಹಲವು ದಂಪತಿಗಳು ಬಂದಿದ್ದಾರೆ. ಒಟ್ಟಾರೆ ಸಾಮಾಜಿಕ, ಸಾಂಸಾರಿಕ ವ್ಯವಸ್ಥೆ ವ್ಯತಿರಿಕ್ತ ದಿಕ್ಕಿನತ್ತ ಸಾಗುತ್ತಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಕಳವಳ ವ್ಯಕ್ತಪಡಿಸಿದರು.

ಅಖಿಲ ಕರ್ನಾಟಕ ರಾಜ್ಯ ಒಕ್ಕಲಿಗರ ಮಹಿಳಾ ವೇದಿಕೆಯಿಂದ ಏರ್ಪಡಿಸಿದ್ದ ಸಾಂಪ್ರದಾಯಿಕ ಸಸ್ಯಾಹಾರಿ ಖಾದ್ಯಗಳ ಪ್ರಾತ್ಯಕ್ಷಿಕೆ, ಸಾಮಾನ್ಯ ಜ್ಞಾನದ ರಸಪ್ರಶ್ನೆ ಸ್ಪರ್ಧೆ ಹಾಗೂ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರೈತರ ಗಂಡು ಮಕ್ಕಳಿಗೆ ಮದುವೆಯಾಗದೇ ಇರುವುದು ರೈತಾಪಿ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಇಂದು ಮಕ್ಕಳ ಜನನ ಸಂಖ್ಯೆ ಕಡಿಮೆಯಾಗುತ್ತಿದೆ. ಇರುವ ಒಂದು ಮಗುವನ್ನು ಆರೈಕೆ ಮಾಡಲು ಆಳುಗಳನ್ನು ನೇಮಿಸುವ ಪರಿಸ್ಥಿತಿಯಿದೆ. ಒಟ್ಟಾರೆಯಾಗಿ ಕುಟುಂಬ ವ್ಯವಸ್ಥೆಯ ಬಗ್ಗೆ ಚಿಂತನೆ ಮಾಡಬೇಕಾದ ಸಂಕೀರ್ಣ ಕಾಲಘಟ್ಟ ಇದಾಗಿದೆ ಎಂದರು.

ಮಹಿಳಾ ಸಂಘಟನೆಗಳು ಇಂದಿನ ಸಾಂಸಾರಿಕ ಹಾಗೂ ಸಾಮಾಜಿಕ ಬಿಕ್ಕಟ್ಟುಗಳ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸಿ ನಮ್ಮ ಸಂಸ್ಕಾರ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಸ್ತ್ರೀಶಕ್ತಿ ರಾಷ್ಟ್ರೀಯ ಶಕ್ತಿಯಾಗಬೇಕು, ಮಹಿಳೆಯರು ಕೀಳರಿಮೆಯಿಂದ ಹೊರಗೆ ಬಂದು ಈ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಮ್ಮ ದೇಶದಲ್ಲಿ ಮಹಿಳೆಯರಿಗೆ ಸನಾತನ ಕಾಲದಿಂದಲೂ ಗೌರವದ ಸ್ಥಾನ ನೀಡಲಾಗಿದೆ. ಇಂದು ಎಲ್ಲ ರಂಗಗಳಲ್ಲೂ ಮಹಿಳೆಯರು ಅಗ್ರಸ್ಥಾನದಲ್ಲಿದ್ದಾರೆ. ಅವಕಾಶ ಸಿಕ್ಕರೆ ಏನು ಬೇಕಾದರೂ ಸಾಧನೆ ಮಾಡುತ್ತೇವೆ ಎಂಬುದನ್ನು ಸಾಬೀತು ಮಾಡಿದ್ದಾರೆ. ನಾನು ಗೃಹಮಂತ್ರಿಯಾಗಿದ್ದಾಗ ಮಹಿಳಾ ಕಾನ್‌ಸ್ಟೆಬಲ್‌ನಿಂದ, ಮಹಿಳಾ ಐಪಿಎಸ್ ಅಧಿಕಾರಿಗಳ ಕಾರ್ಯಕ್ಷಮತೆ ಗುರುತಿಸಿದ್ದೇನೆ ಎಂದರು.

ಆದಿಚುಂಚನಗಿರಿ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಶಿವಮೊಗ್ಗ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯಕುಮಾರ್, ಒಕ್ಕಲಿಗರ ಮಹಿಳಾ ವೇದಿಕೆ ಅಧ್ಯಕ್ಷೆ ಶಾಂತಾ ಸುರೇಂದ್ರ, ಜಿಲ್ಲಾಧ್ಯಕ್ಷೆ ಪ್ರತಿಮಾ ಡಾಕಪ್ಪ ಗೌಡ, ಯುವ ವೇದಿಕೆ ಜಿಲ್ಲಾಧ್ಯಕ್ಷ ರಘುರಾಜ್ ಭಾಗವಹಿಸಿದ್ದರು.