ಸೊರಬ: ಗ್ರಾಮ ನಿರ್ಣಯದ ಮೂಲಕ ಗ್ರಾಮದ ಸಾರ್ವಜನಿಕ ಭೂಮಿಯನ್ನು ಉಳಿಸಿಕೊಳ್ಳಲು ಅವಕಾಶವಿದೆ. ಗ್ರಾಮ ನಿರ್ಣಯವನ್ನು ಗ್ರಾಪಂ ಜೀವವೈವಿಧ್ಯ ಸಮಿತಿ ಅಂಗೀಕರಿಸಿ ರಕ್ಷಣೆಗೆ ಸಹಕರಿಸಬಹುದು ಎಂದು ಪಶ್ಚಿಮಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.
ತಾಲೂಕಿನ ಚಂದ್ರಗುತ್ತಿ ಗ್ರಾಪಂ ಕಚೇರಿ ಆವರಣದಲ್ಲಿ ಮಂಗಳವಾರ ಗಿಡನೆಟ್ಟು ಅರಣ್ಯಭೂಮಿ, ಬೆಟ್ಟ, ಗೋಮಾಳ ರಕ್ಷಣೆ ಕುರಿತಂತೆ ಆಸಕ್ತಿ ತೋರಿರುವ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿದರು.
ಈ ಹಿಂದೆ ಬಸ್ತಿಕೊಪ್ಪದಲ್ಲಿ ಗಣಿಗಾರಿಕೆ ವಿರೋಧಿಸಿ ಗ್ರಾಮಸ್ಥರು ಸಾಮೂಹಿಕ ಪ್ರತಿಭಟನೆ ನಡೆಸಿದ ಪರಿಣಾಮ ಗಣಿಯಿಂದಾಗುವ ಹಾನಿ ನಿಯಂತ್ರಣಕ್ಕೆ ಬಂದಿದೆ. ಆ ವೇಳೆ ತಾಲೂಕು ಜೀವವೈವಿಧ್ಯ ನಿರ್ವಹಣಾ ಸಮಿತಿ, ಗ್ರಾಪಂ ಜೀವವೈವಿಧ್ಯ ಸಮಿತಿ ಹಾಗೂ ಗ್ರಾಮಾಭಿವೃದ್ಧಿ ಸಮಿತಿ ಶಿಬಿರ ನಡೆಸಿ ಮೂಲ ಸೌಕರ್ಯ ಕೊರತೆ ನೀಗಿಸಲು ಮುಂದಾಗಿದೆ. ಆದರೂ ಇಂದಿಗೂ ಸಮರ್ಪಕ ಸಂಪರ್ಕ ರಸ್ತೆ ಇಲ್ಲ. ಸ್ಥಳೀಯ ಆಡಳಿತ ಈ ಬಗ್ಗೆ ಹೆಚ್ಚಿನ ನಿಗಾವಹಿಸುವ ಅಗತ್ಯವಿದೆ ಎಂದರು.
ಹೊಳೆಮರೂರು ಗ್ರಾಮಸ್ಥರು ಅಪಾರ ಪ್ರಮಾಣದ ಅರಣ್ಯ ನಾಶ ತಡೆಗಟ್ಟಿ ಮಾದರಿಯಾಗಿದ್ದಾರೆ. ಈಚೆಗೆ ತೋರಣಗೊಂಡನಕೊಪ್ಪ ಗ್ರಾಮಸ್ಥರು ಸಹ ತಮ್ಮ ಗ್ರಾಮದ ಭೂಮಿ, ಅರಣ್ಯ ಉಳಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ಸದಸ್ಯ ಶ್ರೀಪಾದ ಬಿಚ್ಚುಗತ್ತಿ ಮಾತನಾಡಿ, ಗ್ರಾಮಸ್ಥರ ಸಹಕಾರವಿದ್ದರೆ ಆ ಗ್ರಾಮಗಳ ಸಾರ್ವಜನಿಕ ಭೂಮಿ ಉಳಿವಿಗೆ ಜೀವವೈವಿಧ್ಯ ಸಮಿತಿ, ಮಂಡಳಿಯ ಸಹಕಾರವಿದೆ. ಪ್ರಸ್ತುತ ಪ್ರಕೃತಿ ವೈಪರೀತ್ಯದ ನಿಯಂತ್ರಣಕ್ಕೆ ಗ್ರಾಮ ಮಟ್ಟದಲ್ಲಿ ಜಾಗೃತಿ ಆಗಬೇಕಿದೆ. ಜೂ.23ರಂದು ಶಿರಸಿಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯ ರಾಜ್ಯ ಸಮ್ಮೇಳನ ನಡೆಯಲಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಸರಿತಾ ಕೃಷ್ಣಪ್ಪ, ಸದಸ್ಯೆ ಲಕ್ಷ್ಮೀ ಚಂದ್ರಪ್ಪ, ಪಿಡಿಒ ನಾರಾಯಣಮೂರ್ತಿ, ತೋರಣಗೊಂಡನಕೊಪ್ಪ ದಿನೇಶ್, ವಿಷ್ಣು, ಹೊಳೆಮರೂರು ಗಂಗಾಧರ ಗೌಡ, ಚಂದ್ರಗುತ್ತಿ ವಿನಾಯಕ ಶೇಟ್, ಗ್ರಾಪಂ ನೌಕರರಾದ ಸಂತೋಷ್, ಮಂಜುನಾಥ್ ಇತರರಿದ್ದರು.