ನ್ಯೂಸ್

ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸೋಣ, ಎಂಟಿಬಿಯಿಂದ ಗಣರಾಜ್ಯೋತ್ಸವ ಸಂದೇಶ

ಹೊಸಕೋಟೆ: ಭಾರತ ಜಗತ್ತಿನಲ್ಲೇ ಪ್ರಬುದ್ಧ ಹಾಗೂ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ, ಯುವಜನತೆ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದೇಶದ ಸರ್ವಾಂಗೀಣ ಪ್ರಗತಿಗೆ ಕೈಜೋಡಿಸಬೇಕು ಎಂದು ಪೌರಾಡಳಿತ ಹಾಗೂ ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಕರೆ ನೀಡಿದರು.

ಹೊಸಕೋಟೆ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವ ಸಂದೇಶ ಸಾರಿ ಮಾತನಾಡಿದರು. ದೇಶದ ನಾಗರಿಕರಾಗಿ ನಾವೆಲ್ಲ ದೇಶದ ಪರಂಪರೆ ಉಳಿಸಿ ಬೆಳೆಸಬೇಕು. ಸಂಕುಚಿತ ಭಾವನೆಗಳಿಂದ ಹೊರಬಂದು ಐಕ್ಯತೆಯ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕಿದೆ. ಎಲ್ಲರೂ ಒಗ್ಗಟ್ಟಿನಿಂದ ಪ್ರಜಾಪ್ರಭುತ್ವದ ಬೇರುಗಳನ್ನು ಬಲಗೊಳಿಸಲು ಮುಂದಾಗಬೇಕಿದೆ ಎಂದರು.

2020ರ ಆರಂಭದಲ್ಲೇ ಬಂದೆರಗಿದ ಕರೊನಾ ವಿಶ್ವವನ್ನೇ ತಲ್ಲಣಗೊಳಿಸಿದೆ. ಇಂಥ ರಾಷ್ಟ್ರೀಯ ವಿಪತ್ತಿನ ಸಮಯದಲ್ಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರ ನೆರವಿಗೆ ನಿಂತು ಆತ್ಮವಿಶ್ವಾಸ ಮೂಡಿಸಿ ಪ್ರಸ್ತುತ ಲಸಿಕೆ ವಿತರಣೆ ಮೂಲಕ ಸೋಂಕಿಗೆ ಇತಿಶ್ರೀ ಹಾಡಲಾಗುತ್ತಿದೆ. ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಡಳಿತವನ್ನು ಶ್ಲಾಸಲು ಹೆಮ್ಮೆ ಎನಿಸುತ್ತದೆ ಎಂದು ಹೇಳಿದರು.

ಕರೊನಾದಂಥ ವಿಪತ್ತಿನ ಸಂದರ್ಭದಲ್ಲಿ ನಾಡಿನ ಅಭಿವೃದ್ಧಿ ಮುಂದುವರಿಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದ್ದರೂ ಸವಾಲನ್ನು ಎದುರಿಸಿ ಅಭಿವೃದ್ಧಿ ಕಾರ್ಯಗಳನ್ನು ಮುನ್ನೆಡೆಸಿಕೊಂಡು ಹೋಗುವುದು ಸರ್ಕಾರಗಳ ಕರ್ತವ್ಯವಾಗಿದೆ. ಯುದ್ದೋಪಾದಿಯಲ್ಲಿ ಕರೊನಾ ಲಸಿಕೆ ವಿತರಣೆ ನಡೆಯುತ್ತಿದ್ದು, ಕರೊನಾ ಸೋಂಕು ತೀವ್ರಗತಿಯಲ್ಲಿ ಹತೋಟಿಗೆ ಬಂದಿದೆ. ಸಾರ್ವಜನಿಕ ಜೀವನವೂ ಸಹಜ ಸ್ಥಿತಿಯತ್ತ ಮರಳುತ್ತಿರುವುದು ನಿರಾಳ ಮೂಡಿಸಿದೆ ಎಂದರು.

ನರೇಗಾದಲ್ಲಿ ಸಾಧನೆ: ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ತಾಲೂಕಿನಲ್ಲಿ 5 ಲಕ್ಷ 36 ಸಾವಿರ ಗಂಟೆಗಳನ್ನು ನರೇಗಾ ಯೋಜನೆಯಲ್ಲಿ ಕೆಲಸ ಮಾಡುವ ಮೂಲಕ ತಾಪಂಗೆ ನೀಡಿದ್ದ ನಿಗದಿಯನ್ನೂ ಮೀರಿ ಶೇ.150 ಸಾಧನೆ ಮಾಡಿ ಜಿಲ್ಲೆಯಲ್ಲಿ ಅಗ್ರಸ್ಥಾನದಲ್ಲಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯತಿಗಳಲ್ಲಿ ವಿಜೇತರಾದ ಪಂಚಾಯತಿ ಸದಸ್ಯರು ಮಹಾತ್ಮಾ ಗಾಂಧಿ ಕಂಡ ಗ್ರಾಮ ಸ್ವರಾಜ್ ಕನಸನ್ನು ನನಸಾಗಿಸಲು ಶ್ರಮಿಸಬೇಕು ಎಂದರು.

ತಹಸೀಲ್ದಾರ್ ಗೀತಾ ಮಾತನಾಡಿ, ಭಾರತ ಬ್ರಿಟಿಷರಿಂದ ಮುಕ್ತಿ ಹೊಂದಲು ದೇಶದ ಹಲವಾರು ನಾಯಕರು ಪ್ರಾಣ ಬಲಿದಾನ ನೀಡಿದ್ದಾರೆ. ಇದನ್ನು ಪ್ರತಿಯೊಬ್ಬ ಯುವಕರೂ ಅರ್ಥಮಾಡಿಕೊಂಡು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಜಿಪಂ ಸದಸ್ಯರಾದ ಎನ್ ನಾಗರಾಜ್, ವೈ ಎಸ್ ಎಂ ಮಂಜುನಾಥ್, ರೂಪಾ ಮರಿಯಪ್ಪ, ತಾಪಂ ಅಧ್ಯಕ್ಷ ಜಯದೇವಯ್ಯ, ತಾಪಂ ಸದಸ್ಯ ಡಿ.ಟಿ.ವೆಂಕಟೇಶ್, ನಗರಸಭೆ ಅಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷೆ ಶೋಭಾ ಜುಂಜಪ್ಪ, ಸ್ಥಾಯಿ ಸಮಿತಿ ಸದಸ್ಯ ಸೋಮಶೇಖರ್, ಭಾರತ ಸರ್ಕಾರದ ಕಾರ್ಮಿಕ ಭವಿಷ್ಯ ನಿಧಿ ಸದಸ್ಯ ವಿಜಯ್ ಕುಮಾರ್, ರೈಲ್ವೆ ಬೋರ್ಡ್ ಸದಸ್ಯ ಇಟ್ಟಸಂದ್ರ ಗೋಪಾಲ್ ಹಾಜರಿದ್ದರು.