ಮೇ 17ಕ್ಕೆ ದಿಗ್ಬಂಧನ 3.0 ಮುಗಿಯುತ್ತಿದ್ದಂತೆ ನಾಲ್ಕನೇ ಹಂತ ಹೇಗಿರಲಿದೆ ಎಂಬುದರ ಕುತೂಹಲ ಮೂಡಿತ್ತು. ಅದರಲ್ಲೂ, ಪ್ರಧಾನಿ ನರೇಂದ್ರ ಮೋದಿ ಕೆಲ ದಿನಗಳ ಹಿಂದೆಯೇ ‘ಲಾಕ್ಡೌನ್ 4.0 ಸ್ವರೂಪ ಭಿನ್ನವಾಗಿ ಇರಲಿದೆ’ ಎಂದು ಹೇಳಿಬಿಟ್ಟಿದ್ದರು. ಭಾನುವಾರ ಸಂಜೆ ಕೇಂದ್ರ ಗೃಹ ಸಚಿವಾಲಯ ಮಾರ್ಗಸೂಚಿ ಹೊರಡಿಸಿ, ರಾಜ್ಯಗಳಿಗೆ ವಿವೇಚನಾಯುಕ್ತ ಅಧಿಕಾರವನ್ನು ನೀಡಿತು. ಸೋಮವಾರ ಪೂರ್ವಾಹ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸಚಿವರ, ಅಧಿಕಾರಿಗಳ ಸಭೆ ನಡೆಯಿತು. ಆ ಬಳಿಕ ಮುಖ್ಯಮಂತ್ರಿಗಳು ಅದರ ವಿವರಗಳನ್ನು ನೀಡಿದಾಗ ಜನಜೀವನವನ್ನು ಮತ್ತೆ ಸಹಜಸ್ಥಿತಿಗೆ ತರುವ ಆಶಯ ಮುಖ್ಯವಾಗಿ ಕಂಡುಬಂತು. ಲಾಕ್ಡೌನ್ ಮೇ 31ರವರೆಗೆ ವಿಸ್ತರಣೆ ಮಾಡಲಾಗಿದೆ. ಆದರೆ, ಇಂದಿ ನಿಂದ (ಮಂಗಳವಾರ) ಕೆಂಪು ವಲಯ ಮತ್ತು ಕಂಟೇನ್ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆಗಳಲ್ಲಿ ಖಾಸಗಿ ಬಸ್ಸುಗಳು, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳ ಸಂಚಾರ ಆರಂಭವಾಗಲಿದೆ. ಮತ್ತು ಸಂಪೂರ್ಣ ವಾಣಿಜ್ಯ ಚಟುವಟಿಕೆಗೆ ಅವಕಾಶ (ಮಾಲ್, ಚಿತ್ರಮಂದಿರ ಹೊರತುಪಡಿಸಿ) ನೀಡಲಾಗಿದೆ. ರಾಜ್ಯದೊಳಗೇ ರೈಲು ಸಂಚಾರವೂ ಆರಂಭವಾಗಲಿದೆ.
ಕರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವಾಗ ಲಾಕ್ಡೌನ್ನಲ್ಲಿ ಇಷ್ಟು ಸಡಿಲಿಕೆ ಬೇಕಿತ್ತೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಆದರೆ, ಈಗಾಗಲೇ 55 ದಿನಗಳ ದಿಗ್ಬಂಧನವನ್ನು ಪರಿಣಾಮಕಾರಿಯಾಗಿಯೇ ಪಾಲಿಸಿಕೊಂಡು ಬರಲಾಗಿದೆ ಎಂಬುದನ್ನು ಮರೆಯುವಂತಿಲ್ಲ. ಕರೊನಾದೊಂದಿಗೆ ಒಂದಿಷ್ಟು ಕಾಲ ಬದುಕುವ ಅಭ್ಯಾಸ ಮಾಡಿಕೊಳ್ಳಬೇಕಿದೆ ಎಂದು ಪ್ರಧಾನಿಯೂ ಹೇಳಿದ್ದಾಗಿದೆ. ಅಲ್ಲದೆ, ಸೋಂಕು ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿದ್ದಂತೆ ಕ್ರಮೇಣ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಬಹುದು ಎಂದು ತಜ್ಞರೂ ಹೇಳಿದ್ದಾರೆ. ಅಷ್ಟಕ್ಕೂ, ಕರ್ನಾಟಕ ಸೇರಿ ಇಡೀ ದೇಶದಲ್ಲಿ ದೀರ್ಘಾವಧಿಗೆ ದಿಗ್ಬಂಧನ ಮುಂದುವರಿಸಲು ಸಾಧ್ಯವಿಲ್ಲ. ಈಗಾಗಲೇ ಬಹುತೇಕ ರಂಗಗಳು ಆರ್ಥಿಕ ನಷ್ಟದಿಂದ ಬಳಲುತ್ತಿದ್ದು, ಅವುಗಳಿಗೆ ಉಸಿರು ತುಂಬಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಪ್ರಕಟಿಸಿವೆ. ಇನ್ನಷ್ಟು ಅವಧಿಗೆ ದಿಗ್ಬಂಧನ ಮುಂದುವರಿಸಿದ್ದೆ ಆದರೆ ಅದರಿಂದ ಆಗುವ ಹಾನಿ ಅಷ್ಟಿಷ್ಟಲ್ಲ.
‘ಜೀವವೂ ಉಳಿಯಬೇಕು; ಜೀವನವೂ ಸಾಗಬೇಕು’ ಎಂಬುದು ಈಗಿನ ಸ್ಥಿತಿ. ಈ ನಿಟ್ಟಿನಲ್ಲಿ ಆರ್ಥಿಕ ಚಟುವಟಿಕೆಗಳು ಆರಂಭಗೊಳ್ಳಬೇಕು. ಅದಕ್ಕಾಗಿ ವಾಣಿಜ್ಯ ವಹಿವಾಟುಗಳು ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಬೇಕು. ಈ ಉದ್ದೇಶದಿಂದಲೇ ಹೊಸ ಸ್ವರೂಪದಲ್ಲಿ ನಾಲ್ಕನೇ ಹಂತದ ದಿಗ್ಬಂಧನ ಜಾರಿಗೆ ಬಂದಿದೆ. ಸರ್ಕಾರ ಹಲವು ಅನುಕೂಲಗಳನ್ನು ಕಲ್ಪಿಸಿದೆ. ದಿಗ್ಬಂಧನದ ಸಡಿಲಿಕೆ ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು ಮತ್ತು ಈ ಹೊತ್ತಲ್ಲಿ ಸ್ವಲ್ಪ ಮೈಮರೆತರೂ ರಾಜ್ಯ ಶೋಚನೀಯ ಸ್ಥಿತಿಗೆ ಜಾರಬಲ್ಲದು ಎಂಬ ಎಚ್ಚರಿಕೆ ಅಗತ್ಯ. ಹಾಗಾಗಿ, ಇಲ್ಲಿಗ ಜನರ ಪಾತ್ರ, ಸಹಕಾರ ಅತ್ಯಂತ ಮುಖ್ಯವಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಕಡ್ಡಾಯವಾಗಿ ಮುಖಗವಸು ಧರಿಸುವುದು, ಪ್ರಯಾಣದ ಅವಧಿಯಲ್ಲಿ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ. ಎಚ್ಚರಿಕೆಯಿಂದ ಇದ್ದಷ್ಟು ಎಲ್ಲರಿಗೂ ಕ್ಷೇಮ. ಸರ್ಕಾರದ ನಿಯಮಗಳು ತಪ್ಪದೇ ಪಾಲನೆಯಾಗಲಿ.