| ಮಲ್ಲಿಕಾರ್ಜುನ ಬಾಲದಂಡಿ
ಮಾದಕ ವಸ್ತುಗಳ ಸೇವನೆಗೆ ಒಳಗಾದ ವ್ಯಕ್ತಿಯ ವಿವೇಕ, ಸಾಮರ್ಥ್ಯ ಕುಗ್ಗುವುದರಿಂದ ಅಪರಾಧವೆಸಗುವ ಸಾಧ್ಯತೆ ಹೆಚ್ಚಿರುತ್ತದೆ. ವ್ಯಕ್ತಿಯ ಮಿದುಳು, ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡುತ್ತದೆ. ಕ್ಷಣಿಕ ಸುಖಕ್ಕಾಗಿ ಎಷ್ಟು ಹಣ ಕೊಟ್ಟರೂ ಮರಳಿ ಸಿಗದ ಪ್ರಾಣವನ್ನೇ ಬಲಿ ಕೊಡುತ್ತಿದ್ದಾರೆ. ಭವಿಷ್ಯದ ವಿವೇಚನೆ ಮಾಡದೇ ತಾತ್ಕಾಲಿಕ ಆಕ್ರೋಶ, ಆಲೋಚನೆ ಮತ್ತು ಅಪರಾಧ ಮಾಡುವುದರಿಂದ ಜೀವನವನ್ನು ಸಂಕಷ್ಟಕ್ಕೆ ಒಳಪಡಿಸಿಕೊಳ್ಳುತ್ತಾರೆ. ಮಾತ್ರವಲ್ಲ, ತನ್ನ ಸುತ್ತಲ ಪರಿಸರದ ಜತೆಗೆ ಸಂಬಂಧಿಕರು, ಸಂಗಡಿಗರನ್ನು ದೂರ ಮಾಡಿಕೊಳ್ಳುತ್ತಾರೆ.
ತಿನ್ನುವ ಪದಾರ್ಥದಲ್ಲಿ ಸಣ್ಣ ಕಲ್ಲು ಸಿಕ್ಕರೂ ಅದನ್ನು ತಿರಸ್ಕರಿಸುವ ಜನರು, ದೇಹಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ ಮಾದಕ ವಸ್ತುಗಳಿಗೆ ದಾಸರಾಗುತ್ತಿದ್ದಾರೆ. ಪ್ರೌಢಶಿಕ್ಷಣದ ಹಂತದಲ್ಲಿಯೇ ಮಾದಕ ವ್ಯಸನಕ್ಕೆ ಬಲಿಯಾಗಿ, ಅದರಿಂದ ಹೊರ ಬರಲಾಗದೆ ಜೀವನವನ್ನೇ ಅಂತ್ಯಗೊಳಿಸುವಂಥ ಸ್ಥಿತಿ ಸಮಾಜದಲ್ಲಿ ನಿರ್ವಣವಾಗುತ್ತಿದೆ. ದೇಶದ ಭವಿಷ್ಯ ರೂಪಿಸಬೇಕಾದ ಯುವ ಸಮೂಹ ವ್ಯಸನಿಗಳ ಸಹವಾಸ ಹಾಗೂ ಮೋಜಿಗಾಗಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ.
ಮಾದಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಪೊಲೀಸರ ಗುರಿ. ಇದಕ್ಕೆ ಪ್ರತಿ ವ್ಯಕ್ತಿ, ಸ್ವಯಂ ಸೇವಾ ಸಂಸ್ಥೆ ಮತ್ತು ಸಮುದಾಯ ಒಗ್ಗಟ್ಟಿನಿಂದ ಕೆಲಸ ಮಾಡುವ ಅಗತ್ಯವಿದೆ. ವ್ಯಸನ ಮುಕ್ತ ಸಮಾಜದ ನಿರ್ವಣಕ್ಕೆ ಯುವ ಸಮೂಹ ಮುಂದಾಗಬೇಕು. ವಿದ್ಯಾರ್ಥಿಗಳು ಮಾದಕ ವಸ್ತುಗಳ ವಿರುದ್ದ ಪ್ರಚಾರಕರಾಗಿ ತಮ್ಮ ಮನೆಗಳಿಂದಲೇ ದುಶ್ಚಟ ಬಿಡಿಸಲು ಆರಂಭಿಸಬೇಕು. ಕುತೂಹಲಕ್ಕಾಗಿಯೂ ಮಾದಕ ದ್ರವ್ಯ ಬಳಸಬಾರದು. ಚೆನ್ನಾಗಿ ಓದಿ ಉತ್ತಮ ಉದ್ಯೋಗ ಪಡೆದು ತಮ್ಮ ಕುಟುಂಬದ ಒಳಿತಿಗಾಗಿ ಚಿಂತಿಸಬೇಕು. ಕ್ಷಣಿಕ ಸುಖಕ್ಕೆ ಬದುಕನ್ನು ಬಲಿಕೊಡದೆ ದೇಶದ ಉತ್ತಮ ನಾಗರಿಕರಾಗಿ ಬದುಕು ನಡೆಸಬೇಕು.
ವ್ಯಸನ ಮುಕ್ತ ಸಮಾಜ ನಿರ್ವಣದ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ. ವ್ಯಸನದಿಂದಾಗುವ ದುಷ್ಪರಿಣಾಮದ ಬಗ್ಗೆ ಬೀದಿ ನಾಟಕ, ಗೀತೆ-ಗಾಯನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ‘ತೆರೆದ ಮನೆ’ ಕಾರ್ಯಕ್ರಮದ ಮೂಲಕ ಮಕ್ಕಳ ಸಮಸ್ಯೆ ಆಲಿಸಿ ಅವರ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ. ಶಾಲಾ, ಕಾಲೇಜು ಸುತ್ತಮುತ್ತ ವಿದ್ಯಾರ್ಥಿಗಳು ಮಾದಕ ವ್ಯಸನ ಹಾಗೂ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗದಂತೆ ಸೂಕ್ತ ನಿಗಾ ವಹಿಸಲಾಗುತ್ತಿದೆ. ತಾಲೂಕು ಹಂತದಲ್ಲಿ ವಿದ್ಯಾರ್ಥಿಗಳಿಗೆ ಭಾಷಣ, ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಿ ವಿಜೇತರಿಗೆ ಬಹುಮಾನ ಮತ್ತು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಈ ರೀತಿಯ ಉತ್ತಮ ಚಟುವಟಿಕೆ ಹಮ್ಮಿಕೊಳ್ಳುವ ಮೂಲಕ ಮಕ್ಕಳ/ಜನಸ್ನೇಹಿಯಾಗಿದೆ. ಅನೇಕ ಸಮೀಕ್ಷೆ ಪ್ರಕಾರ ಶೇ.52ಕ್ಕೂ ಹೆಚ್ಚು ಮಕ್ಕಳಿಗೆ ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳ ಅರಿವಿಲ್ಲ. ಆದ್ದರಿಂದ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿ್ತೆ.
ಭಾರತ ಒಂದು ಸಂಪದ್ಭರಿತ ರಾಷ್ಟ್ರ. ಶೇ.60ರಷ್ಟು ಯುವಜನರಿಂದ ಕೂಡಿದೆ. ಈ ಹಿನ್ನೆಲೆಯಲ್ಲಿ ಯುವ ಶಕ್ತಿಯನ್ನು ಸರಿಯಾದ ದಾರಿಯಲ್ಲಿ ಬಳಸುವ ಅಗತ್ಯ ಇದೆ. ದೇಶದ ಆರ್ಥಿಕ, ಸಾಮಾಜಿಕ ಬೆಳವಣಿಗೆ ಯುವ ಶಕ್ತಿಯನ್ನು ಅವಲಂಬಿಸಿದೆ. ಬೇರೆ ರಾಷ್ಟ್ರ ದಾಳಿ ಮಾಡಿದಲ್ಲಿ ಅದನ್ನು ಹೆದರಿಸಲು ಬೇಕಾದ ಸೈನ್ಯದ ಬಲವಿದೆ. ಆದರೆ ಕಣ್ಣಿಗೆ ಕಾಣದೆ ಯುವ ಜನತೆಯ ಮೇಲೆ ದಾಳಿ ಮಾಡುತ್ತಿರುವುದು ಮಾದಕ ವ್ಯಸನ. ಸ್ವಯಂ ನಿಯಂತ್ರಣದಿಂದ ಮಾತ್ರ ಯುವಜನತೆ ವ್ಯಸನದಿಂದ ಮುಕ್ತವಾಗಬಹುದು.
ಮಕ್ಕಳು, ಯುವಸಮೂಹ ಮಾದಕ ವ್ಯಸನಕ್ಕೆ ತುತ್ತಾಗದಂತೆ ಇರಬೇಕಾದರೆ ಪಾಲಕರು, ಶಿಕ್ಷಕರು, ನಾಗರಿಕರು ಹೆಚ್ಚಿನ ಪಾತ್ರ ವಹಿಸಬೇಕಿದೆ. ಅವರ ಮಾನಸಿಕ, ದೈಹಿಕ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಬೇಕಿದೆ. ಬದುಕಿನಲ್ಲಿ ಸೋಲು, ವೈಫಲ್ಯದ ಸಂದರ್ಭದಲ್ಲಿ ಅವರ ಮೇಲಿನ ಒತ್ತಡ ನಿವಾರಣೆಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಆಗಬೇಕಿದೆ. ಈ ಮೂಲಕ ವ್ಯಸನ ಮುಕ್ತ ಸಧೃಡ ಸಮಾಜ ನಮ್ಮದಾಗುವಂತೆ ಮಾಡಲು ಪ್ರತಿಯೊಬ್ಬರೂ ಸಾಮಾಜಿಕ ಹೊಣೆ ಹೊರಬೇಕಿದೆ.
(ಲೇಖಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಂಡ್ಯ)