ನ್ಯೂಸ್

ಸಂಪಾದಕೀಯ | ಸಾಮರಸ್ಯ ನೆಲೆಸಲಿ

ಮೋಹನ್​ ಶೆಟ್ಟಿ

ವಾಯವ್ಯ ಸಾರಿಗೆ ನಿಗಮದ ಬಸ್ ನಿರ್ವಾಹಕ ಮತ್ತು ಚಾಲಕನ ಮೇಲೆ ನಡೆದಿರುವ ಹಲ್ಲೆ ಪ್ರಕರಣವು ಕರ್ನಾಟಕ-ಮಹಾರಾಷ್ಟ್ರದ ನಡುವೆ ವಿವಾದವನ್ನು, ಹೊಸ ಬಿಕ್ಕಟ್ಟನ್ನು ಸೃಷ್ಟಿಸಿದೆ. ಪರಿಸ್ಥಿತಿ ಎಲ್ಲಿಗೆ ತಲುಪಿದೆಯೆಂದರೆ ಎರಡೂ ರಾಜ್ಯಗಳ ನಡುವೆ ಬಸ್ ಸಂಚಾರ ನಿಂತುಹೋಗಿದೆ. ಇದರಿಂದ ಜನಸಾಮಾನ್ಯರು, ವ್ಯಾಪಾರಸ್ಥರು ಸಮಸ್ಯೆ ಎದುರಿಸುವಂತಾಗಿರುವುದು ದುರದೃಷ್ಟಕರ.

ಬೆಳಗಾವಿಯಿಂದ ಕೊಲ್ಹಾಪುರ, ಪುಣೆ, ಸಾತಾರಾ, ಮುಂಬೈ ಹಾಗೂ ಇತರ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರು ಸಮಸ್ಯೆ ಅನುಭವಿಸುವಂತಾಗಿದೆ. ಆಯಾ ರಾಜ್ಯಗಳ ಸಾರಿಗೆ ನಿಗಮಗಳ ಬಸ್​ಗಳು ತಮ್ಮ ಗಡಿಯವರಿಗಷ್ಟೇ ಸಂಚಾರ ನಡೆಸುತ್ತಿವೆ. ಅಲ್ಲದೆ, ಪದೇಪದೆ ಗಡಿಭಾಗದ ಜಿಲ್ಲೆ ಅಥವಾ ತಾಲೂಕುಗಳಲ್ಲಿ ಈ ಬಗೆಯ ಘಟನೆಗಳು ಮರುಕಳಿಸುತ್ತಿರುವುದರಿಂದ ಅಲ್ಲಿನ ಜನರು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಮಹಾರಾಷ್ಟ್ರದ ನಾಸಿಕ್​ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವೋಲ್ವೋ ಬಸ್​ಗೆ ಮಸಿ ಬಳಿಯಲಾಗಿದ್ದರೆ, ಸೋಲಾಪುರದಲ್ಲಿ ಬಸ್ ಮೇಲೆ ಕೇಸರಿ ಬಣ್ಣ ಬಳಿದು, ಕೆಲ ಘೋಷಣೆಗಳನ್ನು ಬರೆಯಲಾಗಿದೆ.

ಭಾಷಾ ಸಾಮರಸ್ಯವನ್ನು ಹಾಳು ಮಾಡುವ, ವಿವಾದವನ್ನು ಕೆದಕುವ ಪುಂಡರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇಂಥ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು. ಕೆಲ ಸಂಘಟನೆಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಮತ್ತು ರಾಜಕೀಯ ಉದ್ದೇಶಗಳಿಗಾಗಿ ವಿವಾದಗಳನ್ನು ಜೀವಂತವಾಗಿ ಇರಿಸಲು, ಶಾಂತಿಗೆ ಧಕ್ಕೆ ತರಲು ಯತ್ನಿಸುತ್ತಿವೆ. ವಾಸ್ತವದಲ್ಲಿ, ಗಡಿಭಾಗದ ಪ್ರದೇಶಗಳಲ್ಲಿ ಕನ್ನಡಿಗರು ಮತ್ತು ಮರಾಠಿಗರು ಸೌಹಾರ್ದ, ಸಾಮರಸ್ಯದಿಂದಲೇ ಬದುಕುತ್ತಿದ್ದಾರೆ. ಒಂದು ಒಕ್ಕೂಟ ವ್ಯವಸ್ಥೆಯಲ್ಲಿ ವಾಸಿಸುವಾಗ ಇದು ಅಗತ್ಯ ಕೂಡ. ಆದರೆ, ಕೆಲವರ ದುರುಳತನದಿಂದ ಜನಸಾಮಾನ್ಯರ ದೈನಂದಿನ ಬದುಕಿಗೆ ಧಕ್ಕೆ ಒದಗುತ್ತಿರುವುದು ಖಂಡನೀಯ.

ಬಸ್ ಸಂಚಾರವನ್ನು ಬಂದ್ ಮಾಡಿ ಏನು ಸಾಧಿಸಿದಂತಾಯಿತು? ಶಾಲೆ-ಕಾಲೇಜುಗಳಿಗೆ ಹೋಗಿಬರುವ ವಿದ್ಯಾರ್ಥಿಗಳಿಗೆ, ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿ ಪೇಟೆ ಹಾಗೂ ಸಂತೆಗಳಿಗೆ ಹೋಗುವ ರೈತರಿಗೆ, ವ್ಯಾಪಾರಸ್ಥರಿಗೆ, ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಸಂಚರಿಸುವ ರೋಗಿಗಳಿಗೆ ಹೀಗೆ ಎಲ್ಲ ವರ್ಗದವರಿಗೂ ಸಮಸ್ಯೆಯಾಗಿದೆ.

ಕನ್ನಡ ಮಾತನಾಡಿದರೆ ಹಲ್ಲೆ ಮಾಡುವುದು, ಮರಾಠಿಯಲ್ಲೇ ಮಾತಾಡಲು ಪೀಡಿಸುವುಂಥ ವರ್ತನೆಗಳು ಸಮಾಜದ ಸ್ವಾಸ್ಥ್ಯ್ಕೆ ಹಾನಿ ಉಂಟುಮಾಡುತ್ತವೆ ಮತ್ತು ವಿನಾಕಾರಣ ಜನರ ಮನಸ್ಸಿನಲ್ಲಿ ದ್ವೇಷದ ಭಾವನೆ ಬಿತ್ತಿದಂತಾಗುತ್ತದೆ. ಇನ್ನೂ ಕಾಲ ಮಿಂಚಿಲ್ಲ. ಬಸ್ ಸಂಚಾರವನ್ನು ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳಬೇಕು. ರಾಜಕೀಯ ನಾಯಕರು ಕೂಡ ಸಂಯಮದಿಂದ ವರ್ತಿಸಿ, ವಿವೇಚನೆಯಿಂದ ಹೇಳಿಕೆ ನೀಡಬೇಕು. ಏಕೆಂದರೆ, ಉಭಯ ಭಾಷಿಕರ ವೈಮನಸ್ಸಿನ ಲಾಭ ಪಡೆಯಲು ಸದಾ ಹವಣಿಸುತ್ತಿವವರು ರಾಜಕಾರಣಿಗಳೇ ಎಂಬುದು ಬಹಿರಂಗ ರಹಸ್ಯ. ಇದಕ್ಕಾಗಿ ಜನಸಾಮಾನ್ಯರನ್ನು ಏಕೆ ತೊಂದರೆಗೆ ಒಳಪಡಿಸುವಿರಿ?

ಕಾನೂನು ಉಲ್ಲಂಘನೆಯ ಘಟನೆಗಳು ನಡೆದಾಗ ಅದನ್ನು ಅದೇ ಆಯಾಮದಿಂದ ನೋಡಿ, ತನಿಖೆ ಮಾಡಬೇಕು. ಅದನ್ನು ಬಿಟ್ಟು ಭಾಷಾ ವಿವಾದದ ಸ್ವರೂಪ ನೀಡಿ ಪ್ರಕರಣವನ್ನು ಎಲ್ಲೆಲ್ಲಿಗೋ ಎಳೆದುಕೊಂಡು ಹೋಗಬಾರದು. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ, ಭಾಷೆಯ ಹೆಸರಿನಲ್ಲಿ ಉದ್ವಿಗ್ನತೆ ಸೃಷ್ಟಿಸುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳು ಪರಸ್ಪರ ಚರ್ಚೆ ನಡೆಸಿದರೆ ಪರಿಹಾರದ ದಾರಿ ಬೇಗ ಸಿಗಬಹುದು. ಪರಿಸ್ಥಿತಿ ತಿಳಿಗೊಳ್ಳಲು ಜನಸಾಮಾನ್ಯರು ಕೂಡ ಸಹಕರಿಸಲಿ.