ಅಮ್ಮನಿಲ್ಲದೆ ಬದುಕಿಲ್ಲ, ಅವಳೊಂದು ದೊಡ್ಡ ಭಾವಶಕ್ತಿ. ಅವಳ ಅಂತಃಕರಣದ ಲೋಕದಲ್ಲಿ ಬೆಳೆದ ಮಕ್ಕಳು ಎಷ್ಟೇ ದೊಡ್ಡವರಾದರೂ, ಆ ಪ್ರೀತಿ, ಮಮತೆ, ವಾತ್ಸಲ್ಯ ಮತ್ತು ಪ್ರೇರಣೆಯನ್ನು ಮರೆಯಲು ಸಾಧ್ಯವಿಲ್ಲ. ಹಾಗಾಗಿ, ಜೀವನದಲ್ಲಿ "ತಾಯಿಯೇ ದೇವರು' ಎಂದೆನಿಸಿದ ಸಂದರ್ಭಗಳನ್ನು ಹಂಚಿಕೊಳ್ಳುವಂತೆ ನೀಡಿದ ಕರೆಗೆ ಓದುಗರಿಂದ ಬಂದಿರುವ ಪ್ರತಿಕ್ರಿಯೆ ಅಭೂತಪೂರ್ವ. ಅಮ್ಮನ ದಿನದ ನಿಮಿತ್ತ ಅಂಥ ಕೆಲ ಘಟನೆಗಳನ್ನು ಇಲ್ಲಿ ದಾಖಲಿಸಲಾಗಿದೆ.
ಅವರೆಲ್ಲರಿಗೂ ಬಿಡುಗಡೆ ಸಿಗಲಿ... ನನಗೆ ನನ್ನ ಲೈಫ್ನಲ್ಲಿ ತಾಯಿ, ತಂದೆ, ಸ್ನೇಹಿತ ಎಲ್ಲವೂ ನನ್ನವ್ವನೇ ಆಗಿದ್ದಳು. ಅವಳ ಜೀವನವನ್ನೇ ನೋಡುತ್ತ ಬೆಳೆದೆ. ಅವಳ ಕಥೆಗಳನ್ನು ಕೇಳುತ್ತ ಅವಳ ಬಗ್ಗೆ ಪ್ರೀತಿ ಹೆಚ್ಚಾಯಿತು. ನಾನು ಹುಟ್ಟುವ ಮುನ್ನ ಅವಳೇನೇನು ಬವಣೆಗಳನ್ನು ಪಟ್ಟಿದ್ದಳೋ, ಆ ಕಥೆಗಳನ್ನು ಬೇರೆಯವರಿಂದ ಕೇಳಿದೆ. "ನಿಮ್ಮವ್ವ ಎಷ್ಟು ಕಷ್ಟಪಟ್ಟಿದ್ಲು ಗೊತ್ತಾ?' ಎಂದು ಹಲವರು ಉದಾಹರಣೆ ಸಮೇತ ಹೇಳಿದ್ದರು. ನಾವು ಎಂಟು ಜನ ಮಕ್ಕಳು. ಆ ಏಳು ಜನರನ್ನು ಅವ್ವ ಹೇಗೆ ಸಾಕಿದಳು ಅಂತ ಕಥೆಗಳನ್ನು ಕೇಳುತ್ತಿದ್ದೆ. ಮಕ್ಕಳಿಗಾಗಿ ಬದುಕುತ್ತ, ಹಲವು ಸಮಸ್ಯೆಗಳನ್ನು ನೀಗಿಸಿಕೊಂಡು, ಅವಳು ಹೇಗೆ ಬೆಳೆದಳು ಎನ್ನುವುದು ಮುಖ್ಯ. ನಾನು ಎಂಟನೆಯ ಮಗ ಎಂದು ಪ್ರೀತಿ ಕಡಿಮೆಯಾಗಲಿಲ್ಲ. ಆ ಏಳು ಜನರಿಗೆ ಆವ್ವ ಅದೆಷ್ಟು ಪ್ರೀತಿ ಕೊಟ್ಟಳೋ, ನನಗೂ ಅಷ್ಟೇ ಪ್ರೀತಿ ಕೊಟ್ಟಳು. ಯಾವಾಗಲೂ ಎದೆಗೆ ಅಪ್ಪಿಕೊಂಡಿರುತ್ತಿದ್ದಳು. ಸದಾ ಕೆಲಸ ಮಾಡುತ್ತಿದ್ದಳು. ಅವಳು ರೆಸ್ಟ್ ಮಾಡಿದ್ದು ಬೆಂಗಳೂರಿಗೆ ಬಂದ ಮೇಲೆ. ಎಷ್ಟು ಕೆಲಸ ಮಾಡಿದರೂ, ಕಡಿಮೆಯಾಗದಿರುವ ಚೈತನ್ಯ ಅವಳದ್ದು. ಅದೇ ನನಗೂ ಸ್ಫೂರ್ತಿ ತುಂಬಿದ್ದು. ಅವಳು ಈಗಿಲ್ಲ. ಆ ದುಃಖದಿಂದ ಹೊರಬರುವುದಕ್ಕೆ ಸಾಧ್ಯವೇ ಇಲ್ಲ. ಅವಳು ಯಾವಾಗ ನೆನಪಾದರೂ ತಡೆಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ, ನೆನಪಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ನೆನಪಿಸಿಕೊಂಡರೆ ದು@ಖ ಮುಗಿಯುವುದಿಲ್ಲ. ಎಲ್ಲ ತಾಯಂದಿರು ಸಹ ತಮ್ಮ ಮಕ್ಕಳಿಗಾಗಿ ವಿಧವಿಧವಾದ ಕಷ್ಟಪಟ್ಟಿರುತ್ತಾರೆ. ಇಡೀ ಬದುಕನ್ನೇ ಮುಡಿಪಾಗಿಡುತ್ತಾರೆ. ಮಹಿಳೆಯರಿಗೆ ಅದೇನು ಸಂಕೋಲೆಗಳಿವೆಯೋ, ಅವರೆಲ್ಲ ಅದೆಷ್ಟು ಕಷ್ಟಪಡುತ್ತಿದ್ದಾರೋ, ಅವರೆಲ್ಲರಿಗೂ ಬಿಡುಗಡೆ ಸಿಗಲಿ, ಅವರೆಲ್ಲರಿಗೂ ಸ್ವಾತಂತ್ರ್ಯ ಸಿಗಲಿ.
| ಸತೀಶ್ ನೀನಾಸಂ ನಟ