ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮವನ್ನು ಡಾ.ಕೆ.ಎನ್.ಮಂಜುನಾಥ್ ಉದ್ಘಾಟಿಸಿದರು. ಡಾ.ಚಂದ್ರಶೇಖರ್, ಎನ್.ಎಂ.ಮಂಗಳಾ, ಹರೀಶ್, ಕಲ್ಲೇಶ್ ಮುಂತಾದವರಿದ್ದರು. 
ನ್ಯೂಸ್

ಯುವಕರು ದುಶ್ಚಟಗಳಿಗೆ ಬಲಿಯಾಗದಿರಲಿ

ಶಿವಮೊಗ್ಗ: ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮುಖ್ಯ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ಕೆ.ಎನ್.ಮಂಜುನಾಥ್ ಹೇಳಿದರು.

ಜಿಲ್ಲಾಡಳಿತ, ಸಹ್ಯಾದ್ರಿ ಕಲಾ ಕಾಲೇಜಿನ ಎನ್‌ಎಸ್‌ಎಸ್ ಘಟಕಗಳು, ರೆಡ್ ರಿಬ್ಬನ್, ರೆಡ್‌ಕ್ರಾಸ್, ರೋವರ್ಸ್‌, ರೇಂಜರ್ಸ್‌ ಆಶ್ರಯದಲ್ಲಿ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಆಶಯದಂತೆ ಯುವಕರು ಸಾಮಾಜಿಕ ಕಲ್ಯಾಣ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಹಕರಿಸಬೇಕು. ವ್ಯಸನಗಳಿಗೆ ಬಲಿಯಾಗದೆ ಆರೋಗ್ಯವಾಗಿರಬೇಕು ಎಂದು ತಿಳಿಸಿದರು.
ಜಿಲ್ಲಾ ಐಸಿಟಿಸಿ ಮೇಲ್ವಿಚಾರಕರಾದ ಎನ್.ಎಂ.ಮಂಗಳಾ ಮಾತನಾಡಿ, ಏಡ್ಸ್ ತಡೆಗಟ್ಟಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯ. ಏಡ್ಸ್ ಬಾಧಿತರನ್ನು ಸಮಾಜ ಗೌರವದಿಂದ ಕಾಣಬೇಕು. ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.
ಎನ್‌ಎಸ್‌ಎಸ್ ಅಧಿಕಾರಿ ಡಾ. ಚಂದ್ರಶೇಖರ್ ಮಾತನಾಡಿದರು. ಶಿಕ್ಷಣ ಸಂಯೋಜಕ ಹರೀಶ್, ಕಲ್ಲೇಶ್, ಎನ್‌ಎಸ್‌ಎಸ್ ಅಧಿಕಾರಿ ಡಾ. ಮುದುಕಪ್ಪ ಇತರರಿದ್ದರು.