ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಎಂಎಲ್‌ಸಿ ಡಿ.ಎಸ್.ಅರುಣ್ ವೃತ್ತಿಪೂರ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿದರು. ಡಾ. ರಾಜೇಂದ್ರ ಚೆನ್ನಿ, ಡಾ. ರಜನಿ ಎ.ಪೈ, ಎನ್.ಗೋಪಿನಾಥ್, ಸವಿತಾ ಮಾಧವ, ಡಾ. ಕೆ.ಸಂಧ್ಯಾಕಾವೇರಿ, ಡಾ. ಅರ್ಚನಾ ಭಟ್, ಮಂಜುನಾಥಸ್ವಾಮಿ, ಗಣೇಶ್ ಇದ್ದರು. 
ನ್ಯೂಸ್

ಯುವಪೀಳಿಗೆ ಶಿಕ್ಷಣದ ಜತೆಗೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಲಿ: ಎಂಎಲ್‌ಸಿ ಅರುಣ್

ಶಿವಮೊಗ್ಗ: ಯುವಜನರು ಶಿಕ್ಷಣದೊಂದಿಗೆ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ಬುದ್ಧಿವಂತಿಕೆ ಜತೆ ಭಾವನಾತ್ಮಕ ಸಮತೋಲನ ಹಾಗೂ ಸಾಮಾಜಿಕ ಕೌಶಲಗಳಿದ್ದಾಗಲೇ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಎಂಎಲ್‌ಸಿ ಡಿ.ಎಸ್.ಅರುಣ್ ಹೇಳಿದರು.

ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ದಿಶಾ ಕೆರಿಯರ್ ಗೈಡೆನ್ಸ್ ಸೆಂಟರ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹಯೋಗದಲ್ಲಿ ಎರಡು ದಿನಗಳ ವೃತ್ತಿಪೂರ್ವ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಯುವಪೀಳಿಗೆಗೆ ಉದ್ಯೋಗ ಅಥವಾ ಸ್ವಯಂ ಉದ್ಯೋಗಕ್ಕೆ ಪದವಿಯೇ ಮುಖ್ಯವಲ್ಲ. ಅವರು ಹೊಂದಿರುವ ಜ್ಞಾನ, ಕೌಶಲಗಳೂ ಮುಖ್ಯವಾಗುತ್ತದೆ ಎಂದರು.
ಇಂದಿನ ಶಿಕ್ಷಣವು ವಿಷಯ ಜ್ಞಾನವನ್ನು ಒದಗಿಸುತ್ತಿದೆ. ಆದರೆ, ವಿದ್ಯಾರ್ಥಿಗಳು ಮೌಲ್ಯವನ್ನೂ ಮೈಗೂಡಿಸಿಕೊಳ್ಳಲು ಸಾಮಾಜಿಕವಾಗಿ ಹಾಗೂ ಭಾವನಾತ್ಮಕವಾಗಿ ಬೆರೆಯಬೇಕು. ಇಂದು ಬೆರಳ ತುದಿಯಲ್ಲಿ ಮಾಹಿತಿಗಳ ಲಭ್ಯತೆ ಇದೆ. ಆದರೆ ಮಾಹಿತಿಗಳ ಮೂಲದ ಅರಿವು ಬಹಳ ಮುಖ್ಯ. ದೊಡ್ಡ ಸಾಧನೆಗಳ ಕನಸನ್ನು ಕಟ್ಟಿಕೊಳ್ಳಬೇಕು. ಆದರೆ ಯಾವುದೇ ಸಾಧನೆಗೂ ಸ್ವಪ್ರಯತ್ನವಿರಬೇಕ ಎಂದರು.
ಪ್ರಾಸ್ತಾವಿಕ ಮಾತನಾಡಿದ ಮಾನಸ ಟ್ರಸ್ಟ್‌ನ ನಿರ್ದೇಶಕ ಡಾ. ರಾಜೇಂದ್ರ ಚೆನ್ನಿ, ಜಾಗತೀಕರಣ ಹಾಗೂ ತಾಂತ್ರಿಕ ಬೆಳವಣಿಗೆಗಳು ವಿಫುಲ ಅವಕಾಶಗಳನ್ನು ಎಲ್ಲರಿಗೂ ತೆರೆದಿಟ್ಟಿದೆ. ಬದಲಾಗುತ್ತಿರುವ ಕಾಲಕ್ಕನುಗುಣವಾಗಿ ವಿವಿಧ ಉದ್ಯೋಗದ ಅವಕಾಶಗಳಿವೆ ಎಂದರು.
ಮಾನಸ ಟ್ರಸ್ಟ್‌ನ ನಿರ್ದೇಶಕಿ ಡಾ. ರಜನಿ ಎ.ಪೈ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಸವಿತಾ ಮಾಧವ, ಪ್ರಾಚಾರ್ಯೆ ಡಾ. ಕೆ.ಸಂಧ್ಯಾಕಾವೇರಿ, ಕಾಲೇಜಿನ ಮನ:ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಅರ್ಚನಾ ಭಟ್, ಮಂಜುನಾಥಸ್ವಾಮಿ, ದಿಶಾ ಕೊ ಆರ್ಡಿನೇಟರ್ ಗಣೇಶ್ ಉಪಸ್ಥಿತರಿದ್ದರು.