ಶಿವಮೊಗ್ಗ: ರಕ್ತದಾನ ಜೀವ ಉಳಿಸುವ ಮಹಾತ್ಕಾರ್ಯ ಎಂದು ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಹೇಳಿದರು.
ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ, ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯಿಂದ ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಒಬ್ಬರು ರಕ್ತದಾನ ಮಾಡುವುದರಿಂದ ಏನಾಗುತ್ತದೆ ಎಂಬ ಮನೋಭಾವ ಬಿಡಬೇಕು. ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಪ್ರತಿಯೊಬ್ಬರ ರಕ್ತದಾನಕ್ಕೂ ಮಹತ್ವವಿದೆ ಎಂದರು.
ಅಭಿರುಚಿ ಭಾರತೀಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ. ಶಿವರಾಮಕೃಷ್ಣ ಮಾತನಾಡಿ, ವಿದ್ಯಾರ್ಥಿಗಳು ವರ್ಷದಲ್ಲಿ ಕನಿಷ್ಟ ಎರಡು ಬಾರಿಯಾದರೂ ರಕ್ತದಾನ ಮಾಡಬೇಕು. ಜನರು ಜನ್ಮದಿನ, ವಿವಾಹ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ರಕ್ತದಾನ ಮಾಡುವುದು ಒಳ್ಳೆಯ ನಡೆಯಾಗಲಿದೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ. ವೈ.ವಿಜಯಕುಮಾರ್ ಮಾತನಾಡಿ, ನಮ್ಮ ಕಾಲೇಜಿನಲ್ಲಿ ನಾಲ್ಕು ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಪ್ರತಿ ಸೆಮಿಸ್ಟರ್‌ನಲ್ಲಿ ಓರ್ವ ವಿದ್ಯಾರ್ಥಿ ಒಂದು ಬಾರಿ ರಕ್ತದಾನ ಮಾಡಿದರೆ ವರ್ಷಕ್ಕೆ ನಮ್ಮ ಕಾಲೇಜಿನಿಂದಲೇ ಸಾವಿರಾರು ಯುನಿಟ್ ರಕ್ತ ಸಂಗ್ರಹವಾಗಲಿದೆ ಎಂದು ಹೇಳಿದರು.
ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಅವರು ರಕ್ತದಾನ ಮಾಡುವ ಮೂಲಕ ಶಿಬಿರ ಉದ್ಘಾಟಿಸಿದರು. ಪ್ರಮುಖರಾದ ಕಾಂತೇಶ್ ಮೂರ್ತಿ, ಧರಣೇಂದ್ರ ದಿನಕರ್, ಅರುಣ್‌ಕುಮಾರ್, ಛಾಯಾ, ಕುಮಾರಶಾಸ್ತ್ರಿ, ಜಿ.ವಿಜಯಕುಮಾರ್, ಗಿರೀಶ್ ಇತರರಿದ್ದರು.