ಮೈಸೂರು: ಇಂದಿನ ಯುವಪೀಳಿಗೆ ಛತ್ರಪತಿಯಂತೆಯೇ ಸಾಹಸ, ಧೈರ್ಯ ಮತ್ತು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ.ರಾಮಪ್ರಸಾದ್ ಹೇಳಿದರು.
ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಕೃಷ್ಣರಾಜ ಯುವ ಬಳಗದಿಂದ ಚಾಮುಂಡಿಪುರಂ ತಗಡೂರು ರಾಮಚಂದ್ರರಾವ್ ಉದ್ಯಾನದಲ್ಲಿ ಬುಧವಾರ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಶಿವಾಜಿ ಯುವಕರಿಗೆ ಧೈರ್ಯ, ಸಾಹಸ ಹಾಗೂ ಅಭಿಮಾನದ ಸಂಕೇತವಾಗಿದ್ದಾರೆ. ಅವರ ಸಾಹಸ, ಧೈರ್ಯ ಮತ್ತು ಹೋರಾಟದ ಮನೋಭಾವ ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.
ದೇಶ ಕಂಡ ಅಪ್ರತಿಮ ಹೋರಾಟಗಾರ ಶಿವಾಜಿ, ಅನೇಕ ವೈರಿಗಳನ್ನು ಹಿಮ್ಮೆಟ್ಟಿಸಿ ಸಾಮ್ರಾಜ್ಯ ಕಟ್ಟಿ ಹಿಂದುತ್ವ ಉಳಿಸಿದ ಹಿಂದುಗಳ ಹೃದಯ ಸಾಮ್ರಾಟರಾಗಿದ್ದಾರೆ. ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡು ಏಕಾಂಗಿಯಾಗಿ ಹೋರಾಟ ಮಾಡಿದವರು. ಸೈನ್ಯ ಕಟ್ಟಿಕೊಂಡು ದೊಡ್ಡ ದೊಡ್ಡ ಸೈನ್ಯ ಹೊಂದಿದ್ದ ದೇಶ ವಿರೋಧಿಗಳಿಗೆ ಸೋಲಿನ ರುಚಿ ತೋರಿಸಿದವರು ಎಂದು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಜೀಜಾಬಾಯಿ ಬಾಲ್ಯದಲ್ಲಿಯೇ ಶಿವಾಜಿಗೆ ಧಾರ್ಮಿಕ ಸಂಸ್ಕಾರದೊಂದಿಗೆ ಯುದ್ಧ ಕಲೆಗಳನ್ನು ಕರಗತ ಮಾಡಿಸಿದ್ದರು. ಇದರಿಂದಾಗಿ ಅವರು ಛತ್ರಪತಿಯಾಗಿ ಬಾನೆತ್ತರಕ್ಕೆ ಬೆಳೆದು ಅಜರಾಮರಾಗಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದರು.
ಕನ್ನಡ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ನಗರಪಾಲಿಕೆ ನಾಮನಿರ್ದೇಶನ ಮಾಜಿ ಸದಸ್ಯ ಜಗದೀಶ್, ಕೃಷ್ಣರಾಜ ಯುವ ಬಳಗದ ಅಧ್ಯಕ್ಷ ನವೀನ್ ಕೆಂಪಿ, ಪಂಚಾಯತ್ ಗ್ರಾಮ ಅಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಕಾರ್ಯದರ್ಶಿ ಮಂಜುಳಾ, ಅಂಬಾಭವಾನಿ ಸಮಾಜ ಮಹಿಳಾ ಅಧ್ಯಕ್ಷೆ ಸವಿತಾ ಘಾಟ್ಕೆ , ನಿರೂಪಕ ಅಜಯ್ ಶಾಸ್ತ್ರಿ, ಮುಖಂಡರಾದ ರಂಗನಾಥ್, ಸುಶೀಲಾ, ಅಪೂರ್ವ ಸುರೇಶ್, ಸುಚಿಂದ್ರ, ಪುಷ್ಪವತಿ, ರಾಘವೇಂದ್ರ, ರಾಕೇಶ್, ಶಿವು ಇತರರು ಇದ್ದರು.