ನ್ಯೂಸ್

ಯುವ ಜನತೆ ಹುಲಿಗಳ ಮಹತ್ವ ಅರಿಯಲಿ

ಹನಗೋಡು: ಯುವ ಜನತೆ ಹುಲಿಗಳ ಮಹತ್ವವನ್ನು ಅರಿಯಬೇಕು ಎಂದು ಹುಣಸೂರು ವಲಯ ಅರಣ್ಯಾಧಿಕಾರಿ ಸುಬ್ರಮಣ್ಯ ಕರೆ ನೀಡಿದರು.

ಹನಗೋಡು ಹೋಬಳಿಯ ನೇರಳಕುಪ್ಪೆ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಧ್ಯಪ್ರದೇಶ ರಾಜ್ಯವು 785 ಹುಲಿಗಳನ್ನು ಹೊಂದುವ ಮೂಲಕ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯವು 563 ಹುಲಿಗಳನ್ನು ಹೊಂದಿ ದ್ವಿತೀಯ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಕರ್ನಾಟಕದ ಬಂಡಿಪುರ, ನಾಗರಹೊಳೆ, ಬಿಳಿಗಿರಿ ರಂಗನ ಬೆಟ್ಟ, ಭದ್ರಾ ಮತ್ತು ಕಾಳಿ ಅರಣ್ಯ ಪ್ರದೇಶಗಳು ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ. ಈ ದಟ್ಟ ಅರಣ್ಯದಿಂದ ಉತ್ತಮ ಗುಣಮಟ್ಟದ ಆಮ್ಲಜನಕ ದೊರಕುತ್ತಿದೆ. ಅಲ್ಲದೆ, ಪ್ರಕೃತಿ ಸಮತೋಲನಕ್ಕೆ ಕೊಡುಗೆ ನೀಡುತ್ತಿದೆ ಎಂದರು.

ಉಪ ವಲಯ ಅರಣ್ಯಾಧಿಕಾರಿ ಪ್ರಮೋದ್ ಮಾತನಾಡಿ, ಅರಣ್ಯಗಳ ಸಂರಕ್ಷಣೆಯಲ್ಲಿ ಹುಲಿಗಳ ಪಾತ್ರ ಪ್ರಮುಖವಾಗಿದೆ. 1973 ರಲ್ಲಿ ನಾಗರಹೊಳೆ ಅರಣ್ಯದಲ್ಲಿ 12ಹುಲಿಗಳಿದ್ದವು. 2022ರ ಗಣತಿಯಲ್ಲಿ 149 ಹುಲಿಗಳಿವೆ. ಇದಕ್ಕೆ ಜನರಲ್ಲಿ ಮೂಡಿದ ಜಾಗೃತಿ ಪ್ರಮುಖ ಕಾರಣವಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲ್ಪಟ್ಟ ಮೇಲೆ ಅಲ್ಲಿನ ಯಾವುದೇ ಸೊತ್ತುಗಳನ್ನು ಬಳಸಬಾರದು ಎಂಬ ನಿಯಮದ ಕಾರಣದಿಂದ ಅರಣ್ಯದಲ್ಲಿನ ಪ್ರತಿ ಜೀವಿಗಳು ಸ್ವತಂತ್ರೃವಾಗಿ ಜೀವಿಸಲು ಕಾರಣವಾಗಿದೆ ಎಂದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕ ಕುಮಾರಸ್ವಾಮಿ, ಶಿಕ್ಷಕ ಎನ್.ಎಲ್.ಲಕ್ಷ್ಮಣ, ಪ್ರೀತಿ, ಉಮಾ, ಅರಣ್ಯಪಾಲಕ ಕೃಷ್ಣ ಇತರರು ಇದ್ದರು.

ಚಿತ್ರ ಕಲಾ ಸ್ಪರ್ಧೆ: ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಪ್ರಯುಕ್ತ ಶಾಲಾ ವಿದ್ಯಾರ್ಥಿಗಳಲ್ಲಿ ಹುಲಿ ಸಂರಕ್ಷಣೆಯ ಮಹತ್ವ ತಿಳಿಯಲು ತರಗತಿವಾರು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ 30 ವಿದ್ಯಾರ್ಥಿಗಳು ಭಾಗವಹಿಸಿದ್ದರು.

10 ನೇ ತರಗತಿಯ ರಕ್ಷಿತಾ ಪ್ರಥಮ, ಆರ್. ವಿದ್ಯಾ ದ್ವಿತೀಯ, ಕೆ.ವಿದ್ಯಾ ತೃತೀಯಸ್ಥಾನ ಪಡೆದರು. 9ನೇ ತರಗತಿಯ ಅರ್ಪಿತಾ ಪ್ರಥಮ ಸ್ಥಾನ, ಶ್ವೇತಾ ಕೆ.ಎಂ ದ್ವಿತೀಯ ಸ್ಥಾನ ಹಾಗೂ ಲಾವಣ್ಯ ಎಸ್ ತೃತೀಯ ಸ್ಥಾನ ಪಡೆದರು. 8 ನೇ ತರಗತಿಯಿಂದ ಸ್ಪೂರ್ತಿ ವಿ.ಎ. ಪ್ರಥಮ ಸ್ಥಾನ, ಕೆ.ಅರ್ಪಿತಾ ದ್ವಿತೀಯ ಸ್ಥಾನ ಮತ್ತು ಎಚ್.ಅರ್ಪಿತಾ ತೃತೀಯ ಸ್ಥಾನ ಪಡೆದರು.