ಶಿವಮೊಗ್ಗ: ತೃತೀಯ ಲಿಂಗಿಗಳು ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಜಿಪಂ ಸಿಇಒ ಸ್ನೇಹಲ್ ಲೋಖಂಡೆ ಹೇಳಿದರು.
ಶನಿವಾರ ಸ್ವೀಪ್ ಸಮಿತಿಯಿಂದ ತೃತೀಯ ಲಿಂಗಿಗಳಿಗೆ ಏರ್ಪಡಿಸಿದ್ದ ಮತದಾರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡಬೇಕು ಎನ್ನುವ ಉದ್ದೇಶದಿಂದ ಕಾರ್ಯಕ್ರಮ ನಡೆಲಾಸಲಾಗುತ್ತಿದ್ದು. ಸಮಾಜದ ದಮನಿತರು ಮುಖ್ಯವಾಹಿನಿಗೆ ಬಂದು ಮತ ಚಲಾಯಿಸಬೇಕು ಎಂದರು.
ತೃತೀಯ ಲಿಂಗಿಗಳು ಸಮಾಜದ ಒಂದು ಭಾಗ. ಅವರು ಮತದಾರರ ನೋಂದಣಿಯಲ್ಲಿ ಹಿಂದೆ ಉಳಿಯಬಾರದು. ಪ್ರತಿಯೊಬ್ಬರೂ ನೋಂದಣಿ ಮಾಡಿಕೊಳ್ಳಬೇಕು. ಸಮಾಜದಲ್ಲಿ ಪುರುಷ, ಮಹಿಳೆಯರ ಜತೆಯಲ್ಲಿ ತೃತೀಯ ಲಿಂಗಿಗಳು ಅಭಿವೃದ್ಧಿಯಾಗಬೇಕು. ನಿಮ್ಮ ಧ್ವನಿ ಸಂಸತ್ತಿನಲ್ಲಿ ಕೇಳಿಸಬೇಕು ಎಂದು ತಿಳಿಸಿದರು.
ಜಿಪಂ ಮುಖ್ಯ ಯೋಜನಾಧಿಕಾರಿ ಗಾಯಿತ್ರಿ ಮಾತನಾಡಿ, ಸಂವಿಧಾನ ಪ್ರತಿಯೊಬ್ಬರಿಗೂ ಮೂಲ ಹಕ್ಕುಗಳನ್ನು ನೀಡಿದೆ. ನಾವು ನಮ್ಮ ಮೂಲ ಕರ್ತವ್ಯಗಳನ್ನು ಮರೆಯಬಾರದು. ಮತದಾನ ನಮ್ಮ ಕರ್ತವ್ಯ ಎಂದು ಭಾವಿಸಿ ಮತದಾನದಲ್ಲಿ ಭಾಗವಹಿಸಬೇಕು ಎಂದರು.
ಪಯಣ ಸಂಸ್ಥೆಯ ನಿರ್ದೇಶಕಿ ಚಾಂದಿನಿ ಮಾತನಾಡಿ, ತೃತೀಯ ಲಿಂಗಿಗಳು ವಾಸ್ತವ ಒಪ್ಪಿಕೊಳ್ಳಬೇಕು. ಸಮಾಜ ಕೂಡ ನಮ್ಮನ್ನು ಗೌರವಿಸಬೇಕು. ಮತದಾರರ ನೋಂದಣಿಯಲ್ಲಿ ಲಿಂಗ ನಮೂದಿಸಿಕೊಳ್ಳುತ್ತಿಲ್ಲ. ಪುರುಷ ಅಥವಾ ಮಹಿಳೆ ಎಂದು ನೋಂದಣಿ ಮಾಡಿಕೊಳ್ಳುತ್ತಾರೆ. ತೃತೀಯ ಲಿಂಗಿಗಳ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕಿದೆ ಎಂದು ತಿಳಿಸಿದರು.
ರಾಜ್ಯಮಟ್ಟದ ಸ್ವೀಪ್ ತರಬೇತುದಾರ ನವೀದ್ ಅಹಮದ್ ಫರ್ವೀಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಬಿ.ಕೃಷ್ಣಪ್ಪ, ಜಿಲ್ಲಾ ರಕ್ಷ ಸಮಿತಿ ಅಧ್ಯಕ್ಷ ಮೊಹಮ್ಮದ್ ಸೈಯದ್, ಅಭಯಧಾಮ ಸಂಸ್ಥೆಯ ಜಯಲಕ್ಷ್ಮಿ ಇದ್ದರು.