ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮೈಸೂರು ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್ ಮಾತನಾಡಿದರು. ಡಾ.ಡಿ.ಎಸ್ ಜಗದೀಶ್, ಶಿಲ್ಪಾಶ್ರೀ, ಜಲೇಂದ್ರ, ರೂಪ, ರಾಜೇಶ್, ಉದಯ್‌ಕುಮಾರ್, ಪ್ರತಿಮಾ, ಪ್ರಶಾಂತ್ ಇದ್ದರು. 
ನ್ಯೂಸ್

ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಿ

ಬೆಟ್ಟದಪುರ: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮೈಸೂರು ಜಿಲ್ಲಾ ವ್ಯವಸ್ಥಾಪಕ ಶಿವಕುಮಾರ್ ಸಲಹೆ ನೀಡಿದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ 2023-24ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್, ರೆಡ್‌ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯು ಕಾಲೇಜಿನಿಂದ ಮನೆಗೆ ಹೋದ ಬಳಿಕ ತಾವು ಕಲಿತ ಪಾಠಗಳ ಬಗ್ಗೆ ಮೆಲುಕು ಹಾಕಬೇಕು. ನಿಮ್ಮ ಬಗ್ಗೆ ನೀವೇ ಪರಿಶೋಧನೆ ಮಾಡಿಕೊಳ್ಳಬೇಕು. ಹಂತ ಹಂತವಾಗಿ ಕಲಿತು, ನಿಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು. ಜೀವನದಲ್ಲಿ ಒಂದೇ ಬಾರಿಗೆ ವಿದ್ಯಾರ್ಥಿ ಜೀವನ ಸಿಗುವುದರಿಂದ ಇಂತಹ ಸಂದರ್ಭದಲ್ಲಿ ಏಕಾಗ್ರತೆಯಿಂದ ಓದುವ ಮೂಲಕ ನಿರ್ಧಿಷ್ಟ ಗುರಿ ಇಟ್ಟುಕೊಂಡು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಾಂಶುಪಾಲ ಡಾ.ಡಿ.ಎಸ್ ಜಗದೀಶ್ ಮಾತನಾಡಿ, ಕಾಲೇಜು ಹಂತದಲ್ಲಿ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು. ಸರ್ಕಾರವು ಪ್ರತಿಯೊಬ್ಬರಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇಂತಹ ಅನೇಕ ಅವಕಾಶಗಳು ಇರುವಂತಹ ಸರ್ಕಾರಿ ಕಾಲೇಜುಗಳಲ್ಲಿ ಓದುವ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಜೀವನದಲ್ಲಿ ಉತ್ತಮ ಸ್ಥಾನಮಾನ ಪಡೆದು ಪಾಲಕರು ಹಾಗೂ ಗುರುಗಳಿಗೆ ಗೌರವ ತರಬೇಕಿದೆ ಎಂದರು.

ಬಹುಮಾನ ವಿತರಣೆ: ಕಾರ್ಯಕ್ರಮದಲ್ಲಿ ನಡೆದ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪನ್ಯಾಸಕರಾದ ಡಾ.ಶಿಲ್ಪಾಶ್ರೀ, ಜಲೇಂದ್ರ, ರೂಪ, ರಾಜೇಶ್, ಉದಯ್‌ಕುಮಾರ್, ಪ್ರತಿಮಾ, ಪ್ರಶಾಂತ್, ಸಿಬ್ಬಂದಿ ಭೈರಪ್ಪ,ನಾಗರಾಜೇಗೌಡ, ಅವಿನಾಶ್ ಮತ್ತಿತರರಿದ್ದರು.