ಬೆಂಗಳೂರು: ದೆಹಲಿಯಲ್ಲಿ 1984ರಲ್ಲಿ ನಡೆದ ದಳ್ಳುರಿ, ಸಿಖ್‌ರ ಹತ್ಯೆಯಲ್ಲಿ ಬೆಂದು, ನೊಂದವರಿಗೆ ಕಾಂಗ್ರೆಸ್‌ನವರು ಮೊದಲು ನ್ಯಾಯ ಕೊಡಿಸಲಿ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತೀಕ್ಷ್ಣ ತಿರುಗೇಟು ನೀಡಿದರು.
ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿಯವರು ಭಾರತ್ ಜೋಡೋ ನ್ಯಾಯ ಯಾತ್ರೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೆಹಲಿಯ ದಂಗೆ ಹಾಗೂ ಮುಗ್ಧ ಸಿಖ್‌ರ ಬರ್ಬರ ಹತ್ಯೆಯು ಕಾಂಗ್ರೆಸ್ ಮನೆತನದಿಂದ ಆಗಿದ್ದಿಲ್ಲವೆ ?, ಮೊದಲು ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿ ಎಂದು ಒತ್ತಾಯಿಸಿದರು.
ರಜೆಯ ಪ್ರವಾಸಕ್ಕೆ ಹೋದವರು ಬಹುಕಾಲ ದೇಶದಿಂದ ಹೊರಗೆ ಇರುತ್ತಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಜೋಡೋ ಯಾತ್ರೆ ಮೂಲಕ ಭಾರತದಲ್ಲಿ ಉಳಿದು, ತಮ್ಮ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ನೀಡುತ್ತಿರುವುದಕ್ಕೆ ಬೆಂಬಲಿಸುತ್ತೇವೆ ಎಂದು ಹರ್ದೀಪ್‌ಸಿಂಗ್ ಪುರಿ ಛೇಡಿಸಿದರು.
ರಾಹುಲ್ ಗಾಂಧಿ ಕೈಗೊಳ್ಳಲಿರುವ ಭಾರತ್ ಜೋಡೋ ನ್ಯಾಯ ಯಾತ್ರೆ ಮೂಲಕ ಕೇಂದ್ರ ಸರ್ಕಾರದ ನಿಜಬಣ್ಣ ಹೊರ ಹಾಕುವುದೇನು ಬಂತು. ವಿಕಸಿತ ಭಾರತ ಸಂಕಲ್ಪ ಯಾತ್ರೆ ಮುಖೇನ ನಿಖರ ಅಂಕಿ-ಅಂಶಗಳು, ಸಾಧನೆಗಳನ್ನು ಜನರ ಮುಂದಿಡುತ್ತಿದ್ದೇವೆ.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಲಾಭ ಪಡೆದ ಲಾನುಭವಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಯಾತ್ರೆ ಉದ್ದಕ್ಕೂ ಉತ್ತಮ ಸ್ಪಂದನೆ ಲಭಿಸುತ್ತದೆ. ಅದೇನೋ ಎಕ್ಸ್‌ಪೋಸ್ ಮಾಡಲು ಹೋಗಿ ಅವರೇ ಎಕ್ಸ್‌ಪೋಸ್ ಆದಾರು ಎಂದು ಹರ್ದೀಪ್‌ಸಿಂಗ್ ಗೇಲಿ ಮಾಡಿದರು.
ಪ್ರತಿಯೊಂದರಲ್ಲೂ ಚುನಾವಣೆ ರಾಜಕೀಯ ಲಾಭ ಹುಡುಕುವ, ಹತಾಶ ಮನಸ್ಥಿತಿಯ ಕಾಂಗ್ರೆಸ್‌ನ ಹೇಳಿಕೆಗಳಿಗೆ ಮಹತ್ವವಿಲ್ಲ. ನೀಡಬೇಕಾಗಿಯೂ ಇಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಹೊಸ ನೀತಿ-ನಿರ್ಧಾರ, ಯೋಜನೆಗಳ ಹಿಂದೆ ದೇಶದ ಭದ್ರತೆ, ಅಭಿವೃದ್ಧಿ, ಎಲ್ಲರ ಏಳಿಗೆ ದೃಷ್ಟಿಕೋನವಿರುತ್ತದೆಯೇ ಹೊರತು ಚುನಾವಣಾ ರಾಜಕೀಯ ಲಾಭದ ಅಜೆಂಡಾ ಇರುವುದಿಲ್ಲ.
ಆದರೆ ಕಾಂಗ್ರೆಸ್‌ನವರು ಚುನಾವಣಾ ರಾಜಕೀಯ ದೃಷ್ಟಿಯಲ್ಲಿ ನೋಡುತ್ತಾರೆ. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಹುಯಿಲೆಬ್ಬಿಸಿ ಮೌನಕ್ಕೆ ಶರಣಾದರು. ಸನಾತನ ಧರ್ಮದ ಬಗ್ಗೆ ಟೀಕೆ-ಟಿಪ್ಪಣಿಗೆ ಇಳಿದರು, ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ ಬಗ್ಗೆ ಆತಂಕಿತರಾಗಿದ್ದಾರೆ ಎಂದರು.
ಇಂಡಿ ಒಕ್ಕೂಟವೇ ಅಸ್ತಿತ್ವದಲ್ಲೇ ಇಲ್ಲದಿರುವಾಗ ಬಿಜೆಪಿ ವಿಭಜಿಸುವ ಪ್ರಶ್ನೆಯೇ ಉದ್ಭವಿಸದು. ಒಕ್ಕೂಟಕ್ಕೆ ಒಬ್ಬ ಸಂಚಾಲಕರನ್ನು ನೇಮಿಸಲಾಗಿಲ್ಲ. ಪ್ರಧಾನಿ ಅಭ್ಯರ್ಥಿ ವಿಚಾರದಲ್ಲಿ ಪೈಪೋಟಿಗೆ ಇಳಿದು, ಸೀಟುಗಳ ಹಂಚಿಕೆ ಕಡೆ ಅವರಿಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲವೆಂದು ತಿವಿದರು.
ದೇಶದಲ್ಲಿ ವಿಪುಲವಾಗಿ ಬೆಳೆಯುವ ಪ್ರವಾಸಿ ತಾಣಗಳಿವೆ. ಆ ಪೈಕಿ ಒಂದಾಗಿರುವ ಲಕ್ಷದ್ವೀಪಕ್ಕೆ ಆದ್ಯತೆ ನೀಡಲು ತಿಳಿಸಿದರೆ ಮಾಲ್ಡೀವ್ಸ್ ಮೇಲೆ ಪ್ರಭಾವ ಬೀರುತ್ತದೆ. ಮಾಲ್ಡೀವ್ಸ್ ವಿದ್ಯಮಾನವನ್ನು ಮೋದಿ ವೈಯಕ್ತಿಕವಾಗಿ ತೆಗೆದುಕೊಂಡಿದ್ದಾರೆ ಎನ್ನುತ್ತಿರುವುದು ಹಾಸ್ಯಾಸ್ಪದವಾಗಿದೆ.