ಕರೊನಾ ಸಂಕಷ್ಟ, ಅದರ ನಿಯಂತ್ರಣಕ್ಕೆ ವಿಧಿಸಲಾಗಿದ್ದ ಲಾಕ್ಡೌನ್ ಪರಿಣಾಮವಾಗಿ ಕುಸಿದಿದ್ದ ಆರ್ಥಿಕತೆ ಚೇತರಿಕೆಯ ಹಾದಿ ಹಿಡಿದಿರುವುದು ಸಮಾಧಾನಕರ ಬೆಳವಣಿಗೆ. ಜಿಡಿಪಿ ಏರಿಕೆಯ ಅಂಕಿಅಂಶಗಳು ಮಂಗಳವಾರವೇ ಬಿಡುಗಡೆಯಾಗಿದ್ದು, ಲಾಕ್ಡೌನ್ ಮುಂಚಿನ ಸ್ಥಿತಿಗಿಂತ ಹೆಚ್ಚು ಬೆಳವಣಿಗೆ ದಾಖಲಾಗಿದೆ (ಜುಲೈ-ಸೆಪ್ಟೆಂಬರ್ ಶೇಕಡ 8.4) ನವೆಂಬರ್ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) 1,31,526 ಕೋಟಿ ರೂ. ಸಂಗ್ರಹವಾಗಿದ್ದು, ಶೇ.25 ಬೆಳವಣಿಗೆ ದಾಖಲಾಗಿದೆ.
ಜಿಎಸ್ಟಿ ಅನುಷ್ಠಾನಕ್ಕೆ ಬಂದ ನಂತರದಲ್ಲಿ ಸಂಗ್ರಹವಾದ ಎರಡನೇ ಅತಿ ಹೆಚ್ಚಿನ ಮೊತ್ತ ಇದಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. ಸತತ ಐದನೇ ತಿಂಗಳು ಜಿಎಸ್ಟಿ ಸಂಗ್ರಹ ಒಂದು ಲಕ್ಷ ಕೋಟಿ ರೂ. ಗಡಿ ದಾಟಿರುವುದು ಗಮನಾರ್ಹ. ಕರ್ನಾಟಕ ಕೂಡ ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿ ಪ್ರಗತಿ ಕಂಡಿದೆ. 2021ರ ಏಪ್ರಿಲ್ನಿಂದ ನವೆಂಬರ್ ಅಂತ್ಯದವರೆಗೆ ರಾಜ್ಯದಲ್ಲಿ 51,467 ಕೋಟಿ ರೂ. ಸಂಗ್ರಹವಾಗಿದೆ. 2020ರ ಏಪ್ರಿಲ್ನಿಂದ ನವೆಂಬರ್ ಅವಧಿಯಲ್ಲಿ 43,319 ಕೋಟಿ ರೂ. ಸಂಗ್ರಹವಾಗಿತ್ತು. ಜನರಲ್ಲಿನ ಖರೀದಿ ಶಕ್ತಿ ಸುಧಾರಣೆ, ಖಾಸಗಿ ಕ್ಷೇತ್ರದಲ್ಲಿ ಕಡಿತವಾಗಿದ್ದ ವೇತನಗಳ ಮರುಸ್ಥಾಪನೆ, ಸಹಜ ಸ್ಥಿತಿಗೆ ಮರಳುತ್ತಿರುವ ಕೈಗಾರಿಕೆಗಳು, ಉತ್ಪಾದನಾ ಸಾಮರ್ಥ್ಯದ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದಾಗಿ ಜಿಎಸ್ಟಿ ಸಂಗ್ರಹ ಸುಧಾರಣೆ ಕಂಡಿದೆ.
ಇ- ವೇ ಬಿಲ್, ಇ ಇನ್ವಾಯ್ಸ್ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿರುವ ಕಾರಣ ತೆರಿಗೆ ವ್ಯಾಪ್ತಿಗೆ ಬರುವವರ ಸಂಖ್ಯೆಯೂ ವೃದ್ಧಿಯಾಗುತ್ತಿದೆ. ಈ ಮೂಲಕ ಸರ್ಕಾರದ ಆದಾಯ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಆದರೆ, ಮತ್ತೊಂದೆಡೆ, ಬೆಲೆಯೇರಿಕೆಯೂ ಹೆಚ್ಚಿದ್ದು, ಜನಸಾಮಾನ್ಯರ ಬದುಕನ್ನು ಹೈರಾಣಾಗಿಸಿದೆ. ಲಾಕ್ಡೌನ್ ಸಮಸ್ಯೆ, ವೇತನ ಕಡಿತದಂಥ ಸಮಸ್ಯೆಗಳಿಂದ ಈಗಾಗಲೇ ನಲುಗಿ ಹೋಗಿರುವ ಜನರು ಈಗ ಬೆಲೆಯೇರಿಕೆಯ ಸಂಕಷ್ಟದ ವಿರುದ್ಧ ಹೋರಾಡುವಂತಾಗಿದೆ. ಬುಧವಾರದಂದು ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ 100 ರೂಪಾಯಿ ಹೆಚ್ಚಿಸಲಾಗಿದೆ. ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ನ ಬೆಲೆ ಈಗ 2,101 ರೂಪಾಯಿಗೆ ತಲುಪಿದೆ.
ಏರುಮುಖ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆಗಳು ಅಬಕಾರಿ ಸುಂಕ ಕಡಿತದಿಂದ ಕೊಂಚ ಇಳಿಕೆಯಾಗಿವೆ. ಆದರೆ, ಆಹಾರಧಾನ್ಯಗಳು, ತರಕಾರಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆ ಏರುತ್ತಲೇ ಇದ್ದು, ಕುಟುಂಬಗಳ ತಿಂಗಳ ಬಜೆಟ್ನ್ನು ಡೋಲಾಯಮಾನವಾಗಿಸುತ್ತಿವೆ. ವಾಸ್ತವ ಹೀಗಿರುವಾಗ, ಬರೀ ಸರ್ಕಾರದ ಆದಾಯ ಹೆಚ್ಚಿದರೆ ಪ್ರಯೋಜನವೇನು? ಜಿಡಿಪಿ, ಜಿಎಸ್ಟಿಯ ಅಂಕಿಸಂಖ್ಯೆಗಳು ಜನರ ಬವಣೆ ನೀಗಿಸುವುದಿಲ್ಲ. ಹಾಗಾಗಿ, ಬೆಲೆಯೇರಿಕೆ ನಿಯಂತ್ರಿಸುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ಈ ವಿಷಯದಲ್ಲಿ ಕೇಂದ್ರ ವಿತ್ತ ಸಚಿವರು ಅಸಹಾಯಕತೆ ವ್ಯಕ್ತಪಡಿಸುವ ಬದಲು ಪರ್ಯಾಯ ಮಾಗೋಪಾಯಗಳ ಕುರಿತಂತೆ ಚಿಂತನೆ ನಡೆಸಿ, ಅವುಗಳ ಅನುಷ್ಠಾನದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಆಗಲೇ ಆರ್ಥಿಕ ಸುಧಾರಣೆಯ ಪಥ ವಿಸ್ತಾರಗೊಳ್ಳಲು ಸಾಧ್ಯ.