ಕರೊನಾ ಬಹುತೇಕ ಎಲ್ಲ ರಂಗಗಳಲ್ಲಿ ಕಳವಳ ಮೂಡಿಸಿದೆ ಎಂಬುದೇನೋ ನಿಜ. ಆದರೆ, ಈ ಬಾರಿ ಮುಂಗಾರು ಸಾಮಾನ್ಯವಾಗಿ ಇರುವುದರಿಂದ ಕೃಷಿ ಕ್ಷೇತ್ರದಲ್ಲಿ, ರೈತರಲ್ಲಿ ಹೊಸ ನೀರಿಕ್ಷೆ, ಭರವಸೆ ಮೂಡಿಸಿದೆ. ಅಲ್ಲದೆ, ಮರುವಲಸೆಯ ಕಾರಣ ಮಹಾನಗರಗಳಿಂದ ಗ್ರಾಮೀಣಿಗರು ಭಾರಿ ಸಂಖ್ಯೆಯಲ್ಲಿ ಹಳ್ಳಿಗಳನ್ನು ಸೇರಿಕೊಂಡಿದ್ದು, ಕೃಷಿಯತ್ತ ಮುಖ ಮಾಡಿದ್ದಾರೆ. ಕೃಷಿ ತೊರೆಯುವವರ ಸಂಖ್ಯೆ ಹೆಚ್ಚುತ್ತಿದೆ ಎಂಬ ಚಿಂತೆಯ ನಡುವೆ ಈ ವಿದ್ಯಮಾನ ಒಂದಷ್ಟು ಭರವಸೆ ಮೂಡಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಬಾರಿ ಕೃಷಿಕ್ಷೇತ್ರಕ್ಕೆ ನೆರವನ್ನೂ ಘೋಷಿಸಿವೆ. ಆದರೆ, ಇಲ್ಲಿ ಇನ್ನಷ್ಟು ಕೃಷಿಸೂಕ್ಷ್ಮಗಳನ್ನು ಗಮನಿಸಬೇಕಿದೆ. ಬಿತ್ತನೆ ಪ್ರಮಾಣ ಹೆಚ್ಚಲಿರುವುದರಿಂದ ಅದಕ್ಕೆ ಪೂರಕವಾಗಿ ಗುಣಮಟ್ಟದ ಬೀಜ, ರಸಗೊಬ್ಬರ ಪೂರೈಕೆಯತ್ತ ಗಮನ ಹರಿಸಬೇಕಿದೆ.
ಮುಂಗಾರು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಬೀಜಗಳಿಗೆ ಭಾರಿ ಬೇಡಿಕೆ ಇದೆ. ಈ ಬೇಡಿಕೆಯನ್ನು ಕಂಡು ಕೆಲವೆಡೆ ಬಿತ್ತನೆ ಬೀಜದ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಉದಾಹರಣೆಗೆ, ಕರ್ನಾಟಕದಲ್ಲಿ ಈರುಳ್ಳಿ ಬೆಳೆಯುವ ರೈತರ ಸಂಖ್ಯೆ ದೊಡ್ಡಪ್ರಮಾಣದಲ್ಲಿದೆ. ಉತ್ತಮ ಮಳೆಯ ಭರವಸೆಯಲ್ಲಿ ಈ ಬಾರಿಯೂ ರೈತರು ಈರುಳ್ಳಿ ಬೆಳೆಯಲು ಮುಂದಾಗಿದ್ದು, ಬೀಜದ ಕೊರತೆ ಎದುರಿಸುತ್ತಿದ್ದಾರೆ. ಅಲ್ಲದೆ, ಆಯಾ ಪ್ರಾಂತ್ಯದಲ್ಲಿ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯಲಾಗುತ್ತದೆ. ಮುಂಗಾರು ಹಂಗಾಮಿನಲ್ಲಿ ಸಾಮಾನ್ಯವಾಗಿ ತೊಗರಿ, ಜೋಳ, ಗೋಧಿ, ಸೂರ್ಯಕಾಂತಿ ಬೆಳೆಯುವುದು ವಾಡಿಕೆ. ರಾಜ್ಯದಲ್ಲಿ ಬಿತ್ತನೆ ಬೀಜದ ಬೇಡಿಕೆ ಎಷ್ಟಿದೆ, ಲಭ್ಯತೆ ಎಷ್ಟಿದೆ, ಕೊರತೆ ಇದ್ದಲ್ಲಿ ತಕ್ಷಣವೇ ಅದನ್ನು ನೀಗಿಸಲು ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಕೃಷಿ ಇಲಾಖೆ ಗಮನ ವಹಿಸಿ, ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಗುಣಮಟ್ಟದ ಬೀಜ ದೊರೆಯದಿದ್ದಲ್ಲಿ ಅಥವಾ ಅದರ ಕೃತಕ ಅಭಾವ ಸೃಷ್ಟಿಸಿ ಬೆಲೆ ಹೆಚ್ಚಿಸಿದಲ್ಲಿ ಈಗಾಗಲೇ ಸಂಕಷ್ಟದಲ್ಲಿರುವ ರೈತರು ಹೊಸದೊಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಹಾಗಾಗುವ ಮುನ್ನವೇ ಸಂಬಂಧಿತರು ಎಚ್ಚೆತ್ತುಕೊಳ್ಳಬೇಕಿದೆ.
ಸಮಸ್ಯೆಯ ಇನ್ನೊಂದು ಮುಖವನ್ನೂ ಗಮನಿಸಬೇಕು. ಬೆಳೆ ಚೆನ್ನಾಗಿ ಬಂದರೂ, ಕೃಷಿ ಉತ್ಪನ್ನಗಳ ಉತ್ಪಾದನೆ ಹೆಚ್ಚಿದರೂ ರೈತರಿಗೆ ನ್ಯಾಯಯುತವಾದ ಬೆಲೆ ಸಿಗುವುದಿಲ್ಲ ಎಂಬುದು ಕಠೋರ ಸತ್ಯ. ಒಂದೋ ಮಧ್ಯವರ್ತಿಗಳ ಪಾಲಾಗುತ್ತದೆ ಇಲ್ಲವೆ ಕೃತಕ ಅಭಾವವನ್ನು ಸೃಷ್ಟಿಸಿ ಕಾಳಮಾರುಕಟ್ಟೆಯ ಹಾವಳಿ ತೀವ್ರವಾಗುತ್ತದೆ. ಬೀಜಬಿತ್ತನೆಯಿಂದ ಹಿಡಿದು ಕಟಾವಿನವರೆಗೆ ಹಲವು ಬಗೆಯ ಖರ್ಚುಗಳನ್ನು ಸರಿದೂಗಿಸುವ ರೈತ, ಸಹಜವಾಗಿಯೇ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ಇರುತ್ತಾನೆ. ಮಾರುಕಟ್ಟೆಗೆ ಹೆಚ್ಚು ಕೃಷಿ ಉತ್ಪನ್ನಗಳು ಬಂದು ಸೇರಿದಾಗ ಬೆಲೆ ದಿಢೀರನೆ ಕುಸಿತವಾಗಿದ್ದನ್ನು ಕಂಡು ಕಂಗಾಲಾಗುತ್ತಾನೆ. ಸಾಲಸೋಲ ಮಾಡಿ ಬೆಳೆ ಬೆಳೆದಿದ್ದರಿಂದ ಬರುವ ಬೆಲೆಗೆ ಮಾರಾಟ ಮಾಡುವ ಸಂದಿಗ್ಧತೆ. ವ್ಯವಸ್ಥೆಯ ಇಂಥ ಲೋಪ, ಸಮಸ್ಯೆಗಳಿಂದಲೇ ಕೃಷಿಕ ನಷ್ಟದ ಸುಳಿಯಿಂದ ಆಚೆ ಬರುತ್ತಿಲ್ಲ. ಹೊಸ ಉತ್ಸಾಹದಿಂದ ಸಜ್ಜಾಗುತ್ತಿರುವ ಕೃಷಿರಂಗಕ್ಕೆ ಮತ್ತೆ ಹಳೆಯ ಸಮಸ್ಯೆಗಳು ಕಾಡದಿರಲಿ. ಆ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕಾಳಜಿ ವಹಿಸಲಿ.