ಶಿವಮೊಗ್ಗ: ಜನಸಂಖ್ಯೆಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಇದನ್ನು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡಿ ಸರಿಯಾಗಿ ಬಳಸಿಕೊಂಡರೆ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಡಳಿತದಿಂದ ಎಟಿಎನ್‌ಸಿ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರವು ಕೌಟುಂಬಿಕ ಜೀವನದಿಂದ ಹೊರಬರುತ್ತಿರುವುದನ್ನು ತಡೆಯಬೇಕು. ಸಂಪ್ರದಾಯಗಳ ಜತೆಗೆ ಅಣ್ಣ- ತಮ್ಮ, ಅಕ್ಕ- ತಂಗಿ ಬಾಂಧವ್ಯ ಮರೆಯಾಗದಂತೆ ನೋಡಿಕೊಳಬೇಕು. ಅಲ್ಲದೆ ಕುಟುಂಬಗಳಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದು ಮುಖ್ಯ ಎಂದರು.
ಡಿಎಚ್‌ಒ ಡಾ. ನಟರಾಜ್ ಮಾತನಾಡಿ, ದೇಶದಲ್ಲಿ ಜನಸಂಖ್ಯೆ ಹೆಚ್ಚಾದರೆ ಬಡತನ, ಶಿಕ್ಷಣ, ನಿರುದ್ಯೋಗ ಮತ್ತಿತರರು ಸಮಸ್ಯೆಗಳು ಉಂಟಾಗುತ್ತವೆ. ಜನಸಂಖ್ಯೆ ಕಡಿಮೆಯಾದರೆ ಮಾನವ ಸಂಪನ್ಮೂಲ ಕೊರತೆ ಎದುರಿಸಬೇಕಾಗುತ್ತದೆ. ಹಾಗಾಗಿ ಜನಸಂಖ್ಯೆಯಲ್ಲಿ ಸಮತೋಲನ ಕಾಪಾಡಿಕೊಂಡರೆ ಸಮಸ್ಯೆಯನ್ನು ಬಗೆಹರಿಸಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಹೇಳಿದರು.
ಎಟಿಎನ್‌ಸಿ ಕಾಲೇಜಿನ ಪ್ರಾಚಾರ್ಯೆ ಪ್ರೊ. ಪಿ.ಆರ್.ಮಮತಾ ಮಾತನಾಡಿ, ವಿದೇಶಗಳಲ್ಲಿ ಜನಸಂಖ್ಯಾ ನಿಯಂತ್ರಣಕ್ಕೆ ಅನುಸರಿಸುತ್ತಿರುವ ಮಾರ್ಗಗಳ ಬಗ್ಗೆ ತಿಳಿಸಿದರು. ಚೀನಾ, ಜಪಾನ್ ದೇಶಗಳು ತಂದಿರುವ ನಿಯಮಗಳ ಪರಿಣಾಮವನ್ನು ವಿವರಿಸಿದರು.
ಸಂಪನ್ಮೂಲ ವ್ಯಕ್ತಿ ಡಾ. ರೇಷ್ಮಾ ಮಾತನಾಡಿ, 1871ರಲ್ಲಿ ಬ್ರಿಟಿಷರು ಭಾರತಕ್ಕೆ ಜನಸಂಖ್ಯೆ ಎಣಿಕೆಯ ಕಲ್ಪನೆಯನ್ನು ತಂದರು. ನಂತರ 1984ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಪ್ರಪಂಚ ಜನಸಂಖ್ಯೆ ಗಣತಿಯನ್ನು ಮಾಡಿ 5 ಬಿಲಿಯನ್ ಜನರಿದ್ದಾರೆ ಎಂದು ವರದಿ ನೀಡಿತ್ತು. ಅಂದಿನಿಂದ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ವೆಂಕಟೇಶ್, ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಡಾ. ಗುಡದಪ್ಪ ಕಸಬಿ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ನಾಗರಾಜ್ ನಾಯ್ಕ ಇತರರಿದ್ದರು.