ಪಿರಿಯಾಪಟ್ಟಣ: ಗ್ರಾಮೀಣ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನರೇಗಾ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಶಾಸಕ ಕೆ.ಮಹದೇವ್ ಸಲಹೆ ನೀಡಿದರು.
ತಾಲೂಕಿನ ಮುತ್ತಿನ ಮುಳಸೋಗೆ ಗ್ರಾಮದಲ್ಲಿ ತಾಪಂ ಅನುದಾನದಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು. ಕೋವಿಡ್ 19ನಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬವಾಗುತ್ತಿದೆ. ಹೀಗಾಗಿ ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಕೈಗೊಳ್ಳಲು ಯಾವುದೇ ತೊಂದರೆ ಇಲ್ಲ ಎಂದರು.
ಗ್ರಾಮದಲ್ಲಿ 12 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವಾಲ್ಮೀಕಿ ಭವನದ ಕಾಮಗಾರಿಯನ್ನು ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ಭೂಸೇನಾ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸದಸ್ಯ ಪಿ.ರಾಜೇಂದ್ರ ಮಾತನಾಡಿ, ಆವರ್ತಿ, ಮುತ್ತಿನ ಮುಳಸೋಗೆ, ಸೇರಿದಂತೆ ಈ ಭಾಗದಲ್ಲಿನ ಹಲವು ಗ್ರಾಮಗಳು ಬೆಟ್ಟದಪುರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಸೇರುತ್ತಿದ್ದು ಅದನ್ನು ಬೈಲಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಗೆ ವರ್ಗಾಯಿಸಿ ಕೊಡಬೇಕೆಂದು ಮನವಿ ಮಾಡಿದರು.
ಮುತ್ತಿನ ಮುಳಸೋಗೆ ಗ್ರಾಮ ವ್ಯಾಪ್ತಿಯಲ್ಲಿ ಕಾವೇರಿ ನದಿ ಬಳಿ ಸೋಪಾನ ಕಟ್ಟೆ ನಿರ್ಮಿಸಿಕೊಡುವಂತೆ ಹಾಗೂ ಇತಿಹಾಸ ಪ್ರಸಿದ್ಧ ದೇವಸ್ಥಾನಗಳನ್ನು ಜೀರ್ಣೋದ್ಧಾರಗೊಳಿಸುವಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಸಲ್ಲಿಸಿದರು.
ಬೆಣಗಾಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಂದರೇಗೌಡ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಸಿ.ಚಂದ್ರಶೇಖರ, ಮುಖಂಡರಾದ ಸೋಮಶೇಖರ್, ರಾಮೇಗೌಡ, ರಾಜೇಗೌಡ ಮತ್ತಿತರರು ಉಪಸ್ಥಿತರಿದ್ದರು.