ರಿಪ್ಪನ್‌ಪೇಟೆ: ಸಮಾಜವನ್ನು ಸರಿ ದಿಕ್ಕಿನಲ್ಲಿ ತರುವವನೇ ನಿಜವಾದ ಗುರು. ಮಠಗಳು ಸಹ ಸಮಾಜವನ್ನು ಸಂಘಟಿಸುವ ಮೂಲಕ ದಾರಿ ತಪ್ಪಿದವರನ್ನು ಸರಿಯಾದ ಮಾರ್ಗದಲ್ಲಿ ಕರೆದೊಯುತ್ತವೆ ಎಂದು ಆನಂದಪುರ ಮುರುಘಾ ಮಠದ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ಕೋಣಂದೂರು ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಧನುರ್ಮಾಸದ ಮುಕ್ತಾಯ ಸಮಾರಂಭ ಮತ್ತು ಶ್ರೀ ಶಿವಲಿಂಗ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಗುರುಗಳಾದವರು ಭಕ್ತರು ಮತ್ತು ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಿಕೊಂಡು ಹೋಗಬೇಕು. ಈ ಮೂಲಕ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಮುಂದಿನ ಪೀಳಿಗೆಯಲ್ಲಿ ಬೆಳಸುವಂತೆ ಮಾಡಬೇಕು. ಹಣ ಮಾಡುವುದೇ ಗುರಿಯಾಗಬಾರದು. ಸಂಪಾದನೆಯ ಅಲ್ಪ ಹಣವನ್ನು ಧರ್ಮದ ಕಾರ್ಯಗಳಿಗೆ ಬಳಸಿದರೆ ಸಮಾಜ ಮುನ್ನಡೆಸಲು ಸಾಧ್ಯ ಎಂದರು.
ಮಠಗಳಿಗೆ ನೀಡುವ ದಾನದ ಹಣ ತ್ರಿವಿಧ ದಾಸೋಹಕ್ಕೆ ಸದ್ಬಳಕೆಯಾಗುತ್ತದೆ. ಇದರಿಂದ ಮಠಮಾನ್ಯಗಳ ಪ್ರಗತಿಯೊಂದಿಗೆ ಸಮಾಜ ಉದ್ಧಾರವಾಗುತ್ತದೆ. ಅವರು ಕೋಣಂದೂರು ಬೃಹನ್ಮಠ ಶ್ರೀಮಂತವಲ್ಲದಿದ್ದರೂ ಭಕ್ತರ ಹೃದಯದಲ್ಲಿ ಶ್ರೀಮಂತವಾಗಿದೆ. ಈ ದಿಸೆಯಲ್ಲಿ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ಭಕ್ತರ ಹೃದಯ ಗೆದ್ದಿದ್ದಾರೆ ಎಂದು ಹೇಳಿದರು.
ಕೋಣಂದೂರು ಬೃಹನ್ಮಠದಿಂದ ಶ್ರೀ ಶಿವಲಿಂಗ ಪ್ರಶಸ್ತಿಯನ್ನು ಸಾಗರದ ಹಿರಿಯ ವಕೀಲ ಎಂ.ಎಸ್.ಗೌಡ ಅವರಿಗೆ ಪ್ರದಾನ ಮಾಡಿದರು. ಧರ್ಮ ಸಮಾರಂಭವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಕೋಣಂದೂರು ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೆಟ್ಟೆಹಳ್ಳಿ ಕಬ್ಬಿನಕಂತಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ತೊಗರ್ಸಿ ಮಳೆಹಿರೇಮಠದ ಶ್ರೀ ಮಹಾಂತ ಸ್ವಾಮೀಜಿ, ರಾಮಘಟ್ಟದ ಶ್ರೀ ರೇವಣಸಿದ್ದ ಸ್ವಾಮೀಜಿ, ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮಿಜಿ, ಗುತ್ತಲಕಲ್ಮಠದ ಶ್ರೀ ಪ್ರಭು ಮಹಾಸ್ವಾಮೀಜಿ, ರಾಂಪುರ ಶ್ರೀ ಶಿವಕುಮಾರ ಹಾಲಸ್ವಾಮಿಗಳು, ಗೋವಿನಕೋವಿ ಶ್ರೀ ಶಿವಯೋಗಿ ಮಹಾಲಿಂಗ ಸ್ವಾಮೀಜಿ, ಎಂಎಲ್‌ಸಿ ಡಾ.ಧನಂಜಯ ಸರ್ಜಿ, ಉದ್ಯಮಿ ಕೆ.ಆರ್.ಪ್ರಕಾಶ್, ಅಕ್ಷಯ ಸಹಕಾರ ಸಂಘದ ಅಧ್ಯಕ್ಷ ದಿನೇಶ್, ಹಾಲಸ್ವಾಮಿ ಗೌಡ, ವಾಗಿಶ್ ಸ್ವಾಮಿ, ಕೆ.ಎಂ.ಮೋಹನ್, ಎಂ.ಆರ್.ಸತೀಶ್, ನಿವೃತ್ತ ಪ್ರಾಚಾರ್ಯ ಪಂಚಾಕ್ಷರಯ್ಯ ಹಿರೇಮಠ ಇತರರಿದ್ದರು.