ಗುಂಡ್ಲುಪೇಟೆ ಪಟ್ಟಣದ ನ್ಯಾಯಾಲಯದಲ್ಲಿ ಬಸವರಾಜ ತಳವಾರ್ ಮಾತನಾಡಿದರು. ಜೆ.ಜೆ.ಶಿವಕುಮಾರ್, ರೇವಣ್ಣ, ವೆಂಕಟೇಶ ಇದ್ದರು. 
ನ್ಯೂಸ್

ದೀರ್ಘಕಾಲದ ಪ್ರಕರಣಗಳು ವಿಲೇವಾರಿಯಾಗಲಿ

ಗುಂಡ್ಲುಪೇಟೆ : ದೀರ್ಘಕಾಲದಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಪ್ರಕರಣಗಳನ್ನು ಲೋಕ ಅದಾಲತ್‌ನಲ್ಲಿ ವಿಲೇವಾರಿ ಮಾಡಲು ವಕೀಲರು ಮುಂದಾಗಬೇಕು ಎಂದು ಹಿರಿಯ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ ತಳವಾರ್ ಹೇಳಿದರು.

ಪಟ್ಟಣದ ನ್ಯಾಯಾಲಯದಲ್ಲಿ ಲೋಕ ಅದಾಲತ್ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ನ್ಯಾಯಾಲಯಗಳು ಎಲ್ಲ ಪ್ರಕರಣಗಳಲ್ಲಿಯೂ ಶೀಘ್ರನ್ಯಾಯ ದೊರಕಿಸಬೇಕಾಗಿವೆ. ಆದರೆ ನಾನಾ ಕಾರಣಗಳಿಂದ ಬಹಳಷ್ಟು ಪ್ರಕರಣಗಳು ವಿಲೇವಾರಿಯಾಗದೆ ತುಂಬ ವಿಳಂಬವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಇಂಥ ಪ್ರಕರಣಗಳ ವಿಲೇವಾರಿಗೆ ಮೆಗಾ ಲೋಕ ಅದಾಲತ್ ಆಯೋಜಿಸುವ ಮೂಲಕ ಕ್ರಮ ಕೈಗೊಳ್ಳುತ್ತಿದೆ. ಈ ಬಾರಿ ಈ ವರ್ಷದ ಕೊನೆಯ ಲೋಕ್ ಅದಾಲತ್ ನಡೆಯಲಿದ್ದು ವಕೀಲರು ಹಾಗೂ ವಕೀಲರ ಸಂಘದವರು ದೀರ್ಘಕಾಲದಿಂದ ವಿಚಾರಣೆ ಮುಂದೂಡುತ್ತಿರುವ ಪ್ರಕರಣಗಳಲ್ಲಿ ಮಾತುಕತೆ ಮೂಲಕ ರಾಜಿ ಸಂಧಾನ ಏರ್ಪಡಿಸಿ ಇತ್ಯರ್ಥಗೊಳಿಸಲು ಕಕ್ಷಿದಾರರನ್ನು ಮನವೊಲಿಸಬೇಕು ಎಂದು ಹೇಳಿದರು.

ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಜೆ.ಜೆ.ಶಿವಕುಮಾರ್, ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ರೇವಣ್ಣ, ಮಹಮದ್ ವಸೀಂಉಲ್ಲ, ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ ಹಾಗೂ ಇತರರು ಇದ್ದರು.