ಕೋಲಾರ: ಜಾತಿಗಣತಿ ವರದಿ ಮತ್ತೊಮ್ಮೆ ಪರಿಶೀಲಿಸಬೇಕು, ಇತರ ಜನಾಂಗದವರು ಕರಗ ಹೊರುವುದನ್ನು ನಿಲ್ಲಿಸಿ, ಕಾರ್ಯಕ್ರಮವನ್ನು ಸರ್ಕಾರದಿಂದ ಆಚರಿಸಲು ಕ್ರಮವಹಿಸಬೇಕು ಎಂದು ಒತ್ತಾಯಿಸಿ ತಿಗಳ ಸಮುದಾಯದ ಮುಖಂಡರು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.
ಜಿಲ್ಲಾ ವಹ್ನಿಕುಲ ತಿಗಳ ಸಮನ್ವಯ ಸಮಿತಿ ಸಂಸ್ಥಾಪಕ ಅಧ್ಯಕ್ಷ ಎಲ್.ಎ.ಮಂಜುನಾಥ್ ಮಾತನಾಡಿ, ಸಾವಿರಾರು ವರ್ಷಗಳಿಂದ ಶ್ರೀ ದ್ರೌಪದಾಂಬ ದೇವಾಲಯಗಳಲ್ಲಿ ಮಾತ್ರ ಕರಗ ಶಕ್ತ್ಯುತ್ಸವ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ.
ಆದರೆ ಬರಬರುತ್ತಾ ಇತರೆ ಸಮುದಾಯದವರು ಜಾತ್ರೆ, ಉತ್ಸವಗಳ ಸಂದರ್ಭಗಳಲ್ಲಿ ಯಾವುದೇ ಧಾರ್ಮಿಕ ಶಿಷ್ಟಾಚಾರಗಳಿಲ್ಲದೆ ಕೇವಲ ಮನರಂಜನೆಗಾಗಿ ಆಚರಿಸುತ್ತಾ ಸಂಪ್ರದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪುರಾತನ ಕಾಲದಿಂದಲೂ ವಕ್ನಿಕುಲ ಕ್ಷತ್ರಿಯ ಜನಾಂಗದವರು ಧರ್ಮರಾಯಸ್ವಾಮಿ ದೇವಾಲಯಗಳಲ್ಲಿ ಮಾತ್ರ ಜನಾಂಗದ ಆಚಾರ-&ವಿಚಾರ, ನೀತಿಗಳನ್ನು ಪಾಲಿಸುವ ಮೂಲಕ ಕುಲದೇವತೆಯ ಘನತೆ ಗೌರವಗಳನ್ನು ಕಾಪಾಡಿಕೊಂಡು ಬರುತ್ತಿದ್ದಾರೆ ಎಂದರು.
ತಿಗಳ ಸಮುದಾಯವು ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿದ್ದು, ಕಳೆದ ಕೆಲವು ವರ್ಷಗಳಿಂದ ತಮ್ಮನ್ನು ಪ್ರವರ್ಗ 2ಎ ಜಿ ಪ್ರವರ್ಗ 1ಕ್ಕೆ ಅನುಪಾತದೊಂದಿಗೆ ಸೇರಿಸುವಂತೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗವು ಸಹ ಶಿಾರಸು ಮಾಡಿದೆ. ಅದನ್ನು ಸರ್ಕಾರ ಪರಿಗಣಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ 5 ಲಕ್ಷ ಜನಸಂಖ್ಯೆ ಇದೆ ಎಂದು ಜಾತಿ ಗಣತಿ ವರದಿಯಲ್ಲಿ ತೋರಿಸಲಾಗಿದೆ. ರಾಜ್ಯದಲ್ಲಿ ನಮ್ಮ ಸಮುದಾಯ ಸುಮಾರು 25 ರಿಂದ 30 ಲಕ್ಷ ಜನಸಂಖ್ಯೆ ಇದೆ, ಆದ್ದರಿಂದ ಜಾತಿ ಜನಗಣತಿಯನ್ನು ಮತ್ತೆ ಪರಿಶೀಲಿಸಿ ವರದಿ ಜಾರಿ ಮಾಡಬೇಕು ಎಂದು ಕೋರಿದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ವೆಂಕಟೇಶ್, ಗೌರವಾಧ್ಯಕ್ಷ ಪಲ್ಲವಿ ಮಣಿ, ಕಾರ್ಯದರ್ಶಿ ಫಲ್ಗುಣ, ಸಮುದಾಯದ ಮುಖಂಡರಾದ ವೆಂಕಟೇಶಪ್ಪ, ಎಚ್.ಆರ್. ನಾರಾಯಣಪ್ಪ, ಬಿ.ಎಂ. ಶ್ರೀನಿವಾಸ್, ಜಿ.ಶ್ರೀನಿವಾಸ್, ವಿ.ಪಿ. ಪ್ರಕಾಶ್, ಮೋಹನ್ ಬಾಬು, ಮುನಿಯಪ್ಪ ಇದ್ದರು.