ನ್ಯೂಸ್

ಸಿಂಕ್ ಮುಳುಗಲಿ ಕೈಬಚ್ಚಲು ಎಂಬ ಕನ್ನಡ ಪದ ಮೊಳಗಲಿ!

ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು... ಎಂದ ಹುಯಿಲಗೋಳ ನಾರಾಯಣರಾಯರ ಕ್ಷಮೆ ಕೋರಿ ಈ ಜನಪ್ರಿಯ ಕವನದ ಸಾಲನ್ನು ಒಂದು ಚಮತ್ಕಾರಕ್ಕಾಗಿ ‘ಉ-ದಯವಾದರೆ ನಮ್ಮ ಚೆಲುವ ಕನ್ನಡ ನುಡಿಯು...’ ಎನ್ನೋಣ. ಏನದು ಚಮತ್ಕಾರ? ನೀವೆಂದಾದರೂ ಗಮನಿಸಿದ್ದೀರಾ, ಕನ್ನಡ ಭಾಷೆಗೆ ಉ ಎಂಬ ಸ್ವರಾಕ್ಷರವು ಮಾಡಿರುವ ಉಪಕಾರವನ್ನು? ಒಮ್ಮೆ 1ರಿಂದ 999ರವರೆಗಿನ ಸಂಖ್ಯೆಗಳನ್ನು ಅನುಕ್ರಮವಾಗಿ ಹೇಳಿನೋಡಿ. ಒಂದು, ಎರಡು, ಮೂರು, ನಾಲ್ಕು,.. ಐವತ್ತು, ನೂರು, ಐನೂರು... ಒಂಬೈನೂರತೊಂಬತ್ತೊಂಬತ್ತು. ಇವೆಲ್ಲ ಸಂಖ್ಯೆಗಳೂ ಉ ಸ್ವರದಿಂದಲೇ ಕೊನೆಗೊಳ್ಳುತ್ತವೆ! ಇಷ್ಟೇ ಅಲ್ಲ ಉ ಮಹಿಮೆ. ಕನ್ನಡದಲ್ಲಿ ಯಾವುದೇ ನಾಮಪದವನ್ನಾದರೂ- ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ ಲಿಂಗಭೇದವಿಲ್ಲದೆ- ಪ್ರಥಮಾ ವಿಭಕ್ತಿಯಲ್ಲಿ ತಂದುನಿಲ್ಲಿಸಲಿಕ್ಕೆ ಉ ಎಂದು ಸೇರಿಸಬೇಕು: ರಾಮನು, ಸೀತೆಯು, ಬೆಟ್ಟವು, ನದಿಯು, ಗಂಗೆಯು, ಪತ್ರಿಕೆಯು, ಅಂಕಣವು... ಹೌದಲ್ವಾ? ತಾಳಿ, ಇನ್ನೂ ಒಂದಿದೆ ಕನ್ನಡಕ್ಕೆ ಉ ಮಾಡುವ ಉಪಕಾರ. ಇಂಗ್ಲಿಷ್ ಪದದ ಕೊನೆಯಲ್ಲೊಂದು ಉ ಸೇರಿಸಿದರೆ ಅದು ಸಲೀಸಾಗಿ ಕನ್ನಡದ್ದಾಗುತ್ತದೆ! ಕಾರು, ಬಸ್ಸು, ರೈಲು, ಗ್ಲಾಸು, ಪ್ಲೇಟು, ಬನ್ನು, ಪೆನ್ನು... ಇವನ್ನೆಲ್ಲ ಹೀಗೆಯೇ ತಾನೆ ಕನ್ನಡಕ್ಕೆ ಆಮದು ಮಾಡಿಕೊಂಡಿದ್ದು? ಆದ್ದರಿಂದಲೇ, ಉ-ದಯವಾದರೆ, ಅರ್ಥಾತ್ ಉ ಅಕ್ಷರವು ದಯತೋರಿದರೆ, ಕನ್ನಡ ನುಡಿ ಚೆಲುವಾಗುತ್ತದೆ!

ಇದೇ ತರ್ಕದಿಂದ sump ಎಂಬ ಇಂಗ್ಲಿಷ್ ಪದವನ್ನು ಕನ್ನಡದಲ್ಲಿ ‘ಸಂಪು’ ಎಂದರಾಯ್ತಪ್ಪ! ಹೇಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟುವಿನಲ್ಲಿ ಸಂಪು ಪದದ ಮೂರನೆಯ ಅರ್ಥವಾಗಿ ‘ನೆಲದ ಕೆಳಮಟ್ಟದಲ್ಲಿ ಕಟ್ಟಿದ ನೀರಿನ ತೊಟ್ಟಿ’ ಎಂದಿದೆ; ಇಂಗ್ಲಿಷ್​ನಿಂದ ಬಂದ ಪದ ಎಂಬ ವಿವರಣೆಯಿದೆ; ‘ನಮ್ಮ ಕಚೇರಿಯಲ್ಲಿ ಸಂಪು ಇದ್ದರೂ ನೀರಿನ ಕೊರತೆ ತಪ್ಪಿದ್ದಲ್ಲ’ ಎಂಬ ಬಳಕೆಯ ಉದಾಹರಣೆಯೂ ಇದೆ. ಆದರೆ ಈ ವಾಕ್ಯದಲ್ಲೇ ಗಮನಿಸಿ. ಕಚೇರಿಯಲ್ಲಿ ಸಂಪು ಎಂದೊಡನೆ ಥಟ್ಟನೆ ನೆನಪಾಗುವುದು ಮುಷ್ಕರ, ಚಳುವಳಿ. ಸಂಪು ಪದದ ಈ ಅರ್ಥ ಮರಾಠಿಯ ಸಂಪ ಪದದಿಂದ ಬಂದದ್ದು. ಇನ್ನು, ಸೊಂಪು ಎಂಬರ್ಥದಲ್ಲೂ ಸಂಪು ಪದವನ್ನು ಹಳಗನ್ನಡದಲ್ಲಿ ಬಳಸಿದ್ದಿದೆ. ‘ಮಂದಗಮನೆಯರ ಬಲು ಸೋಲಿಸುವ ಸಂಪಿನಲಿ ಒಂದೊಂದು ಬೆರಗಿನ ಸ್ವರಮಣನ ಕಂಡೆನಾ...’, ‘ಕೊಳದ ತೀರದೊಳಿರ್ದ ಪಲ್ಲವಾನ್ವಿತದ ತಣ್ಣೆಳಲ ತಂಪಿನ ಸಂಪಿನಿಂ ಕಂಗೊಳಿಸುವ...’ ಇತ್ಯಾದಿ. ಇನ್ನೊಂದು ದೊಡ್ಡ ತೊಂದರೆಯೆಂದರೆ ನೀರಿನ ತೊಟ್ಟಿ ಎಂಬರ್ಥದಲ್ಲೇ ಸಂಪು ಬಳಸುತ್ತೇವೆಂದು ಹೊರಟರೂ- ‘ಸಂಪಿಗೆ ಬಿದ್ದು ಬಾಲಕನ ಸಾವು’ ರೀತಿಯ ತಲೆಬರಹಗಳನ್ನು ಪತ್ರಿಕೆಗಳಲ್ಲಿ ಓದುವಾಗ ಗೊಂದಲವುಂಟಾಗುತ್ತದೆ. ಬಾಲಕನ ಪ್ರಾಣಕ್ಕೆ ಮುಳುವಾಗುವಷ್ಟು ರಭಸದಿಂದ ಸಂಪಿಗೆಹೂ ಬಿದ್ದಿರಬಹುದೇ? ಎಂದು ತಲೆ ಯೋಚನೆಗೀಡಾಗುತ್ತದೆ.

ಇದನ್ನೆಲ್ಲ ತಪ್ಪಿಸಲಿಕ್ಕೆ sump ಎನ್ನಲಿಕ್ಕೆ ಒಳ್ಳೆಯದೊಂದು ಪರ್ಯಾಯಪದ ಅಗತ್ಯವಿದೆ. ಈ ದೃಷ್ಟಿಯಿಂದ, ನಿಮ್ಮಲ್ಲನೇಕರು ಸೂಚಿಸಿದ ‘ನೆಲತೊಟ್ಟಿ’ ಚೆನ್ನಾಗಿದೆ. ಅಚ್ಚಕನ್ನಡದ್ದಾಗಿದೆ ಮತ್ತು ಕೇಳಿದ/ಓದಿದ ಕೂಡಲೇ ಏನಿರಬಹುದೆಂದು ಗೊತ್ತಾಗುವಂತಿದೆ. ಸೂಚಿಸಿದವರು: ರಾಘವೇಂದ್ರ ಸಂಗಮ, ಶಾಂತಲಾ ಕೆ.ಎಸ್, ಅಶ್ವಿನಿ ಶೇಟ್, ವಾಸುದೇವ ರಾವ್, ಅಂಜನಾ ಗುರುರಾಜ್, ಡಾ. ಜಿ.ಎಂ.ರಾಜಶೇಖರ, ಸತ್ಯನಾರಾಯಣ ಮಗ್ಗೆ, ಮಂಜೇಶ ತುರುವೇಕೆರೆ, ಚಂದ್ರ ಹೆಗಡೆ, ವಿದ್ಯಾ ಲಿಂಗದಹಳ್ಳಿ, ಡಾ. ಎಚ್.ರಾಜೇಶ್ವರಿ, ಅರವಿಂದ ಕುಮಾರ, ಸುನೀಲ್ ಗರ್ದೆ, ಸಿದ್ದನಗೌಡ ಸಣ್ಣಗೌಡರ, ಬಿ.ಎಸ್.ನಟರಾಜು, ಬಿ.ಕೆ.ಶಿವಕುಮಾರ್, ಪುಷ್ಪಾ ರಮೇಶ್, ಯು.ಪರಮೇಶ್ವರ ಭಟ್, ವನಮಾಲ ಆರ್, ಭಾರತಿ ಗಂಗಾಧರ್, ಜಿ.ಎಚ್.ಸಂಕಪ್ಪ, ಹರಿಪ್ರಸಾದ ಪದಕಿ, ಮಮತಾ ಕುಂದಾಪುರ, ರಾಧಾಕೃಷ್ಣ ಕೆ.ಎನ್, ಡಾ.ರವಿಕುಮಾರ್ ಕುಲಕರ್ಣಿ, ಶಶಿಕಲಾ ಜಿ.ಕೆ, ಪ್ರಕಾಶ ಬಿ, ಶೋಭಾ ತಿಪಟೂರು, ಮಹಾಂತೇಶ ಇಂಚಲ, ಕಿರಣಕುಮಾರ್ ಎಚ್.ಎ, ಸೀತಾ ವ್ಯಾಸಮುದ್ರಿ, ಗಿರೀಶ ಕೆ.ಎಸ್, ನರೇಂದ್ರನಾಥ ಎಚ್.ಎಂ, ಜ್ಯೋತಿ ಮಹಾದೇವ ಮುಂತಾದವರು. ‘ತಳತೊಟ್ಟಿ’ (ಷಡಕ್ಷರಿ ಸ್ವಾಮೀಜಿ, ರವೀಂದ್ರ ಮುನ್ನೋಳಿಮಠ, ಪ್ರಕಾಶ ಕುಲಕರ್ಣಿ, ಮನೋನ್ಮಣಿ ಕೆ.ವಿ) ಮತ್ತು ‘ತಗ್ಗುತೊಟ್ಟಿ’ (ಪಿ.ಜೆ.ರಾಘವೇಂದ್ರ, ಎ.ವಿ.ಗಿರೀಶ್) ಸಹ ಸ್ವೀಕಾರಾರ್ಹ. ದೇಶವ್ಯಾಪಿ ಬಳಸಬಹುದಾದ ‘ಜಲಕಣಜ’ (ಲತಾ ಟಿ.ಕೆ, ಕೃಷ್ಣಮೂರ್ತಿ ರಾವ್, ಕೆ.ಎಂ.ಕೊಟ್ರಯ್ಯ, ಚಿತ್ರಾ ಕೆ, ರಂಗನಾಥ ಟಿ.ಕೆ) ಕೂಡ ಚಂದವಿದೆ; ಬರೆಯಲಿಕ್ಕೆ ಉಚ್ಚರಿಸಲಿಕ್ಕೆ ಸುಲಭವಾಗಿಯೂ ಇದೆ; ಆದರೆ overhead tank ಬೇರೆ, sump ಬೇರೆ ಎಂದು ಗೊತ್ತಾಗಬೇಕಲ್ಲ? ಅಲ್ಲದೇ ಇಂಗ್ಲಿಷ್​ನಲ್ಲಿ sump ಪದ a pit to collect water - ಗಣಿಗಾರಿಕೆ, ಉಪ್ಪು ತಯಾರಿಕೆ ಮುಂತಾದುವಲ್ಲಿ ನೀರನ್ನು ಜಮೆಮಾಡುವ ಗುಂಡಿ ಎಂಬರ್ಥದಲ್ಲಿ ಬಳಕೆಯಿದ್ದದ್ದು. ಗೃಹೋಪಯೋಗಿ ನೀರಿನ ಸಂಗ್ರಹಕ್ಕೆ ವ್ಯವಸ್ಥೆ ಎನ್ನುವ ಅರ್ಥ ಇತ್ತೀಚಿನದು.

ನೆಲತೊಟ್ಟಿಯಲ್ಲಿ ಸಂಗ್ರಹಿಸಿದ ನೀರು ಅಲ್ಲಿಂದ ಕೊಳವೆಗಳ ಮೂಲಕ ಅಡುಗೆಮನೆಯ ಉಪಯೋಗಕ್ಕೆ ಬಂತು. ಅಡುಗೆ ಆಯ್ತು, ಊಟವೂ ಆಯ್ತು. ಪಾತ್ರೆಗಳನ್ನು sinkನಲ್ಲಿ ರಾಶಿ ಹಾಕಿದ್ದಾಯ್ತು. ಅರೆರೆ! ಸಿಂಕ್ ಎನ್ನಬೇಕೇಕೆ? ಕನ್ನಡದಲ್ಲಿ ಪದವಿಲ್ಲವೇ? ‘ಐವತ್ತು ವರ್ಷಗಳ ಹಿಂದೆ ನಾವೊಂದು ಬಾಡಿಗೆ ಮನೆಯಲ್ಲಿದ್ದಾಗ, ನಮ್ಮ ತಾಯಿ ಅರೆಯುವ ಕಲ್ಲಿನಲ್ಲಿ ರುಬ್ಬುತ್ತಿದ್ದಾಗ, ಪಕ್ಕದಲ್ಲಿ ಮೂಲೆಯಲ್ಲಿ ಒಂದು ಸಣ್ಣ ಬಚ್ಚಲು ಇರುತ್ತಿತ್ತು. ಅದರ ಹೆಸರು ನನಗೆ ಗೊತ್ತಿರಲಿಲ್ಲ. ನೆಲದ ಮೇಲೆ ಒಲೆ, ಕೋಡೊಲೆ ಇತ್ತು. ನಂತರ ಒಲೆ ಕಟ್ಟೆಯ ಮೇಲೆ ಬಂತು. ಅಲ್ಲೇ ಒಂದು ಮೂಲೆಯಲ್ಲಿ ಸಿಂಕ್ ಬಂತು. ಅದಕ್ಕೆ ಕೈಬಚ್ಚಲು ಎನ್ನುವ ಪದ ನನ್ನ ಮದುವೆಯ ನಂತರ ಶ್ರೀಮತಿಯ ಕಡೆಯಿಂದ ತಿಳಿದದ್ದು!’ ಎಂದು ಬರೆದಿದ್ದಾರೆ ಬೆಂಗಳೂರಿನ ವಸಂತಕುಮಾರ್ ಕಲ್ಯಾಣಿ. ‘ಕೈಬಚ್ಚಲು’ ಪದವನ್ನೇ ಸೂಚಿಸುತ್ತ ಚಂದ್ರಿಕಾ ಹೆಗಡೆ ಮತ್ತಿಹಳ್ಳಿ ‘ಹಿಂದೆಲ್ಲ ನಮ್ಮಕಡೆ ಪಾತ್ರೆ ತೊಳೆಯುವ ಸ್ಥಳಕ್ಕೆ ಮುಸುರೆಗುಂಡಿ ಎನ್ನುತ್ತಿದ್ದರು. ಹೆಚ್ಚಾಗಿ ಮನೆಹಿಂದೆ ಹಿತ್ತಲಿನಲ್ಲಿರುತ್ತಿದ್ದ ಮುಸುರೆಗುಂಡಿ, ಅತ್ಯಂತ ಮಡಿ ಪ್ರದೇಶವಾದ ಅಡುಗೆಮನೆಯಲ್ಲಿ ಇರುವ ಕಲ್ಪನೆಯೇ ಮೈಲಿಗೆಯದಾಗಿತ್ತು!’ ಎಂದು ಬರೆದಿದ್ದಾರೆ. ಹಾಗೆಯೇ ‘ನಮ್ಮನೆಯಲ್ಲಿ ಕೈಬಚ್ಚಲು ಎಂಬ ಪದವನ್ನು ಅರವತ್ತು ವರ್ಷಗಳ ಕೆಳಗೆ ಉಪಯೋಗಿಸುತ್ತಿದ್ದೆವು’ ಎಂದಿದ್ದಾರೆ ಶಿವಮೊಗ್ಗದಿಂದ ಎ.ಜೆ.ರಾಮಚಂದ್ರ. ‘ಹಳೆಯ ಮನೆಗಳ ಅಡುಗೆಕೋಣೆಯಲ್ಲಿ ನೆಲಮಟ್ಟದ ಕಿರಿದಾದ ಬಚ್ಚಲಿರುತ್ತಿತ್ತು. ಅದನ್ನು ಕೈಬಚ್ಚಲು ಎನ್ನುತ್ತಿದ್ದರು. ಸಣ್ಣಪ್ರಮಾಣದ ತೊಳೆ-ಬಳೆ ಕೆಲಸಕ್ಕೆ ಅದರ ಉಪಯೋಗ. ಈಗಿನ ಕಾಂಕ್ರೀಟಕಾಡು ಮನೆಗಳಲ್ಲಿ ಇದಕ್ಕೆ ಕಿಚನ್ ಸಿಂಕ್ ಎನ್ನುತ್ತಿದ್ದಾರೆ. ಅಚ್ಚಕನ್ನಡದ ‘ಕೈಬಚ್ಚಲು’ ಇರುವಾಗ ಅದನ್ನೇ ಹೇಳಲು ಸಂಕೋಚ ಬೇಡ’ ಎಂದು ಹುಬ್ಬಳ್ಳಿಯ ಮಿಸ್ಕಿನ್ ಕುಟುಂಬದವರ ಅಭಿಪ್ರಾಯ.

ಕಾಲ ಬದಲಾದಂತೆ, ಜೀವನಶೈಲಿ ಬದಲಾದಂತೆ, ನಾವಾಡುವ ಭಾಷೆ ಮತ್ತು ಪದಬಳಕೆಯೂ ಬದಲಾಗುತ್ತವೆ. ಹಳೆಯದು ಕಣ್ಮರೆಯಾಗುತ್ತದೆ. ಈಗೀಗಂತೂ ಪದಗಳಷ್ಟೇ ಅಲ್ಲ, ಕೆಲವು ಮನೆಗಳಲ್ಲಿ ಅಡುಗೆ ಮಾಡುವುದೇ ಅಪರೂಪವಾಗುತ್ತಿದೆ. ಮಾಡಿದರೂ ಬೇಳೆ-ಕಾಳು ಹಣ್ಣು-ತರಕಾರಿ ಮತ್ತಿತರ ಅಡುಗೆ ಪದಾರ್ಥಗಳು, ವಿಧಾನಗಳು, ಪರಿಕರಗಳು, ತಯಾರಾದ ತಿಂಡಿ-ತಿನಸು... ಎಲ್ಲದಕ್ಕೂ ಕನ್ನಡಕ್ಕಿಂತ ಹೆಚ್ಚಾಗಿ ಇಂಗ್ಲಿಷ್ (ಕೆಲವೊಮ್ಮೆ ಹಿಂದಿ) ಪದಗಳನ್ನೇ ಬಳಸುತ್ತೇವೆ. ಅಷ್ಟೇಅಲ್ಲ ಮನೆಯ ಒಂದೊಂದು ಭಾಗವನ್ನೂ- ಬೆಡ್ರೂಮು, ಹಾಲು, ಕಿಚನ್ನು, ಲಿವಿಂಗ್ ರೂಮು, ಡ್ರಾಯಿಂಗ್ ರೂಮು, ಸಿಟ್​ಔಟು, ಟಾಯ್ಲೆಟ್ಟು, ಬಾತ್ರೂಮು, ಫಸ್ಟ್ ಫೋ›ರು, ಟೆರೇಸು... ಎಂದೇ ಗುರುತಿಸುತ್ತೇವೆ. ಇಂಗ್ಲಿಷನ್ನು ಕನ್ನಡವಾಗಿಸುವ ಉ-ಕಾರದ ಉಪಕಾರ(ಉಪದ್ವಾ್ಯಪ) ಇದು. ಈಗಲಾದರೂ ಅರಿತುಕೊಳ್ಳೋಣ. ನಮ್ಮಲ್ಲಿನ್ನು ಸಿಂಕ್ ಮುಳುಗಲಿ. ಕೈಬಚ್ಚಲು ಎಂಬ ಕನ್ನಡ ಪದ ಮೊಳಗಲಿ. ಏಕೆಂದರೆ ಸಿಂಕ್ ಬದಲಿಗೆ ಕೈಬಚ್ಚಲು ಆಗಬಹುದೆಂದು ಸೂಚಿಸಿದವರು ಅನೇಕರಿದ್ದೀರಿ: ಶೀಲಾ ಅರಕಲಗೂಡು, ಚಂದ್ರಶೇಖರ ಮೈಸೂರು, ರಮೇಶ ಕಾರಂತ್, ಸಂಧ್ಯಾ ಅಡಿಗ, ಹೇಮಂತ ಸಂಪಗಾವಕರ, ಉಷಾ ಪ್ರಭು, ಸುಜಾತಾ ಸಾಠೆ, ತುಳಸಾ ಪಾಟೀಲ್, ಎಸ್.ಎಂ.ರವಿಕುಮಾರ್, ಭಾಗ್ಯಶ್ರೀ ಪೂಜಾರ, ಕಡ್ಡಿ ಕೊಟ್ರೇಶ, ಜಿ.ಎಸ್.ಮಲ್ಲೇಶಪ್ಪ, ಸತ್ಯ ಹರಿಹಳ್ಳಿ, ಬಸಲಿಂಗಪ್ಪ ಚಿಂದಿ, ಶಿವಾನಂದಸ್ವಾಮಿ ಹಿರೇಮಠ, ಭ.ನಿಂ.ಗೋಪಿನಾಥ, ಗೀತಾ ಗುರುಸ್ವಾಮಿ, ಚ.ರು.ಶಂಕರರಾವ್, ಯಶೋದಾ ಗೋಪಿ, ಪ್ರಕಾಶ ಉಮರಾಣಿ, ಚಂಪಾವತಿ ಜೋಶಿ, ಕೇಶವಮೂರ್ತಿ ಕುಲಕರ್ಣಿ, ಡಾ.ಸಂಗಮೇಶ ಸುರಭಿ, ನಾಗಮ್ಮ ಕುಮಾರ್, ಸಂಜಯ ಕುಲಕರ್ಣಿ, ಪೂರ್ಣಿಮಾ ಲಿಂಗದಹಳ್ಳಿ, ಸೌಭಾಗ್ಯ ಸುಬ್ರಹ್ಮಣ್ಯ, ವಿಲಾಸಿನಿ ಭಟ್, ಜ್ಯೋತಿಕಾ, ಗಗನ ಮುಂತಾದವರು. ಇನ್ನೊಂದೆರಡು ಗಮನಾರ್ಹ ಪ್ರವೇಶಿಕೆಗಳೆಂದರೆ ‘ಬತ್ತುಕುಳಿ’ (ಭಾರತಿ ಉಡುಪ, ಎನ್.ಎಚ್.ದೇಶಪಾಂಡೆ, ರಾಜು ಕೋಳಿವಾಡ, ಸುರೇಂದ್ರ ಪೈ, ಶಾಂತಿನಿ ಮಂಜುನಾಥ್); ‘ತೊಳೆತೊಟ್ಟಿ’ (ಆರ್.ವಿ.ಮೂರ್ತಿ, ಗಿರೀಶ ಫಡ್ಕೆ, ರಾಘವೇಂದ್ರ ವೈದ್ಯ) ಮತ್ತು ‘ಪಾತ್ರೆಗುಂಡಿ’ (ವಿದ್ಯಾಶಂಕರ ಶರ್ಮ, ಸತ್ಯಮಾಧವ ಲಿಂಗದಹಳ್ಳಿ).

ಜಾತಿಗಣತಿ ಲೆಕ್ಕದಲ್ಲಿ ಬಾಗಿಲಿಗೆ ಸ್ಟಿಕ್ಕರ್ ಹಚ್ಚುತ್ತಿದ್ದಾರೆ ಎಂದು ಉದಾಹರಣೆ ಕೊಟ್ಟಿದ್ದರಿಂದಲೋ ಏನೋ, ಅನೇಕರು sticker ಪದಕ್ಕೆ ‘ಅಂಟುಪತ್ರ’, ‘ಅಂಟುಚೀಟಿ’ ಅಂತೆಲ್ಲ ಸೂಚಿಸಿದ್ದಾರೆ. ಸೀಮಿತ ಅರ್ಥದಲ್ಲಿ ಇವು ಚೆನ್ನಾಗಿಯೇ ಇವೆ. ಆದರೆ, ಹೆಂಗಸರು ಹಣೆಗೆ ಹಚ್ಚುವ ಬಿಂದಿ ಸ್ಟಿಕ್ಕರ್ ರೂಪದಲ್ಲಿದ್ದರೆ, ನೆಲಕ್ಕೆ ಅಂಟಿಸುವ ರಂಗೋಲಿಯ ಸ್ಟಿಕ್ಕರ್ ಇದ್ದರೆ ಅವುಗಳನ್ನು ಅಂಟುಪತ್ರ, ಅಂಟುಚೀಟಿ ಎನ್ನಲಿಕ್ಕಾಗುವುದಿಲ್ಲವಲ್ಲ? ಅದಕ್ಕಿಂತ, ಎಲ್ಲ ಸಂದರ್ಭಗಳಲ್ಲೂ ಬಳಸಬಹುದಾದ ‘ಅಂಟಿಕೆ’ ಎಂಬ ಹೊಚ್ಚಹೊಸ ಪದವೊಂದನ್ನು ಕೆಲವು ಓದುಗರು ಸೂಚಿಸಿದ್ದಾರೆ. ಆಟ ಆಡುವುದಕ್ಕೆ ಆಟಿಕೆ ಇದ್ದಂತೆ ಅಂಟಿಸುವುದಕ್ಕೆ ಅಂಟಿಕೆ. ಇದು ವ್ಯಾಕರಣಬದ್ಧವಾಗಿಯೂ ಇದೆ. ಕನ್ನಡದಲ್ಲಿ ಇಕೆ ಪ್ರತ್ಯಯವು ಕ್ರಿಯಾಪದದಿಂದ ಭಾವನಾಮಗಳನ್ನು ಸಾಧಿಸುವುದಕ್ಕೇ ಇರುವುದು. ಉದಾಹರಣೆಗೆ- ಆಲಿಕೆ, ಹೇಳಿಕೆ, ಬಾಯಾರಿಕೆ, ತೂಕಡಿಕೆ ಇತ್ಯಾದಿ. ‘ಅಂಟಿಕೆ’ ಪದ ಸೂಚಿಸಿದವರು: ಎನ್.ಕೆ.ಸುಬ್ಬಣ್ಣ, ಕೆ.ಎಸ್.ಪಾಟೀಲ್, ಡಾ.ಸುರೇಶ ಸೊಣ್ಣಪ್ಪ, ಚೈತ್ರ ಲಿಂಗದಹಳ್ಳಿ, ಕೆ.ಎ.ಭಟ್, ಕೃಷ್ಣ ಬರ್ವೆ, ಸುರೇಶ ಪುರಾಣಿಕ, ಬೊ.ನಾ.ಕೃಷ್ಣಮೂರ್ತಿ ಮತ್ತು ವಸುಮತಿ ಮೈಸೂರು. ಎರಡನೆಯ ಆಯ್ಕೆಯಾಗಿ ‘ಅಂಟುಕ’ ಅಥವಾ ‘ಅಂಟುಗ’ ಆಗಬಹುದೆಂದವರು: ಪ್ರಭುಪ್ರಸಾದ್ ನಡುತೋಟ, ಜಯಸಿಂಹ ದೇಶಪಾಂಡೆ, ಡಾ.ವಿ.ಬಿ.ಹೊಸಪೇಟಿ, ಮಂಜುಳಾ ಎಸ್.ಎನ್, ಪಂಪಣ್ಣ ಗೌಡ, ಅನಂತ ಶೃಂಗೇರಿ, ಜಿ.ಟಿ.ದಿವಾಕರ ಮುಂತಾದವರು. ಅಂಟುಕ ಪದ ಈಗಾಗಲೇ ಕನ್ನಡ ಶಬ್ದಕೋಶದಲ್ಲಿ ‘ಬೆನ್ನು ಹತ್ತುವ ಸ್ವಭಾವವುಳ್ಳವನು, ಸಿಕ್ಕಿದರೆ ಬಿಡದವನು’ ಎಂಬ ಅರ್ಥದಲ್ಲಿದೆ. ಕನ್ನಡದ ಉಗ/ಉಕ ಪ್ರತ್ಯಯಕ್ಕೆ ಉದಾಹರಣೆಯಾಗಿ ಶಬ್ದಮಣಿದರ್ಪಣದಲ್ಲೂ ಉಲ್ಲೇಖಗೊಂಡಿದೆ. ಆದರೆ ಒಂದು ನಿರ್ಜೀವ ವಸ್ತುಸೂಚಕವಾಗಿ ನಪುಂಸಕ ಲಿಂಗದಲ್ಲಿ ಬಳಸಲಿಕ್ಕೆ ಸ್ಟಿಕ್ಕರ್​ಗೆ ‘ಅಂಟಿಕೆ’ಯೇ ಹೆಚ್ಚು ಸೂಕ್ತ.

ಪದ ಕಟ್ಟುವ ಆಸಕ್ತಿ ತೋರುವವರಿಗೆಲ್ಲ ಅಭಿನಂದನೆಗಳು. ಪದ ಆಯ್ಕೆಯಾದರೂ ಹೆಸರು ಪ್ರಕಟಿಸಬೇಕಿಲ್ಲ ಎನ್ನುವವರಿಗೆ ವಿಶೇಷ ಧನ್ಯವಾದ. ಎಲ್ಲರ ಉತ್ಸಾಹ ಹೀಗೆಯೇ ಮುಂದುವರಿಯಲಿ. ಕೊಟ್ಟಿರುವ ಇಂಗ್ಲಿಷ್ ಪದಗಳಿಗೆ ಕನ್ನಡದಲ್ಲಿ ಉದ್ದುದ್ದ ಅರ್ಥವಿವರಣೆ ವ್ಯಾಖ್ಯಾನ ಬರೆಯಬೇಕಿಲ್ಲ. ಮಾತಿನಲ್ಲಿ, ಬರವಣಿಗೆಯಲ್ಲಿ ಆ ಇಂಗ್ಲಿಷ್ ಪದಕ್ಕೆ ಪರ್ಯಾಯವಾಗಿ ಬಳಸುವುದಕ್ಕೊಂದು ಅತಿಸೂಕ್ತ ಕನ್ನಡ ಪದ ತಿಳಿಸಿದರೆ ಸಾಕು. ಸೂಚಿಸುವ ಮೊದಲು ನೀವೇ ಒಮ್ಮೆ ಬಳಸಿನೋಡಿದರೆ ಒಳ್ಳೊಳ್ಳೆಯ ಪದಗಳನ್ನು ಕಂಡುಕೊಳ್ಳಲಿಕ್ಕಾಗುತ್ತದೆ.

ಈ ವಾರದ ಮೂರು ಪದಗಳು: 1. Lobby: ಲಾಬಿ, ಲಾಬ್ಬಿ, ಕೆಲವೊಮ್ಮೆ ಲಾಭಿ ಎಂದು ತಪ್ಪಾಗಿಯೂ, ಇಂಗ್ಲಿಷ್​ನದನ್ನೇ ಬಳಸುತ್ತೇವೆ. ಕನ್ನಡಕ್ಕಾಗಿ ್ಝಚಿಚಿಢ ಮಾಡುತ್ತಿದ್ದೇವೆಂದು ಕನ್ನಡದಲ್ಲೇ ಹೇಳಲಾರೆವೇ?

2. Solo: ಕಲಾಪ್ರದರ್ಶನಗಳಲ್ಲಿ, ಸ್ಪರ್ಧೆಗಳಲ್ಲಿ ಒಂಟಿಯಾಗಿ ಭಾಗವಹಿಸುವಿಕೆ. ಕನ್ನಡದಲ್ಲಿ ಏನನ್ನಬಹುದು?

3. Wipers: ವಾಹನದ ಗಾಜಿನ ಮೇಲೆ ನೀರು ನಿಲ್ಲದಂತೆ ಒರೆಸುವ ಸಲಕರಣೆಗೊಂದು ಕನ್ನಡ ಪದ ಬೇಕು.

ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ.

ವಾಟ್ಸ್​ಆಪ್ ಸಂಖ್ಯೆ: +12404010945

(ಲೇಖಕರು ಅಮೆರಿಕದಲ್ಲಿ ಸಾಫ್ಟ್​ವೇರ್ ಇಂಜಿನಿಯರ್

ಮತ್ತು ಅಂಕಣ ಬರಹಗಾರರು)