ಸಾಗರದ ನಗರಸಭೆ ಸಂಕೀರ್ಣದಲ್ಲಿ ಗೃಹರಕ್ಷಕ ದಳದ ನೂತನ ಕಚೇರಿಯನ್ನು ಗೃಹರಕ್ಷಕ ದಳದ ಜಿಲ್ಲಾ ಗೌರವ ಸಮಾದೇಷ್ಠ ಡಾ. ಎಚ್.ಪಿ.ಚೇತನ್‌ಕುಮಾರ್, ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಉದ್ಘಾಟಿಸಿದರು. ಎಂ.ರಾಘವೇಂದ್ರ, ಎಸ್.ಹಾಲಪ್ಪ, ಹರೀಶ್ ಪಾಟೀಲ್ ಇತರರಿದ್ದರು.  
ನ್ಯೂಸ್

ಗೃಹರಕ್ಷಕ ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡಲಿ

ಶಿವಕುಮಾರ ಎಸ್.ಪಿ.

ಸಾಗರ: ಗೃಹರಕ್ಷಕ ದಳದ ಸೇವೆ ಅತ್ಯಂತ ವ್ಯವಸ್ಥಿತವಾಗಿ ಮುನ್ನಡೆಯುತ್ತಿದೆ. ಸಿಬ್ಬಂದಿ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳುವ ಜತೆಗೆ ತಾವು ಗೃಹರಕ್ಷಕರು ಎನ್ನುವ ಕೀಳರಿಮೆಯನ್ನು ತೊರೆಯಬೇಕು ಎಂದು ಜಿಲ್ಲಾ ಗೌರವ ಸಮಾದೇಷ್ಠ ಡಾ. ಎಚ್.ಪಿ.ಚೇತನ್‌ಕುಮಾರ್ ಹೇಳಿದರು.

ಸಾಗರದ ನಗರಸಭೆ ಸಂಕೀರ್ಣದಲ್ಲಿ ಮಂಗಳವಾರ ಗೃಹರಕ್ಷಕ ದಳದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚುತ್ತಿರುವ ಅಪರಾಧ ಕೃತ್ಯಗಳು, ಪ್ರಕೃತಿ ವಿಕೋಪ, ಜನಸಂಖ್ಯೆ ನಿಯಂತ್ರಣ ಸೇರಿ ಬೇರೆಬೇರೆ ಸಂದರ್ಭದಲ್ಲಿ ಗೃಹರಕ್ಷಕ ದಳದ ಅಗತ್ಯ ಸರ್ಕಾರಕ್ಕೆ ಅವಶ್ಯಕವಾಗುತ್ತದೆ. ಹಾಗಾಗಿ ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡುವ ಜತೆಗೆ, ಕರ್ತವ್ಯದ ಸ್ಥಳದಲ್ಲಿ ನಿಷ್ಠೆಯಿಂದ ಇರಬೇಕು ಎಂದು ಸಲಹೆ ನೀಡಿದರು.

ಸಾಗರದಲ್ಲಿ ಈ ಹಿಂದೆ ದೊಡ್ಡ ಗೃಹರಕ್ಷಕ ದಳ ಇತ್ತು. ಅದನ್ನು ಪುನಃ ಕಟ್ಟುವ ಕೆಲಸವಾಗಬೇಕು. ಒಗಟ್ಟಿನಿಂದ ಕೆಲಸ ಮಾಡುವ ಜತೆಗೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಿ. ಸಾರ್ವಜನಿಕರು ಮತ್ತು ರಕ್ಷಣಾ ವ್ಯವಸ್ಥೆ ಜತೆ ಉತ್ತಮ ಸಂಬಂಧ ಇಟ್ಟುಕೊಂಡು ಮುನ್ನಡೆಯಿರಿ ಎಂದು ತಿಳಿಸಿದರು.

ಪೌರಾಯುಕ್ತ ಎಚ್.ಕೆ.ನಾಗಪ್ಪ ಮಾತನಾಡಿ, ಗೃಹರಕ್ಷಕ ದಳ ಎನ್ನುವುದು ಸೇವಾ ಭಾವದ ಪ್ರತೀಕವೇ ಹೊರತು, ಹಣದ ನಿರೀಕ್ಷೆ ಮಾಡುವ ಕೆಲಸವಲ್ಲ. ಸಮಾಜ ನಿಮ್ಮನ್ನು ಗೌರವದಿಂದ ನೋಡುತ್ತದೆ. ಸ್ವಂತ ಕಚೇರಿ ಹೊಂದಬೇಕು ಎಂಬ ಅನೇಕ ವರ್ಷಗಳ ನಿಮ್ಮ ಬೇಡಿಕೆಯನ್ನು ಉಪವಿಭಾಗಾಧಿಕಾರಿ ಮಾರ್ಗದರ್ಶನದಲ್ಲಿ ಈಡೇರಿಸಲಾಗಿದೆ. ಸಮಾಜದಲ್ಲಿ ಯಾವ ಕೆಲಸವೂ ಕನಿಷ್ಠವಲ್ಲ. ನಿಷ್ಠೆಯಿಂದ ಮಾಡಿದರೆ ಎಲ್ಲ ಕೆಲಸದಲ್ಲೂ ಯಶಸ್ಸು ಸಾಧಿಸಬಹುದು. ಸಂಕಷ್ಟದ ಸಂದರ್ಭದಲ್ಲಿ ರಕ್ಷಣಾ ಇಲಾಖೆ ಜತೆ ಸಮನ್ವಯ ಸಾಧಿಸಿ ಕೆಲಸ ಮಾಡುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಮಾತನಾಡಿ, ಗೃಹರಕ್ಷಕ ದಳದಲ್ಲಿ ಸೇವೆ ಸಲ್ಲಿಸುವುದು ಕ್ಲಿಷ್ಟಕರ. ನೀವು ಸರ್ಕಾರಿ ನೌಕರರು ಅಲ್ಲದಿದ್ದರೂ ಸಾರ್ವಜನಿಕ ನೌಕರರಾಗಿರುತ್ತೀರಿ. ತುರ್ತು ಸಂದರ್ಭದಲ್ಲಿ ಶ್ರೇಷ್ಠ ಸೇವೆ ಸಲ್ಲಿಸುವ ನಿಮಗೆ ಸಮಾಜ ಋಣಿಯಾಗಿರುತ್ತದೆ. ನಿಮ್ಮ ಸ್ವಂತ ಕಚೇರಿ ಹೊಂದುವ ಅಭಿಲಾಷೆಯನ್ನು ನಗರಸಭೆ ಈಡೇರಿಸಿದೆ. ಇಲ್ಲಿ ಇನ್ನಷ್ಟು ನಿಷ್ಠೆಯಿಂದ ತರಬೇತಿ ಪಡೆಯುವ ಜತೆಗೆ ಸಾಗರ ಗೃಹರಕ್ಷಕ ದಳವನ್ನು ಇನ್ನಷ್ಟು ವಿಸ್ತರಿಸಲು ಚಿಂತನೆ ನಡೆಸಿ ಎಂದು ಹೇಳಿದರು.

ಗೃಹರಕ್ಷಕ ದಳದ ಸಾಗರ ಘಟಕಾಧಿಕಾರಿ ಎಂ.ರಾಘವೇಂದ್ರ, ಹಾಲಪ್ಪ ಎಸ್. ದಾವಣಗೆರೆ, ಹರೀಶ್ ಪಾಟೀಲ್, ಲಕ್ಷ್ಮಣ್, ಮಹಾಬಲ, ರೇವಣಪ್ಪ, ಕೆ.ಎಸ್.ಶ್ರೀಧರ್, ರಾಯಲ್ ಸಂತೋಷ್ ಇತರರಿದ್ದರು.