ಜೇನುಕಲ್ಲಮ್ಮ ದೇವರ ಕಾನು ಪ್ರದೇಶಕ್ಕೆ ಭೇಟಿ ನೀಡಿದ್ದ ವೃಕ್ಷಲಕ್ಷ ಆಂದೋಲನದ ಪದಾಧಿಕಾರಿಗಳು. ಅನಂತ ಹೆಗಡೆ ಅಶೀಸರ, ಡಾ. ಬಾಲಚಂದ್ರ ಸಾಯಿಮನೆ, ಡಾ. ಕೇಶವ ಕೊರ್ಸೆ, ಡಾ. ಟಿ.ವಿ.ರಾಮಚಂದ, ಡಾ. ಪ್ರಕಾಶ್ ಮೇಸ್ತ, ಕೆ.ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ ಇತರರಿದ್ದರು.  
ನ್ಯೂಸ್

ಅರಣ್ಯ ರಕ್ಷಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿ

ಸಾಗರ: ಕಳೆದ ಮೂರು ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 18,700 ಎಕರೆ ಅರಣ್ಯ ಪ್ರದೇಶ ನಾಶವಾಗಿದೆ ಎಂದು ಭಾರತೀಯ ಅರಣ್ಯ ಸಮೀಕ್ಷೆ ವರದಿ ಪ್ರಕಟಿಸಿದೆ. ಹಾಗಾಗಿ ಜಿಲ್ಲೆಯಲ್ಲಿ ಇನ್ನಷ್ಟು ಅರಣ್ಯ ನಾಶವಾಗುವುದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ವೃಕ್ಷಲಕ್ಷ ಆಂದೋಲನ ಸರ್ಕಾರಕ್ಕೆ ಮನವಿ ಮಾಡಿದೆ.

ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ, ಸಾಗರ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೂಲಕ ಅರಣ್ಯ ಸಚಿವ ಈಶ್ವರ ಖಂಡ್ರೆಗೆ ಗುರುವಾರ ಮನವಿ ಸಲ್ಲಿಸಿರುವ ವೃಕ್ಷಲಕ್ಷ ಆಂದೋಲನ ತಜ್ಞರ ತಂಡ, ಜಿಲ್ಲೆಯಲ್ಲಿ ಕಂದಾಯ ಅರಣ್ಯಗಳು ವಿನಾಶದಂಚಿನಲ್ಲಿವೆ. ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ ತಾಲೂಕುಗಳಲ್ಲಿ ಕಾನು ಬೆಟ್ಟ, ಸೊಪ್ಪಿಗೆ ಮುಫತ್ತು, ಗೋಚರ, ಕಾಫಿಕಾನು ಇನ್ನಿತರ ಹೆಸರಿನಲ್ಲಿ ಒಂದು ಲಕ್ಷ ಎಕರೆಗಿಂತ ಹೆಚ್ಚು ಕಂದಾಯ ಅರಣ್ಯಗಳಿವೆ. ಪರಿಭಾವಿತ ಅರಣ್ಯ ಪಟ್ಟಿಯಲ್ಲಿ ಇವುಗಳು ಅರ್ಧಭಾಗ ಸೇರಿವೆ. ಪಾರಂಪರಿಕವಾಗಿ ಗ್ರಾಮಸ್ಥರೇ ಕಾನು ಅರಣ್ಯಗಳ ನಿರ್ವಹಣೆ ಮಾಡುತ್ತಿದ್ದರು. ಆದರೆ ಕಳೆದ 30 ವರ್ಷಗಳಲ್ಲಿ ಕೃಷಿ ಒತ್ತುವರಿ ಜಾಸ್ತಿಯಾಗಿ ಕಂದಾಯ ಅರಣ್ಯಗಳು ವಿನಾಶದ ಹಂತಕ್ಕೆ ಬಂದು ನಿಂತಿವೆ ಎಂದು ಮನವರಿಕೆ ಮಾಡಿಕೊಟ್ಟರು.

ಅರಣ್ಯ ಇಲಾಖೆ 2010ರಿಂದ 2013ರವರೆಗೆ ಕಾನು ಸಂರಕ್ಷಣೆ ಮತ್ತು ಅಭಿವೃದ್ಧಿ ಯೋಜನೆ ಜಾರಿ ಮಾಡಿತ್ತು. ಸುಮಾರು 120 ಹಳ್ಳಿಗಳ 20 ಸಾವಿರ ಎಕರೆ ಕಂದಾಯ ಅರಣ್ಯಗಳಿಗೆ ರಕ್ಷಣಾ ಕವಚ ಸಿಕ್ಕಿತ್ತು. ಗ್ರಾಮ ಜನರ ಸಹಕಾರವೂ ಇದಕ್ಕೆ ದೊರಕಿತ್ತು. 2015ರ ನಂತರ ಕಾನು ಅರಣ್ಯ ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ಅರಣ್ಯ ನಾಶ ಹೆಚ್ಚಾಗುತ್ತ ಬಂದಿದೆ. ಕಾನು ಅರಣ್ಯ ಭೂಮಿ ರಕ್ಷಣೆಗೆ ಕಂದಾಯ ಇಲಾಖೆ ಸಹಕಾರ ನೀಡುತ್ತಿಲ್ಲ ಎಂದು ಅರಣ್ಯ ಇಲಾಖೆ ಹೇಳುತ್ತಿದೆ. ಅರಣ್ಯ ಇಲಾಖೆಯೇ ಸಹಕಾರ ನೀಡುತ್ತಿಲ್ಲ ಎಂದು ಕಂದಾಯ ಇಲಾಖೆ ದೂರುತ್ತಿದೆ. ಇಲಾಖೆಗಳ ನಡುವೆ ಸಹಭಾಗಿತ್ವವಿಲ್ಲದೆ ಅರಣ್ಯ ನಾಶ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಪಶ್ಚಿಮಘಟ್ಟದ ಅರಣ್ಯಗಳ ರಕ್ಷಣೆ ಬಗ್ಗೆ ಚರ್ಚಿಸಲು ವಿಧಾನಸಭಾ ಅಧಿವೇಶನದಲ್ಲಿ ಒಂದು ದಿನ ಸಮಯ ಮೀಸಲಿಡಬೇಕು. ಅರಣ್ಯ ಭವನದ ಉನ್ನತ ಅಧಿಕಾರಿಗಳಿಗೆ ಶಿವಮೊಗ್ಗ ಸೇರಿ ಪಶ್ಚಿಮಘಟ್ಟದ ಸೂಕ್ಷ್ಮ ಅರಣ್ಯ ವಿಭಾಗಗಳ ರಕ್ಷಣಾ ಜವಾಬ್ದಾರಿ ನೀಡಬೇಕು ಎಂದು ಒತ್ತಾಯಿಸಿದರು.

ಪರಿಸರಾಸಕ್ತರಾದ ಅನಂತ ಹೆಗಡೆ ಅಶೀಸರ, ಪ್ರೊ. ಬಿ.ಎಂ.ಕುಮಾರಸ್ವಾಮಿ, ಡಾ. ಬಾಲಚಂದ್ರ ಸಾಯಿಮನೆ, ಡಾ. ಕೇಶವ ಕೊರ್ಸೆ, ಡಾ. ಟಿ.ವಿ.ರಾಮಚಂದ, ಡಾ. ಪ್ರಕಾಶ್ ಮೇಸ್ತ, ಕೆ.ವೆಂಕಟೇಶ್, ಶ್ರೀಪಾದ ಬಿಚ್ಚುಗತ್ತಿ, ಎಂ.ಆರ್.ಪಾಟೀಲ್ ಇತರರಿದ್ದರು.