ರಾಯಲ್ಪಾಡಿನ ಹಕ್ಕಿಪಿಕ್ಕಿ ಕಾಲೋನಿಗೆ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದರು.  
ನ್ಯೂಸ್

ಗ್ರಾಮೀಣರಿಗೂ ಸರ್ಕಾರಿ ಸೌಲಭ್ಯ ತಲುಪಲಿ

ಕೋಲಾರ/ರಾಯಲ್ಪಾಡು: ನೀವು ಗ್ರಾಮಕ್ಕೆ ಎಷ್ಟು ಸಲ ಭೇಟಿ ನೀಡಿದ್ದೀರಾ? ಸರ್ಕಾರ ನಿಮಗೆ ಲಕ್ಷಲಕ್ಷ ಸಂಬಳ ಕೊಡುವುದು ಕಚೇರಿಯಲ್ಲಿ ಕುಳಿತುಕೊಳ್ಳಲು ಅಲ್ಲ. ಗ್ರಾಮಗಳಿಗೆ ಭೇಟಿ ನೀಡಿ, ಸರ್ಕಾರ ಸೌಲಭ್ಯಗಳನ್ನು ತಲುಪಿಸಲು. ಇದು ರಾಜ್ಯ ಮಹಿಳಾ ಆಯೋಗದ ಅಧ್ಯೆ ನಾಗಲಕ್ಷ್ಮಿ ಅವರು, ಶ್ರೀನಿವಾಸಪುರ ತಾಲೂಕು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪರಿ….

ರಾಯಲ್ಪಾಡು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಹಕ್ಕಿಪಿಕ್ಕಿ ಕಾಲನಿಗೆ ಬುಧವಾರ ಭೇಟಿ ನೀಡಿ ಕುಂದುಕೊರತೆ ಆಲಿಸಿ ಮಾತನಾಡಿದ ಅವರು, ಜಿಲ್ಲೆಗೆ ಮೊದಲ ಬಾರಿಗೆ ಭೇಟಿ ನೀಡಿದ್ದರೂ, ಮಹಿಳಾ ಆಯೋಗದ ಅಧ್ಯಕ್ಷರ ನೇತೃತ್ವದ ತಂಡದ ಜಿಲ್ಲಾ ಪ್ರವಾಸದ ಮಾಹಿತಿ ಇದ್ದರೂ, ತಹಸೀಲ್ದಾರ್​, ಇಒ ಸಹಿತ ಯಾವ ಅಧಿಕಾರಿಗಳೂ ಸ್ಥಳಕ್ಕೆ ಬಾರದೆ ಇದುದ್ದನ್ನು ಕಂಡು ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ತಾಲೂಕು ಮಟ್ಟದ ಅಧಿಕಾರಿಗಳನ್ನು ಹಕ್ಕಿಪಿಕ್ಕಿ ಕಾಲನಿಗೆ ಕರೆಸಿಕೊಂಡ ನಾಗಲಕ್ಷಿ$್ಮ, ನೀವು ಗ್ರಾಮಕ್ಕೆ ಎಷ್ಟು ಸಲ ಭೇಟಿ ನೀಡಿದ್ದೀರಾ? ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು. ಸರ್ಕಾರ ಲಕ್ಷಲಕ್ಷ ಗಟ್ಟಲೇ ಸಂಬಳ ಕೊಡುವುದು ಕಚೇರಿಯಲ್ಲಿ ಕುಳಿತುಕೊಳ್ಳಲು ಅಲ್ಲ. ಗ್ರಾಮಗಳಿಗೆ ಭೇಟಿ ನೀಡಿ, ಸರ್ಕಾರ ಸೌಲಭ್ಯಗಳನ್ನು ತಲುಪಿಸಲು. ಸೌಲಭ್ಯಗಳನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳವಂತೆ ಪ್ರೇರೇಪಿಸಲು ಎಂದು ಕಟ್ಟುನಿಟ್ಟಿನಿಂದ ಸೂಚಿಸಿದರು.
ಹಕ್ಕಿ ಪಿಕ್ಕಿ ಜಾನಾಂಗಕ್ಕೆ ವಿದ್ಯಾರ್ಥಿವೇತನ, ಉಚಿತ ವಿದ್ಯಾಭ್ಯಾಸ ಸೇರಿದಂತೆ ಸಮಾಜ ಕಲ್ಯಾಣ ಇಲಾಖೆಯಿಂದ ಎಲ್ಲ ಸೌಲಭ್ಯಗಳೂ ಇದ್ದು, ಮಾಹಿತಿ ಕೊರತೆಯಿಂದ ಸೌಲಭ್ಯಗಳಿಂದ ಜನ ವಂಚಿತರಾಗುತ್ತಿದ್ದಾರೆ. ಉದ್ಯೋಗ ಖಾತರಿ ಬಗ್ಗೆಗೂ ಸಮುದಾಯಕ್ಕೆ ಮಾಹಿತಿ ಇಲ್ಲ. ಕಾಲನಿಯಲ್ಲಿ 5 ಮಂದಿ ಅಂಗವಿಕಲ ಮಕ್ಕಳು ಇದ್ದು, ಆರೋಗ್ಯ ಇಲಾಖೆ ಯಾವುದೇ ಕ್ರಮವಹಿಸಿಲ್ಲ. ಮಹಿಳಾ ಮತ್ತು ಮಕ್ಕಳ ಇಲಾಖೆಯೂ ಗ್ರಾಮದ ಜನರಿಗೆ ಸ್ಪಂದಿಸುತ್ತಿಲ್ಲ. ಸರ್ಕಾರ ಗರ್ಭಿಣಿಗೆ ಒಂದು ತಿಂಗಳಿಗೆ 20 ಮೊಟ್ಟೆ ವಿತರಿಸುತ್ತದೆ ಆದರೆ. ಕಾಲನಿಯಲ್ಲಿನ 6 ತಿಂಗಳ ಗರ್ಭಿಣಿಗೆ ಇದುವರೆಗೆ ಒಂದೇಒಂದು ಮೊಟ್ಟೆ ಕೊಟ್ಟಿಲ್ಲ. ಇಲ್ಲಿನ ಜನರಿಗೆ ಸ್ವಂತ ಜಮೀನು ಇರಲಿ, ರೇಷನ್​ ಕಾರ್ಡ್​ ಸಹ ಇಲ್ಲ ಎಂದು ನಾಗಲಕ್ಷಿ$್ಮ ಅಸಮಾಧಾನ ವ್ಯಕ್ತಪಡಿಸಿದರು.

20ಕ್ಕೆ ಕುಂದುಕೊರತೆ ಸಭೆ
ಹಕ್ಕಿ ಪಿಕ್ಕಿ ಅಂಗನವಾಡಿ ಕೇಂದ್ರಕ್ಕೆ ಕಾರ್ಯಕರ್ತೆ ಸರಿಯಾಗಿ ಬರುತ್ತಿಲ್ಲ. ಹಾಗೂ ಪೌಷ್ಟಿಕ ಆಹಾರವೂ ಸರಿಯಾಗಿ ವಿತರಣೆಯಾಗುತ್ತಿಲ್ಲ ಎಂದು ಸಾರ್ವಜನಿಕರು ನಾಗಲಕ್ಷ್ಮಿ ಅವರಿಗೆ ದೂರು ಸಲ್ಲಿಸಿದರು. ಅಂಗನವಾಡಿ ಕಾರ್ಯಕರ್ತೆ ಮೇಲೆ ಶಿಸ್ತುಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ ಮಹಿಳಾ ಆಯೋಗದ ಅಧ್ಯಕ್ಷರು, ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸ್ಪಂದಿಸದಿದ್ದರೆ ಇಲಾಖೆಯಿಂದ ಬರುವಂತಹ ಆದೇಶಗಳಿಗೆ ತಲೆ ಬಾಗಬೇಕಾಗುತ್ತದೆ ಎಂದರು. ಈ ವೇಳೆ ತಹಸೀಲ್ದಾರ್​ ಜಿ.ಎನ್​.ಸುದೀಂದ್ರ, ಇದೇ ತಿಂಗಳು 20ರಂದು ಗ್ರಾಮವಾಸ್ತವ್ಯ ನಡೆಸಿ ಸಾರ್ವಜನಿಕ ಕುಂದುಕೊರೆತೆ ಆಲಿಸುವುದಾಗಿ ಮಾಹಿತಿ ನೀಡಿದರು.

ವೈದ್ಯರ ನಿಯೋಜನೆಗೆ ಕ್ರಮ
ರಾಯಲ್ಪಾಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ನಾಗಲಕ್ಷಿ$್ಮ, ಆಸ್ಪತ್ರೆಯ ಶೌಚಗೃಹದ ಅವ್ಯವಸ್ಥೆ ಕಂಡು ಸಿಡಿಮಿಡಿಗೊಂಡರು. ಸೊಳ್ಳೆ ಕಾಟ, ಹೆರಿಗೆ ವಾರ್ಡ್​ನಲ್ಲಿ ಅನೈರ್ಮಲ್ಯ ಗಮನಿಸಿ, ನಾನು ಬಂದಿದ್ದೇನೆ ಎಂದು ಆಸ್ಪತ್ರೆಯನ್ನು ಸ್ವಚ್ಛಗೊಳಿಸಿದ್ದೀರಾ ಎಂದು ಸಿಬ್ಬಂದಿಯನ್ನು ಪ್ರಶ್ನಿಸಿದರು. ಕಳೆದ 3 ವರ್ಷದಿಂದ ವೈದ್ಯರಿಲ್ಲದ ಕಾರಣ ಇಲ್ಲಿನ ಶೂಶ್ರುಷಕಿಯೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ಇದೆ. ಈ ಹಿಂದೆ ವೈದ್ಯರಿಲ್ಲದೆ ಮಗುವೊಂದು ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೃತಟಪಟ್ಟಿತ್ತು. ಹೆರಿಗೆಗಾಗಿ ಆರೋಗ್ಯ ಕೇಂದ್ರಕ್ಕೆ ಹೋದರೆ ಶ್ರೀನಿವಾಸಪುರ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿತ್ತಾರೆ ಎಂದು ನಾಗರಿಕರು ದೂರಿದರು. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನಿಯೋಜಿಸಲು ಕ್ರಮವಹಿಸಲಾಗುವುದು ಎಂದು ನಾಗಲಕ್ಷ್ಮಿ ಭರವಸೆ ನೀಡಿದರು.
ಡಿಎಚ್​ಒ ಡಾ.ಶ್ರೀನಿವಾಸ್​, ಆರ್​ಸಿಎಚ್​ಒ ಡಾ.ಚಂದನ್​, ತಹಸೀಲ್ದಾರ್​ ಜಿ.ಎನ್​.ಸುದೀಂದ್ರ, ಇಒ ಎನ್​.ರವಿ, ಟಿಎಚ್​ಒ ಮಹಮ್ಮದ್​ ಶರೀಫ್​, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್​, ಸಿಡಿಪಿಒ ನವೀನ್​, ಸ್ಥಳಿಯ ವೈದ್ಯ ಡಾ.ರೆಡ್ಡೆಪ್ಪ ಇದ್ದರು.