ಹುಣಸೂರು : ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ನಿರ್ವಹಣೆಯಲ್ಲಿ ನಾಗರಿಕರ ಸ್ವಾತಂತ್ರ್ಯ ಹರಣವಾಗಬಾರದು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟರು.
ಬುಧವಾರ ನಗರದ ಕಾವೇರಿ ಹಾರ್ಟ್ ಆ್ಯಂಡ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಮಾತನಾಡಿದರು.
ದೇಶದ ಪ್ರತಿಯೊಬ್ಬ ಪ್ರಜೆಗೂ ಉತ್ತಮ ಆರೋಗ್ಯ ಪಡೆಯುವ, ತನ್ನಿಚ್ಛೆಯ ಶಿಕ್ಷಣ ಕಲಿಯುವ ಮತ್ತು ಉದ್ಯೋಗ ನಿರ್ವಹಿಸುವ ಸ್ವಾತಂತ್ರ್ಯ ಇರಬೇಕೆಂದು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ. ಅದನ್ನು ಸಂವಿಧಾನದಲ್ಲೂ ತಿಳಿಸಿದ್ದಾರೆ. ಆದರೆ ಇಂದು ನಾವು ಅಂಬೇಡ್ಕರ್‌ರ ಮಾತಿಗೆ ಮತ್ತು ಸಂವಿಧಾನ ಎರಡಕ್ಕೂ ಬೆಲೆ ನೀಡುತ್ತಿಲ್ಲ. ಜನರು ನೋವು ಅನುಭವಿಸುತ್ತಿರುವ ವಿಷಯಗಳ ಕುರಿತು ಸರ್ಕಾರಗಳು ಗಮನಿಸಿ ಅದಕ್ಕೆ ಪರಿಹಾರ ನೀಡಬೇಕೇ ಹೊರತು ಗ್ಯಾರಂಟಿಗಳನ್ನು ನೀಡಿದ್ದೇವೆಂದು ಪ್ರಯೋಜನವಿಲ್ಲದ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಸರಿಯಲ್ಲ. 7 ಲಕ್ಷ ಕೋಟಿ ರೂ.ಗಳ ಸಾಲ ರಾಜ್ಯದ ಜನರ ತಲೆಮೇಲಿದೆ. ತೀರಿಸುವವರ‌್ಯಾರು? ಎಂದರು.
ಚುನಾವಣೆಯಲ್ಲಿ ಹಣ, ಹೆಂಡಕ್ಕೆ ಮಾರುಹೋಗಿ ಮತ ಚಲಾಯಿಸುವುದು ಅಂಬೇಡ್ಕರ್ ನೀಡಿದ ಪ್ರಜಾಪ್ರಭುತ್ವವಲ್ಲ. ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸರ್ಕಾರಗಳು ಜನರ ಬವಣೆ ತೀರಿಸಬೇಕು. ಹುಣಸೂರು ಉಪವಿಭಾಗವ್ಯಾಪ್ತಿಯಲ್ಲಿ ಕಾವೇರಿ ಆಸ್ಪತ್ರೆ ಕಡಿಮೆ ಖರ್ಚಿನಲ್ಲಿ ಉತ್ತಮ ಸೇವೆ ನೀಡುತ್ತಿರುವುದು ಶ್ಲಾಘನೀಯ. ಡಯಾಲಿಸಿಸ್‌ನಂತಹ ಘಟಕಗಳು ಅವಶ್ಯಕತೆ ಅತ್ಯಗತ್ಯವಾಗಿತ್ತು ಎಂದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಲೋಹಿತ್ ಮಾತನಾಡಿ, ರೋಗಿಗಳ ನೋವಿಗೆ ಸ್ಪಂದಿಸಿ ಗುಣಮಟ್ಟದ ಚಿಕಿತ್ಸೆ ನೀಡುವುದೇ ನಮ್ಮ ಆಸ್ಪತ್ರೆ ಮೂಲಮಂತ್ರ. ಮೈಸೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಆಗುವ ಖರ್ಚಿನ ಅರ್ಧಭಾಗ ಕಡಿಮೆ ಖರ್ಚಿನಲ್ಲಿ ನಾವು ಉತ್ತಮ ಚಿಕಿತ್ಸೆ ನೀಡುತ್ತಿದ್ದೇವೆ. ಖಾಸಗಿ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ಸಾಮಾನ್ಯವಾಗಿ ಸ್ಥಾಪಿಸುವುದಿಲ್ಲ. ಕಾರಣ ಲಾಭದಾಯಕ ಘಟಕವಾಗುವುದಿಲ್ಲ. ಆದರೆ ನಾನು ಈ ಭಾಗದ ಜನರ ಬವಣೆಯನ್ನು ಕಂಡು ತೆರೆದಿದ್ದೇನೆ. ನಾಲ್ಕು ಹಾಸಿಗೆಗಳ ಸಾಮರ್ಥ್ಯದ ಡಯಾಲಿಸಿಸ್ ಘಟಕದಲ್ಲಿ ಪ್ರತಿದಿನ ಕನಿಷ್ಠ 20 ಜನರಿಗೆ ಡಯಾಲಿಸಿಸ್ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿದೆ. ಜಪಾನ್ ನಿರ್ಮಿತ ಉತ್ಕೃಷ್ಟ ಗುಣಮಟ್ಟದ ಡಯಾಲಿಸಿಸ್ ಘಟಕವನ್ನು ಹೊಂದಿದ್ದೇವೆ. ಗ್ರಾಮೀಣ ಜನರು ಸೌಲಭ್ಯ ಪಡೆದುಕೊಳ್ಳಬೇಕೆಂದು ಕೋರಿದರು. ನಗರಸಭಾ ಸದಸ್ಯರಾದ ಗಣೇಶ್ ಕುಮಾರಸ್ವಾಮಿ, ಕೃಷ್ಣರಾಜ ಗುಪ್ತ್ತ, ಶರವಣ, ರಾಧಾ, ರಾಣಿಪೆರುಮಾಳ್, ದೇವರಾಜ್, ಸಿರಾಜ್, ನಾಗರಾಜ ಮಲ್ಲಾಡಿ, ಸತೀಶ್ ಪಾಪಣ್ಣ, ಶಿವಶೇಖರ್, ಸರ್ದಾರ್, ವಾಸೇಗೌಡ, ಡಿ.ಕೆ.ಕುನ್ನೇಗೌಡ, ಡಿ.ಕುಮಾರ್, ನಿಂಗರಾಜ ಮಲ್ಲಾಡಿ, ವೆಂಕಟರಮಣ, ಎ.ಪಿ.ಸ್ವಾಮಿ, ನರಸಿಂಹ, ಬಲ್ಲೇನಹಳ್ಳಿ ಕೆಂಪರಾಜು ಇತರರು ಹಾಜರಿದ್ದರು.