ದೇಶದಲ್ಲಿ ತೆರಿಗೆ ನೀತಿಯಲ್ಲಿ ಆಮೂಲಾಗ್ರ ಬದಲಾವಣೆ ತಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಗೆ ಬಂದು ಎಂಟು ವರ್ಷಗಳಾಗಿವೆ. ಇದೀಗ ಈ ತೆರಿಗೆ ನೀತಿಯು ಮತ್ತೊಂದು ದೊಡ್ಡ ರೂಪಾಂತರಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಸಲ ಸ್ವಾತಂತ್ರೊ್ಯೕತ್ಸವ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವಾಗ ದಸರಾ ಹೊತ್ತಿಗೆ ಜಿಎಸ್ಟಿಯಲ್ಲಿ ಭಾರಿ ಬದಲಾವಣೆ ತರಲಾಗುವುದೆಂದು ಘೋಷಿಸಿದ್ದರು. ಇದಕ್ಕೆ ತಕ್ಕಂತೆ, ಕೇಂದ್ರ ಸರ್ಕಾರದ ಮಟ್ಟದಲ್ಲಿ ತಕ್ಷಣವೇ ಚಟುವಟಿಕೆಗಳು ಶುರುವಾಗಿದ್ದವು. ಜಿಎಸ್ಟಿ ಮಂಡಳಿಯು ಅನುಮೋದನೆ ನೀಡಿದ ನಂತರ ಹೊಸ ನೀತಿ ಪ್ರಕಟಿಸಲಾಯಿತು. ಆ ಪ್ರಕಾರ, ಮೊದಲು ನಾಲ್ಕು ಸ್ಲ್ಯಾಬ್ ಇದ್ದುದನ್ನು ಈಗ ಸ್ಥೂಲವಾಗಿ ಎರಡು ಹಂತಕ್ಕೆ ಇಳಿಸಲಾಗಿದೆ. ಶೇ.5 ಮತ್ತು ಶೇ.18ರ ಸ್ಲ್ಯಾಬ್ ವ್ಯಾಪ್ತಿಯಲ್ಲಿ ಬಹುತೇಕ ವಸ್ತುಗಳು ಬರುತ್ತವೆ. ತಾಂತ್ರಿಕವಾಗಿ ನೋಡುವುದಾದರೆ, ಶೇ.40ರ ಸ್ಲ್ಯಾಬ್ ಕೂಡ ಇದೆ. ಆದರೆ ಇದರಲ್ಲಿ ಕೆಲವೇ ಐಷಾರಾಮಿ ವಸ್ತುಗಳು ಮತ್ತು ತಂಬಾಕು, ಸಿಗರೇಟ್ನಂಥ ಕೆಲ ವಸ್ತುಗಳು ಮಾತ್ರ ಬರುತ್ತವೆ.
ಜನಸಾಮಾನ್ಯರ ದೈನಂದಿನ ಬಳಕೆಯ ಅನೇಕ ವಸ್ತುಗಳು ಶೂನ್ಯ ತೆರಿಗೆ ವ್ಯಾಪ್ತಿಯಲ್ಲಿವೆ. ಆರೋಗ್ಯ ಮತ್ತು ಜೀವವಿಮೆ, ನೋಟ್ಬುಕ್, ಚಾರ್ಟ್ ಇತ್ಯಾದಿ ಕೂಡ ಈಗ ಈ ವ್ಯಾಪ್ತಿಗೆ ಬಂದಿವೆ. ಪ್ಯಾಕ್ಡ್ ಆಹಾರ ವಸ್ತುಗಳು ಶೇ.5ರ ತೆರಿಗೆಗೆ ಒಳಪಡುತ್ತವೆ. ದೂರಸಂಪರ್ಕ ಸೇವೆ, ಹಣಕಾಸು ಸೇವೆಗಳು, ಟಿವಿ, ವಾಷಿಂಗ್ ಮಷಿನ್, ಲ್ಯಾಪ್ಟಾಪ್ ಮಂತಾದ ಎಲೆಕ್ಟ್ರಾನಿಕ್ ವಸ್ತುಗಳು ಶೇ.18ರ ತೆರಿಗೆ ಪರಿಧಿಯಲ್ಲಿ ಬಂದಿವೆ. ಐಷಾರಾಮಿ ಕಾರುಗಳು ಹಾಗೂ ತಂಬಾಕು ಉತ್ಪನ್ನಗಳಂತಹ ಕೆಲವು ವಸ್ತು ಮಾತ್ರ ಶೇ.40ರ ವಿಶೇಷ ತೆರಿಗೆ ವ್ಯಾಪ್ತಿಯಲ್ಲಿ ಬಂದಿವೆ. ಇದರ ಜತೆಗೆ, ಜಿಎಸ್ಟಿ ಫೈಲಿಂಗ್ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗಿದೆ. ಇದರಿಂದ ವ್ಯವಹಾರಸ್ಥರಿಗೆ ಅನುಕೂಲವಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸರ್ಕಾರದ ನೀತಿನಿರ್ಧಾರಗಳನ್ನು ಸರಿಯಾದ ರೀತಿಯಲ್ಲಿ ಸರಿಯಾದ ಸಮಯಕ್ಕೆ ಜನರಿಗೆ ವರ್ಗಾವಣೆ ಮಾಡುವುದು ಕೂಡ ಬಹುಮುಖ್ಯವಾದುದು. ಈಗ ಜಿಎಸ್ಟಿ ಸ್ವರೂಪದಲ್ಲಿ ವ್ಯಾಪಕ ಬದಲಾವಣೆ ಆಗಿರುವುದರಿಂದಾಗಿ, ಬಹುತೇಕ ವಸ್ತುಗಳ ಬೆಲೆ ಇಳಿಯಲಿದೆ. ಈ ಇಳಿಕೆ ಪ್ರಯೋಜನವನ್ನು ಜನರಿಗೆ ನೀಡಬೇಕಾದುದು ಸಂಬಂಧಿಸಿದ ಉದ್ಯಮದ ಜವಾಬ್ದಾರಿ. ಎಲೆಕ್ಟ್ರಾನಿಕ್ಸ್, ಆಟೊಮೊಬೈಲ್, ಸಿಮೆಂಟ್ ಮುಂತಾದ ಉದ್ಯಮ ವಲಯಗಳು ಈಗಾಗಲೇ ಬೆಲೆ ಕಡಿತದ ನಿರ್ಧಾರವನ್ನು ಸಾರ್ವಜನಿಕವಾಗಿ ಪ್ರಕಟಿಸಿವೆ. ಎಲ್ಲ ಉದ್ಯಮಗಳೂ ಇಂಥ ಕ್ರಮ ತೆಗೆದುಕೊಳ್ಳಬೇಕೆಂಬುದು ಜನರ ನಿರೀಕ್ಷೆ. ಇದು ಉದ್ಯಮಗಳ ಸಾಮಾಜಿಕ ಹೊಣೆಗಾರಿಕೆಯೂ ಹೌದು.
ಈ ಕುರಿತು ನಿಗಾ ವ್ಯವಸ್ಥೆ ರೂಪಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದು ಉತ್ತಮ ಹೆಜ್ಜೆ. ದರ ಇಳಿಕೆ ನಿರೀಕ್ಷೆಯಲ್ಲಿ ಕೆಲ ದಿನಗಳಿಂದ ಜನರು ಖರೀದಿ ಪ್ರಮಾಣ ತಗ್ಗಿಸಿದ್ದು, ದಸರಾ ಸಂದರ್ಭದಲ್ಲಿ ಖರೀದಿ ಭರಾಟೆ ನಡೆಯುವ ಸಾಧ್ಯತೆ ನಿಚ್ಚಳ. ಇದರಿಂದ ಸಂಬಂಧಿಸಿದ ಉದ್ಯಮದ ಜತೆಗೆ ದೇಶದ ಆರ್ಥಿಕತೆಗೂ ಉತ್ತೇಜನ ಸಿಗಬಹುದಾಗಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಅಮೆರಿಕದ ಚಂಚಲ ಆರ್ಥಿಕ ನೀತಿಯ ನಡುವೆಯೇ ಭಾರತ ಹೊಸದೊಂದು ಹೆಜ್ಜೆ ಇರಿಸುತ್ತಿರುವುದು ವಿಶೇಷ.