ಮೂಡಿಗೆರೆ: ರೈತರ ಅನುಕೂಲಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ರೈತರು ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕಿ ನಯನ ಮೋಟಮ್ಮ ಹೇಳಿದರು.
ತೋಟಗಾರಿಕಾ ಇಲಾಖೆ ಕಚೇರಿಯಲ್ಲಿ ಶುಕ್ರವಾರ ರೈತರಿಗೆ ಕಾಳು ಮೆಣಸಿನ ಸಸಿ ಹಾಗೂ ಗೊಬ್ಬರ ವಿತರಸಿ ಮಾತನಾಡಿದ ಅವರು, 2023-24ನೇ ಸಾಲಿನಲ್ಲಿ ಅನುಷ್ಠಾನಗೊಂಡಿರುವ ವಿವಿಧ ಪ್ರಸ್ತಾವನೆ ಆಧಾರಿತ ಇಲಾಖೆ ಯೋಜನೆ ಕಾರ್ಯಕ್ರಮ ಮತ್ತು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ಸಸಿಗಳನ್ನು ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ದಿವ್ಯಾ ಮನೋಜ್ ಮಾತನಾಡಿ, ತಾಲೂಕಿನಲ್ಲಿ ರೈತರಿಂದ ಈಗಾಗಲೇ 3000 ಅರ್ಜಿಗಳು ಬಂದಿದೆ. ಅದರಲ್ಲಿ 600 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದೆ. 300 ಸಾಮಾನ್ಯ, 200 ಪರಿಶಿಷ್ಟಜಾತಿ, 100 ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಸಿ ವಿತರಿಸಲಾಗುತ್ತಿದೆ ರೈತರು ಸಸಿಗಳನ್ನು ಪಡೆದು ಮಳೆಯಾಗುವ ಸಂದರ್ಭದಲ್ಲಿ ನಾಟಿ ಮಾಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.
ಪಪಂ ಸದಸ್ಯರಾದ ಎಚ್.ಪಿ.ರಮೇಶ್, ಎಂ.ಎ.ಹಂಝ, ಮುಖಂಡರಾದ ದೀಕ್ಷಿತ್, ಸುರೇಂದ್ರ, ಕುಮಾರ, ತೋಟಗಾರಿಕೆ ಇಲಾಖೆ ಅಧಿಕಾರಿ ರಾಮಯ್ಯ ಇತರರಿದ್ದರು.