ನ್ಯೂಸ್

ಕಬ್ಬಿನ ಬಾಕಿ ನೀಡಿದ ನಂತರವೇ ಕಾರ್ಖಾನೆ ಆರಂಭಿಸಲಿ

ನಂಜನಗೂಡು: ಬಣ್ಣಾರಿ ಸಕ್ಕರೆ ಕಾರ್ಖಾನೆ ರೈತರಿಗೆ ನೀಡಬೇಕಿರುವ ಕಬ್ಬಿನ ಬಾಕಿ ಹಣವನ್ನು ನೀಡಿದ ನಂತರ ಪ್ರಸಕ್ತ ವರ್ಷದ ಕಬ್ಬು ಅರೆಯುವ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಶನಿವಾರ ನಗರದ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಬ್ಬು ಬೆಳೆಗಾರರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ರೈತರ ಬಾಕಿ ಹಣ ನೀಡಲು ನಿರ್ಲಕ್ಷೃ ತೋರಿದಲ್ಲಿ ಸಕ್ಕರೆ ಕಾರ್ಖಾನೆ ಮುಂಭಾಗ ಬೃಹತ್ ಪ್ರತಿಭಟನೆಗೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.

ಬಣ್ಣಾರಿ ಹಾಗೂ ಮಹದೇಶ್ವರ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯಲು ಆರಂಭಿಸುವುದಕ್ಕೂ ಮೊದಲು ಕಬ್ಬಿನ ದರ ಘೋಷಣೆ ಮಾಡಬೇಕು. ಜತೆಗೆ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡುವುದರ ಜತೆಗೆ ಹಿಂದಿನ ವರ್ಷ ರೈತರು ಪೂರೈಸಿರುವ ಪ್ರತಿ ಟನ್ ಕಬ್ಬಿಗೆ 150 ರೂ. ಬಾಕಿ ಹಣ ಕೊಟ್ಟು ಕಾರ್ಖಾನೆ ಪುನರಾರಂಭಿಸಬೇಕು. ಪ್ರಸಕ್ತ ಸಾಲಿಗೆ ಕೇಂದ್ರ ಸರಕಾರ ಟನ್ ಕಬ್ಬಿಗೆ 3400 ರೂ. ನಿಗದಿ ಮಾಡಿದೆ. ಇದಕ್ಕೆ ಹೆಚ್ಚುವರಿಯಾಗಿ ಬಣ್ಣಾರಿ ಕಾರ್ಖಾನೆಯವರು ಎಷ್ಟು ಕೊಡುತ್ತಾರೆ ಎಂದು ಕಬ್ಬು ಅರೆಯುವ ಮುನ್ನ ಘೋಷಣೆ ಮಾಡಬೇಕು ಎಂದರು.

ರಾಜ್ಯ ಸರ್ಕಾರ ಕಬ್ಬು ಬೆಳೆಗಾರರ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸಿ, ತಕ್ಷಣ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವಂತೆ ನೋಡಿಕೊಳ್ಳಬೇಕು. ರೈತರು ತಾವು ಬೆಳೆದ ಕಬ್ಬನ್ನು ಮುಕ್ತವಾಗಿ ತಮಗೆ ಇಷ್ಟ ಬಂದ ಕಾರ್ಖಾನೆಗೆ ಸರಬರಾಜು ಮಾಡಲು ಅವಕಾಶ ಕಲ್ಪಸಿಬೇಕು ಎಂದು ಹೇಳಿದರು.

ಸಭೆಯಲ್ಲಿ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ದೇವನೂರು ವಿಜಯೇಂದ್ರ, ಕಾರ್ಯದರ್ಶಿ ಶಿವಶಂಕರ್, ಜಿಲ್ಲಾ ಕಾರ್ಯದರ್ಶಿ ಬರಡನಪುರ ನಾಗರಾಜು, ಉಪಾಧ್ಯಕ್ಷ ಬಸವಣ್ಣ, ಅಂಬಳೆ ಮಂಜುನಾಥ್, ನೀಲಕಂಠಪ್ಪ, ಕಮಲಮ್ಮ, ದೇವನೂರ ಶಿವಶಂಕರ, ಗುರುರಾಜ ಕಾರೇಪುರ ಇತರರು ಇದ್ದರು.