ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ ಅವರನ್ನು ರಾಜ್ಯ ಕ್ರಿಕೆಟ್​ ಸಂಸ್ಥೆಯ ಸದಸ್ಯರು ಗುರುವಾರ ಭೇಟಿ ಮಾಡಿ ಜಾಗ ಮಂಜೂರಾತಿಗೆ ಮನವಿ ಸಲ್ಲಿಸಿದರು. ಮಲ್ಲೇಶ್​ ಬಾಬು, ಅಯಿಲ್​ ರಮೇಶ್​, ಓಂಶಕ್ತಿ ಚಲಪತಿ, ಕ್ರಿಕೆಟ್​ ಪಟುಗಳಾದ ಸಾಗರ್​ಶೆಟ್ಟಿ, ವಿನಯ್​, ಬಿ.ಸುರೇಶ್​, ಶ್ರೀನಾಥ್​ ಇದ್ದರು. 
ನ್ಯೂಸ್

ಕ್ರಿಕೆಟ್​ ಸ್ಟೇಡಿಯಂ ಕನಸು ನನಸಾಗಲಿ

ಕೋಲಾರ: ತಾಲೂಕಿನ ಹೊಳಲಿ ಸಮೀಪ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್​ ಸ್ಟೇಡಿಯಂ ನಿರ್ಮಾಣಕ್ಕೆ ಹೆಚ್ಚುವರಿ ಜಾಗ ಮಂಜೂರು ಮಾಡುವಂತೆ ಒತ್ತಾಯಿಸಿ, ರಾಜ್ಯ ಕ್ರಿಕೆಟ್​ ಸಂಸ್ಥೆಯ ಸದಸ್ಯರು ಜಿಲ್ಲಾಧಿಕಾರಿ ಅಕ್ರಂಪಾಷಾ ಅವರಿಗೆ ಗುರುವಾರ ಮನವಿ ಸಲ್ಲಿಸಿದರು.

ಈ ಹಿಂದೆಯೇ ಕ್ರಿಕೆಟ್​ ಸಂಸ್ಥೆಗೆ ತಾಲೂಕಿನ ಹೊಳಲಿ ಸಮೀಪ 16 ಎಕರೆ ಜಾಗವನ್ನು 30 ವರ್ಷಗಳಿಗೆ ಭೋಗ್ಯಕ್ಕೆ ನೀಡಲಾಗಿತ್ತು. ಇದಕ್ಕೆ ಜಿಲ್ಲಾಡಳಿತವು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈಗ 16 ಎಕರೆ ಜತೆಗೆ ಸ್ವಂತಕ್ಕೆ 28 ಎಕರೆ ಜಾಗ ನೀಡಿದರೆ ಖರೀದಿ ಮಾಡಿಕೊಳ್ಳಲಾಗುವುದು ಎಂದು ಸಂಸ್ಥೆ ಪದಾಧಿಕಾರಿಗಳು ಕೋರಿದ್ದಾರೆ.
ಹೊಳಲಿ ಗ್ರಾಮದ 16 ಎಕರೆ ಸರ್ಕಾರಿ ಗೋಮಾಳ ಜಾಗದಲ್ಲಿ ಬೆಂಗಳೂರಿನ ರಾಜ್ಯ ಕ್ರಿಕೆಟ್​ ಅಸೋಸಿಯೇಷನ್​ ಕ್ರೀಡಾಂಗಣ ನಿರ್ಮಾಣಕ್ಕೆ ತೀಮಾರ್ನಿಸಿತ್ತು. ಇದಕ್ಕೆ ಸ್ಪಂದಿಸಿದ್ದ ಅಂದಿನ ಜಿಲ್ಲಾಧಿಕಾರಿ ಜೆ.ಮಂಜುನಾಥ್​ ಅವರು, ಕರ್ನಾಟಕ ಭೂ ಮಂಜೂರಾತಿ 1969ರ ನಿಯಮ 22(ಎ) 1, 6ರ ಅನ್ವಯ ಮಾರ್ಗಸೂಚಿ ಬೆಲೆಯ ಶೇ.5ರಷ್ಟು 16 ಎಕರೆ ಜಮೀನಿಗೆ ವಾರ್ಷಿಕ ಗುತ್ತಿಗೆ ದರ ನಿಗದಿಪಡಿಸಿ ಸಂಸ್ಥೆಗೆ ಜಾಗ ಮಂಜೂರು ಮಾಡಿದ್ದರು.
ಇದರಿಂದಾಗಿ ಸ್ಥಳಿಯ ಕ್ರೀಡಾಪಟುಗಳಿಗೆ ಅನುಕೂಲವಾಗಲಿದೆ ಎಂಬ ನಿರೀೆಯಿತ್ತು. ಆದರೆ ಸಂಸ್ಥೆಯವರು ಕ್ರೀಡಾಂಗಣ ನಿರ್ಮಾಣ ಮಾಡಲು ವಿಳಂಬ ಮಾಡಿದ್ದರು. ಆದರೆ, ಈಗ ಹೆಚ್ಚುವರಿ ಜಾಗಕ್ಕೆ ಒತ್ತಾಯಿಸಿದ್ದಾರೆ.

ಜಾಗ ಖರೀದಿಗೆ ತೀರ್ಮಾನ
ಕ್ರಿಕೆಟ್​ ವಿಶ್ವದ ಕ್ರೀಡೆಗಳಲ್ಲಿ ಭಾರತೀಯರ ಅಚ್ಚುಮೆಚ್ಚಿನ ಕ್ರೀಡೆ ಆಗಿದೆ. ಜಿಲ್ಲೆಯಲ್ಲಿಯೂ ಕ್ರಿಕೆಟ್​ಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಸಂಸ್ಥೆಯು ಜಿಲ್ಲೆಯಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಸಹಕಾರ ಅಗತ್ಯ. 28 ಎಕರೆ ಜಾಗಕ್ಕೆ ಬೇಡಿಕೆ ಇಟ್ಟಿದ್ದು, ಜಾಗ ಕೊಟ್ಟರೆ 3 ಕೋರ್ಟ್​ ನಿರ್ಮಿಸಲಾಗುವುದು. ಸ್ಥಳಿಯ ಕ್ರೀಡಾಪಟುಗಳನ್ನು ಗುರುತಿಸಿ ಪಂದ್ಯಾವಳಿಗೆ ಕಳುಹಿಸುವ ಮೂಲಕ ಅಂತಾರಾಷ್ಟ್ರೀಯಮಟ್ಟದ ಸೌಲಭ್ಯಗಳುಳ್ಳ ಕ್ರೀಡಾಂಗಣ ನಿರ್ಮಾಣದ ಉದ್ದೇಶ ಇದೆ ಎಂದು ಸಂಸ್ಥೆಯ ಸಂಯೋಜನಾಧಿಕಾರಿ ರಮೇಶ್​ ತಿಳಿಸಿದರು.

ಕ್ರಿಕೆಟ್​ ಪಟುಗಳಿಗೆ ಸಿಕ್ಕ ಅದೃಷ್ಟ
ಜಿಲ್ಲೆಯಲ್ಲಿ ಕ್ರಿಕೆಟ್​ ಸ್ಟೇಡಿಯಂ ಆಗಬೇಕು ಎಂಬುದು ಬಹು ವರ್ಷಗಳ ಹೋರಾಟವಾಗಿತ್ತು. ಹಠಕ್ಕೆ ಬಿದ್ದು ಜಿಲ್ಲಾಡಳಿತದಿಂದ ಜಾಗ ಪಡೆದುಕೊಂಡಿದ್ದೇವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಜಾಗ ಮಂಜೂರು ಮಾಡಿಸಲಾಗಿದ್ದು, ಈಗ ರಾಜ್ಯ ಕ್ರಿಕೆಟ್​ ಸಂಸ್ಥೆಗೆ ಹೆಚ್ಚುವರಿ ಜಾಗ ಬೇಕಿದೆ. ಇದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಕ್ರಿಕೆಟ್​ ಆಟಗಾರ ಓಂಶಕ್ತಿ ಚಲಪತಿ ತಿಳಿಸಿದರು.

ಕೋಟ್​..
ಕೋಲಾರ ತಾಲೂಕಿನ ಹೊಳಲಿ ಸಮೀಪ ಕ್ರಿಕೆಟ್​ ಸ್ಟೇಡಿಯಂ ನಿರ್ಮಾಣಕ್ಕೆ ರಾಜ್ಯ ಕ್ರಿಕೆಟ್​ ಸಂಸ್ಥೆ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದು, ಸರ್ಕಾರದ ಗಮನಕ್ಕೆ ತಂದು ಕ್ರಮವಹಿಸಲಾಗುವುದು.- ಅಕ್ರಂಪಾಷಾ, ಜಿಲ್ಲಾಧಿಕಾರಿ