ನ್ಯೂಸ್

ಕಾಂಗ್ರೆಸ್ ಗೆ ಸ್ವಲ್ಪ ತಾಳ್ಮೆಯಿರಲಿ: ಕಿವಿಹಿಂಡಿದ ಬಿಎಸ್ ವೈ

ಬೆಂಗಳೂರು: ಬರ ಪರಿಹಾರ ಕಾರ್ಯಗಳಿಗೆ ಎನ್ ಡಿಆರ್ ಎಫ್ ನಡಿ ಹೆಚ್ಚುವರಿ ಸಹಾಯಧನ ಕೇಂದ್ರ ಸರ್ಕಾರ ಕೊಟ್ಟೇ‌ ಕೊಡುತ್ತದೆ. ಈ ವಿಷಯದಲ್ಲೂ ರಾಜಕೀಯ ಮಾಡುವುದು ಬೇಡ. ಕಾಂಗ್ರೆಸ್ ನವರಿಗೆ ಸ್ವಲ್ಪ ತಾಳ್ಮೆಯಿರಲಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಿವಿ ಹಿಂಡಿದರು.

ತುಮಕೂರು ಜಿಲ್ಲೆಗೆ ಚುನಾವಣಾ ಪ್ರಚಾರ ಪ್ರವಾಸಕ್ಕೆ ತೆರಳುವ ಮುನ್ನ ಬುಧವಾರ ಸುದ್ದಿಗಾರರಿಗೆ‌ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಾಯಕರು ಹೇಳಿದ್ದೇ ಹೇಳುವುದು, ಪದೇ ಪದೆ ಹೋರಾಟ ನಡೆಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ರೀತಿ ಚಳವಳಿ ಉದ್ದೇಶವೇನೆಂದು ಜನರಿಗೂ ಅರ್ಥವಾಗುತ್ತದೆ ಎಂದು ಕುಟುಕಿದರು.

ಕೇಂದ್ರದಲ್ಲಿ ಯಾವುದೇ ಪಕ್ಷದ ಆಡಳಿತವಿರಲಿ, ನಿಯಮದ ಪ್ರಕಾರ ನೆರವು ದೊರೆಯುತ್ತದೆ. ಹಿಂದಿನ ಸರ್ಕಾರದ ಅವಧಿಯಲ್ಲೂ ತಡವಾಗಿ ಬಿಡುಗಡೆ ಮಾಡಿದ ಉದಾಹರಣೆ‌ ಸಾಕಷ್ಟಿವೆ. ನ್ಯಾಯಸಮ್ಮತವಾಗಿ ಪರಿಹಾರ ಸಿಗಲಿದೆ. ಈ ನಿಟ್ಟಿನಲ್ಲಿ ಏನೆಲ್ಲ ಕ್ರಮಗಳಾಗಿವೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಪೂರ್ಣ ಮಾಹಿತಿ ಜನರ ಮುಂದಿಟ್ಟಿದ್ದಾರೆ ಎಂದರು.

ಪ್ರಕೃತಿ ವಿಕೋಪ ಬಾಧಿತ ಎಲ್ಲ ರಾಜ್ಯಗಳಿಗೆ ನ್ಯಾಯಬದ್ಧ ಪರಿಹಾರ ಕೊಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ಕಾಂಗ್ರೆಸ್ ನಾಯಕರು ಹಣ ಬಿಡುಗಡೆಯಾಗುವ ತನ ಕಾಯುವುದಕ್ಕೆ ಸಿದ್ಧರಿಲ್ಲ. ಹೇಳಿದ್ದನ್ನೇ ಹೇಳಿ, ಮತ್ತೆ ಹೋರಾಟ ಮಾಡುತ್ತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.