ಶಿವಮೊಗ್ಗ: ನಗರದ ರಾಜ್ಯ ಮಹಿಳಾ ನಿಲಯ ಮತ್ತು ಮಕ್ಕಳ ಪಾಲನಾ ಸಂಸ್ಥೆ ಸುಪರ್ದಿಯಲ್ಲಿನ ನಿವಾಸಿಗಳ ಆರೋಗ್ಯ ಮತ್ತು ಸುರಕ್ಷೆಗೆ ವಿಶೇಷ ಗಮನ ನೀಡಬೇಕು ಎಂದು ಬಾಲ ನ್ಯಾಯಮಂಡಳಿ ಪ್ರಧಾನ ನ್ಯಾಯಾಧೀಶೆ ದೀಪಾ ಹೇಳಿದರು.
ಶುಕ್ರವಾರ ಏರ್ಪಡಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಮಕ್ಕಳ ಪಾಲನಾ ಸಂಸ್ಥೆ ಮತ್ತು ಮಹಿಳಾ ನಿಲಯದಲ್ಲಿನ ನಿವಾಸಿಗಳು, ಮಾನಸಿಕ ಮತ್ತು ಬೌದ್ಧಿಕ ವಿಕಾರಗಳಿಗೆ ಒಳಗಾಗಿರುವವರ ಆರೋಗ್ಯ ತಪಾಸಣೆಗೆ ವೈದ್ಯರು ಹಾಗೂ ಮಹಿಳಾ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ತಿಳಿಸಿದರು.
ತುರ್ತು ಸಂದರ್ಭಗಳಲ್ಲಿ ಮೆಗ್ಗಾನ್ ಆಸ್ಪತ್ರೆಗೆ ಬಾಧಿತರನ್ನು ಕರೆದುಕೊಂಡು ಹೋದಾಗ ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಮಾನಸಿಕ ಸಮಸ್ಯೆ ಪ್ರಕರಣಗಳಿದ್ದಾಗ ಮಾನವೀಯ ನೆಲೆಯಲ್ಲಿ ವಿಶೇಷವೆಂದು ಪರಿಗಣಿಸಿ ಕೂಡಲೇ ಚಿಕಿತ್ಸೆ ನೀಡಬೇಕು ಎಂದರು.
ಮೆಗ್ಗಾನ್‌ನಲ್ಲಿ ಆರೋಗ್ಯ ತಪಾಸಣೆಗೆ ಶುಲ್ಕ ವಿಧಿಸಲಾಗುತ್ತಿದೆ. ಈ ಶುಲ್ಕ ಪಾವತಿಸುವಲ್ಲಿ ಇಲ್ಲಿನ ನಿವಾಸಿಗಳಿಗೆ ವಿನಾಯಿತಿ ನೀಡುವ ಸಾಧ್ಯತೆಗಳ ಬಗ್ಗೆ ಪರಿಶೀಲಿಸಬೇಕು. ಅಪ್ರಾಪ್ತ ಮಕ್ಕಳು ಸರದಿ ಸಾಲಿನಲ್ಲಿರುವಾಗ ಸಂಸ್ಥೆಯ ರಕ್ಷಕರಿಂದ ತಪ್ಪಿಸಿಕೊಳ್ಳುವ ಸಂಭವವಿರುತ್ತದೆ. ಅವರ ಗೌಪ್ಯತೆ ಕಾಪಾಡುವಲ್ಲಿ ಬಾಲನ್ಯಾಯ ಕಾಯ್ದೆ ಉಲ್ಲಂಘನೆ ಆಗುತ್ತಿರುವುದನ್ನು ಮಂಡಳಿ ಗಂಭೀರವಾಗಿ ಪರಿಗಣಿಸಿದೆ ಎಂದು ಎಚ್ಚರಿಸಿದರು.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಕ್ಕಳ ಚಿಕಿತ್ಸೆಗಾಗಿ ಗೌಪ್ಯತೆ ದೃಷ್ಟಿಯಿಂದ ಪ್ರತ್ಯೇಕ ವ್ಯವಸ್ಥೆ ಒದಗಿಸಬೇಕು. ಜಿಲ್ಲೆಯಲ್ಲಿ ಹೆಚ್ಚಿನ ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿರುವುದು ಕಳವಳಕಾರಿ. ಪ್ರಕರಣಗಳ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲಾ ಬಾಲನ್ಯಾಯ ಮಂಡಳಿ ಸದಸ್ಯರಾದ ಡಾ. ಕೆ.ಎಸ್.ಪವಿತ್ರಾ, ಜಿ.ಎಂ.ರೇಖಾ ಇದ್ದರು.