ನ್ಯೂಸ್

ಕಸಾಪದಲ್ಲಿ ನಡೆದ ವ್ಯವಹಾರ ತನಿಖೆಯಾಗಲಿ

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್‌ಗೆ ಆಡಳಿತಾಧಿಕಾರಿ ನೇಮಿಸಬೇಕು. ಆರ್ಥಿಕ ವ್ಯವಹಾರಗಳ ಬಗ್ಗೆ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಪರಿಷತ್‌ನ ಶಿವಮೊಗ್ಗದ ಆಜೀವ ಸದಸ್ಯರ ಪರವಾಗಿ ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ಆಗ್ರಹಿಸಿದರು.

ಪರಿಷತ್‌ನ ಸರ್ವಸದಸ್ಯರ ವಿಶೇಷ ಸಭೆ ಜೂ.22ರಂದು ನಡೆಯಲಿದೆ. ಈ ಸಭೆಯಲ್ಲಿ ಬೈಲಾ ತಿದ್ದುಪಡಿ ಬಗ್ಗೆ ಚರ್ಚೆಯಾಗಲಿದೆ. ಅದನ್ನು ಈಗಿರುವ ಸ್ಥಿತಿಯಲ್ಲಿ ಮಂಡಿಸದೆ ಎಲ್ಲರೂ ಒಪ್ಪುವ ಸ್ಥಿತಿಯಲ್ಲಿ ಮಂಡಿಸಬೇಕು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಸರ್ವಾಧಿಕಾರಿಂತೆ ವರ್ತಿಸುತ್ತಿದ್ದಾರೆ. ಬೈಲಾ ತಿದ್ದುಪಡಿ ಬಗ್ಗೆ ಅವೈಜ್ಞಾನಿಕವಾಗಿ ಮಾತನಾಡುತ್ತಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಹೊಸ ಬೈಲಾ ಜಾರಿಗೆ ಬಂದರೆ ಅಧಿಕಾರ ಅಧ್ಯಕ್ಷರ ಕೇಂದ್ರೀಕೃತವಾಗುತ್ತದೆ. ಸರ್ವಾಧಿಕಾರ ನೀಡಿದಂತಾಗುತ್ತದೆ. ಜಿಲ್ಲೆ, ತಾಲೂಕು, ಹೋಬಳಿ ಮಟ್ಟದ ಪರಿಷತ್‌ಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಸ್ಥಳೀಯ ಪದಾಧಿಕಾರಿಗಳ ನೇಮಕವನ್ನೂ ಅಧ್ಯಕ್ಷರೇ ಮಾಡಬೇಕಾಗುತ್ತದೆ ಎಂದರು.

ವಕೀಲ ಕೆ.ಪಿ.ಶ್ರೀಪಾಲ್ ಮಾತನಾಡಿ, ಕಸಾಪ ಅಧ್ಯಕ್ಷ ಡಾ. ಮಹೇಶ ಜೋಷಿ ಈ ಹಿಂದೆ ದೂರದರ್ಶನದಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೂ ಇವರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಈ ಬಗ್ಗೆಯೂ ಸರ್ಕಾರ ತನಿಖೆ ನಡೆಸಬೇಕು. ಪರಿಷತ್ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.

ಸಾಹಿತಿ ಬಿ.ಚಂದ್ರೇಗೌಡ ಮಾತನಾಡಿ, ಮಹೇಶ ಜೋಷಿ ಅಧ್ಯಕ್ಷರಾದ ಮೇಲೆ ಸಮಸ್ಯೆಗಳು ಹೆಚ್ಚುತ್ತಿವೆ. ಅವರಿನ್ನೂ ಮಂಡ್ಯದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಖರ್ಚು-ವೆಚ್ಚದ ವಿವರ ನೀಡಿಲ್ಲ. ಸರ್ಕಾರದಿಂದ 33 ಕೋಟಿ ರೂ. ಬಿಡುಗಡೆಯಾಗಿತ್ತು. 2.50 ಕೋಟಿ ರೂ. ವಿವಿಧೆಡೆಯಿಂದ ಬಂದಿತ್ತು. ಅದರ ಬಗ್ಗೆ ವಿವರ ನೀಡಿಲ್ಲ ಎಂದು ದೂರಿದರು.

ಪ್ರಮುಖರಾದ ಸಂಗಮೇಶ್, ಪ್ರಕಾಶ್, ಕೃಷ್ಣಮೂರ್ತಿ, ಮಂಜಪ್ಪ, ಗಣೇಶ್, ಪುಟ್ಟಯ್ಯ, ಶೇಖರ್ ಗೌಳೇರ್ ಸುದ್ದಿಗೋಷ್ಠಿಯಲ್ಲಿದ್ದರು.