ಎಸ್‌ಎಸ್‌ಎಲ್‌ಸಿಯಲ್ಲಿ ಮೊದಲ ರ‌್ಯಾಂಕ್ ಪಡೆದ ನಮನಾ ಜತೆಗೆ ಆಕೆಯ ಪಾಲಕರನ್ನು ಶಿವಮೊಗ್ಗದ ಆರ್ಯ ವಿಜ್ಞಾನ ಪಿಯು ಕಾಲೇಜಿನಲ್ಲಿ ಸನ್ಮಾನಿಸಲಾಯಿತು. ಎನ್.ರಮೇಶ್, ಸುನೀತಾದೇವಿ, ಪ್ರೊ. ರಂಗನಾಥಯ್ಯ, ಪ್ರೊ. ಪದ್ಮನಾಭ್ ಇದ್ದರು. 
ನ್ಯೂಸ್

ಸಾಧಕರು ಮುಂದಿನ ಗುರಿಯತ್ತ ಹೆಜ್ಜೆ ಹಾಕಲಿ

ಶಿವಮೊಗ್ಗ: ಪ್ರತಿ ಸಾಧನೆಯೂ ಮತ್ತೊಂದು ಸಾಧನೆಗೆ ಮೆಟ್ಟಿಲಾಗಬೇಕು. ಒಮ್ಮೆ ಸಾಧನೆ ತೋರಿದವರು ಅಷ್ಟಕ್ಕೇ ಸೀಮಿತರಾಗದೆ ಮುಂದಿನ ಗುರಿಯತ್ತ ಹೆಜ್ಜೆ ಹಾಕಬೇಕು ಎಂದು ನಿವೃತ್ತ ಪ್ರಾಚಾರ್ಯ ಪ್ರೊ. ರಂಗನಾಥಯ್ಯ ಹೇಳಿದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ಮೊದಲ ರ‌್ಯಾಂಕ್ ಹಂಚಿಕೊಂಡ ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ಕೆ.ನಮನಾ ಅವರನ್ನು ಎಲ್‌ಬಿಎಸ್ ನಗರದ ಆರ್ಯ ವಿಜ್ಞಾನ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪುರಸ್ಕರಿಸಿ ಮಾತನಾಡಿದರು.

ಸಾಧಕರನ್ನು ಸನ್ಮಾನಿಸಿ ಅವರ ಸಂತೋಷವನ್ನು ನಾವು ಹಂಚಿಕೊಳ್ಳಬೇಕು. ಮುಂದಿನ ಗುರಿಯನ್ನು ತಲುಪಲು ಮತ್ತೊಂದು ಸಾಧನೆ ಅನಿವಾರ್ಯವಾಗುತ್ತದೆ. ನಮನಾ ಮಾಡಿರುವ ಸಾಧನೆ ಅಪರೂಪದ್ದಾಗಿದೆ ಎಂದರು.

ಗ್ಲೋಬಲ್ ಎಜುಕೇಷನ್ ಸೊಸೈಟಿ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ, 18 ವರ್ಷಗಳ ಹಿಂದೆ ನಮ್ಮ ಸಂಸ್ಥೆ ಆರಂಭವಾಯಿತು. ಕಳೆದ 14 ವರ್ಷಗಳಿಂದ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಪಡೆಯುತ್ತಿದೆ. ಈ ಬಾರಿ ಮೊದಲ ರ‌್ಯಾಂಕ್ ಪಡೆದಿರುವುದು ನಮ್ಮ ಕನಸನ್ನು ನನಸಾಗಿದೆ ಎಂದು ಹೇಳಿದರು.

ಎರಡು ವರ್ಷಗಳ ಹಿಂದೆ ಕೇವಲ ಒಂದು ಅಂಕದಿಂದ ಇಬ್ಬರು ಮೊದಲ ರ‌್ಯಾಂಕ್ ತಪ್ಪಿಸಿಕೊಂಡಿದ್ದರು. ಈ ಬಾರಿ ಇಬ್ಬರು ಮೊದಲ ರ‌್ಯಾಂಕ್ ಪಡೆಯುತ್ತಾರೆಂಬ ನಿರೀಕ್ಷೆಯಿತ್ತು. ನಮನಾ ಅದನ್ನು ಸಾಕಾರಗೊಳಿಸಿದ್ದು ಆರ್ಯ ಪಿಯು ವಿಜ್ಞಾನ ಕಾಲೇಜಿನ ಅಧ್ಯಾಪಕರು ಆಕೆಗೆ ಗಣಿತ ಮತ್ತಿತರ ವಿಷಯದಲ್ಲಿ ಹೆಚ್ಚಿನ ತರಬೇತಿ ನೀಡಿ ಪರೀಕ್ಷೆಗೆ ಅಣಿಗೊಳಿಸಿದ್ದರು. ಆಕೆಯ ಸಾಧನೆಯಲ್ಲಿ ನಮ್ಮ ಶಿಕ್ಷಕ ವೃಂದ, ಆಕೆಯ ಪಾಲಕರ ಪಾತ್ರವೂ ಇದೆ. ಆಕೆಗೆ ನಮ್ಮ ಕಾಲೇಜಿನಲ್ಲಿ ಉಚಿತ ಶಿಕ್ಷಣ ನೀಡಲಾಗುವುದು ಎಂದು ತಿಳಿಸಿದರು.

ನಮನಾ ಪಾಲಕರಾದ ಕೃಷ್ಣಮೂರ್ತಿ ಹಾಗೂ ಪದ್ಮಿನಿ ಅವರನ್ನು ಸನ್ಮಾನಿಸಲಾಯಿತು. ನಿವೃತ್ತ ಪ್ರಾಧ್ಯಾಪಕ ಪ್ರೊ. ಪದ್ಮನಾಭ್, ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯೆ ಸುನೀತಾದೇವಿ ಉಪಸ್ಥಿತರಿದ್ದರು.