ನ್ಯೂಸ್

ಸಂಪಾದಕೀಯ| ಇಂಥ ಕೃತ್ಯಗಳು ನಿಲ್ಲಲಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಕರೊನಾ ಎರಡನೆಯ ಅಲೆಯ ಅಬ್ಬರ ತೀವ್ರವಾಗಿರುವಾಗ ರಾಜ್ಯ ಸಾಲು&ಸಾಲು ಸಮಸ್ಯೆಗಳನ್ನು ಎದುರಿಸಬೇಕಾಯಿತು. ದಿಢೀರನೆ ಸೋಂಕು ಪ್ರಕರಣಗಳ ಸಂಖ್ಯೆ ನಿರೀೆ ಮೀರಿ ಹೆಚ್ಚಿದ್ದರಿಂದ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದಂಥ ಸನ್ನಿವೇಶ. ಹಾಸಿಗೆ ಸಿಕ್ಕರೆ ವೈದ್ಯಕಿಯ ಆಮ್ಲಜನಕ, ಇತರ ಅಗತ್ಯ ಔಷಧಗಳ ಕೊರತೆ. ಅಗತ್ಯವಿರುವಷ್ಟು ಆಮ್ಲಜನಕ ಪೂರೈಸಲಾಗದೆ ಚಾಮರಾಜನಗರ ಸೇರಿ ಹಲವೆಡೆ ಸಾವುನೋವುಗಳು ವರದಿಯಾದವು. ಕರೊನಾದಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೂ ಪರದಾಡುವಂಥ ಸನ್ನಿವೇಶ ಎದುರಾಯಿತು. ಶವಗಳನ್ನು ಹೊತ್ತ ಆಂಬುಲೆನ್ಸ್​ಗಳು ಸ್ಮಶಾನಗಳ ಮುಂದೆ ಗಂಟೆಗಟ್ಟಲೇ ಕಾಯಬೇಕಾಯಿತು. ಒಟ್ಟಾರೆ ಎರಡನೆಯ ಅಲೆ ನಿಯಂತ್ರಣಕ್ಕೆ ಸರ್ಕಾರ, ಆರೋಗ್ಯ ವ್ಯವಸ್ಥೆ ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕಾಯಿತು. ಮೊದಲಿಗೆ ಜನತಾ ಕ್ಯೂರ್ ಹೇರಿದರೂ ಹೇಳಿಕೊಳ್ಳುವಂಥ ಪ್ರಯೋಜನ ಆಗಲಿಲ್ಲ. ಹಾಗಾಗಿ, ಎರಡು ಹಂತದ ಕಠಿಣ ಲಾಕ್​ಡೌನ್​ ಜಾರಿಯ ಬಳಿಕ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪರಿಸ್ಥಿತಿ ಒಂದಿಷ್ಟು ನಿಯಂತ್ರಣಕ್ಕೆ ಬಂದಿದೆ. ದೀರ್ಘಾವಧಿ ಲಾಕ್​ಡೌನ್​ ಜನರ ಸಂಕಷ್ಟಗಳನ್ನು ಹೆಚ್ಚಿಸುತ್ತಿದ್ದು, ಹಂತಹಂತವಾಗಿ ಅನ್​ಲಾಕ್​ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ.

ಈ ಎಲ್ಲ ಸವಾಲುಗಳ ವಿರುದ್ಧ ಹೋರಾಡುತ್ತ ಒಂದಿಷ್ಟು ಬದಲಾವಣೆ ಕಂಡುಬಂದಿದೆಯಾದರೂ, ರಾಜ್ಯದಲ್ಲಿ ಕರೊನಾ ಆಪತ್ತಿನ ಹೊತ್ತಲ್ಲೇ ಅಮಾನವೀಯ ಟನೆಗಳು ನಡೆಯುತ್ತಿರುವುದು ತೀವ್ರ ಕಳವಳದ ವಿಚಾರ. ಆಸ್ಪತ್ರೆಗೆ ದಾಖಲಾದ ರೋಗಿಗೆ ಸಂಬಂಧಪಟ್ಟ ಸಾಮಗ್ರಿಗಳ ಕಳವು, ಸೋಂಕುಪೀಡಿತರಿಗೆ ವಿನಾಕಾರಣ ತೊಂದರೆ ಕೊಡುವಂಥ ಟನೆಗಳು ಹೆಚ್ಚುತ್ತಿರುವುದು ದುರದೃಷ್ಟಕರ. ಕಲಬುರಗಿಯಲ್ಲಂತೂ ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಷ್ಟೇ ಅಲ್ಲ, ರೋಗಿಗಳಿಂದ ಒತ್ತಾಯವಾಗಿ ಹಣ ಕೀಳುತ್ತಿರುವುದು, ಆಂಬುಲೆನ್ಸ್​ನಲ್ಲಿ ಸಾಗುವಾಗ ದಾರಿಮಧ್ಯದಲ್ಲೇ ಸೋಂಕಿತರನ್ನು ರಸ್ತೆಯಲ್ಲಿ ಬಿಟ್ಟು ಹೋಗುವುದು ಸೇರಿದಂತೆ ಅನೇಕ ಅಹಿತಕರ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇದನ್ನೆಲ್ಲ ನೋಡುತ್ತಿದ್ದರೆ ಮನುಷ್ಯತ್ವ, ಮಾನವೀಯ ಸಂವೇದನೆ, ಪರೋಪಕಾರ ಎಂಬ ಮೌಲ್ಯಗಳಿಗೆಲ್ಲ ಗ್ರಹಣ ಬಡಿದಿದೆಯೇ ಎಂಬ ಕಳವಳ ಆವರಿಸಿಕೊಳ್ಳುತ್ತದೆ.

ಕರೊನಾ ದೊಡ್ಡ ಮಾನವೀಯ ಸಂಕಷ್ಟವನ್ನೇ ಸೃಷ್ಟಿಸಿದೆ. ಈ ಮಹಾಮಾರಿಗೆ ಸಾವಿರಾರು ಜನರು ಬಲಿಯಾಗಿರುವುದು ಒಂದೆಡೆಯಾದರೆ, ಕುಟುಂಬದ ಆಧಾರವನ್ನು, ತಮ್ಮವರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವವರ ಸಂಖ್ಯೆಯೂ ಅಧಿಕ. ವಾಸ್ತವದಲ್ಲಿ, ಇಂಥ ಕಠಿಣ ಸನ್ನಿವೇಶದಲ್ಲಿ ಮಾನವೀಯತೆಯ ಬೆಳಕು ನಿರಾಸೆಯ ಕತ್ತಲನ್ನು ಸೀಳಬೇಕು. ಒಬ್ಬರು ಮತ್ತೊಬ್ಬರ ನೆರವಿಗೆ ಬರುತ್ತ, ನೋವಿನ ಪ್ರಮಾಣವನ್ನು ಕಡಿಮೆಯಾಗಿಸಬೇಕು. ಆದರೆ, ಈಗೇನಾಗುತ್ತಿದೆ? ರೋಗಿಗಳನ್ನು ಕಾಳಜಿಯಿಂದ ನೋಡಿಕೊಳ್ಳಬೇಕಾದ, ಆರೈಕೆ ಮಾಡಬೇಕಾದ ಸ್ಥಳಗಳಲ್ಲೇ ಅವರು ಅಭದ್ರತೆ ಎದುರಿಸುವಂತಾಗಿದೆ. ಕಾಡುತ್ತಿರುವ ಅನಾರೋಗ್ಯ, ಆರ್ಥಿಕ ಸಂಕಷ್ಟದ ನಡುವೆ ಇಂಥ ಕಹಿ ಟನೆಗಳು ನಡೆದರೆ ಅವರು ಅದನ್ನು ಹೇಗೆ ತಾನೇ ಅರಗಿಸಿಕೊಳ್ಳಬಲ್ಲರು? ಇಂಥ ಬಿಕ್ಕಟ್ಟಿನ ಸನ್ನಿವೇಶವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವವರು, ಮಾನವೀಯತೆ ಮರೆತು ವರ್ತಿಸುತ್ತಿರುವವರು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಎಲ್ಲೋ ಕೆಲವರಿಂದಾಗಿ ವ್ಯವಸ್ಥೆಯ ಮೇಲೆ ಕಪು$್ಪಚುಕ್ಕೆ ಬರುವಂತಾಗಬಾರದು. ಇಂಥ ಟನೆಗಳಿಗೆ ಕಡಿವಾಣ ಹಾಕಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.