ಎಲ್ಲರೂ ಪ್ರವೇಶಿಸಬಹುದು: ಭಾರತದ ಎಲ್ಲಾ ದೇವಸ್ಥಾನಗಳಿಗೂ, ಎಲ್ಲರೂ ಪ್ರವೇಶಿಸಬಹುದು. ಗರ್ಭಗುಡಿಯೊಳಗೆ ಅರ್ಚಕರ ಹೊರತಾಗಿ ಬೇರೆ ಯಾರೂ ಪ್ರವೇಶಿಸಬಾರದೆಂಬ ಪದ್ಧತಿಯು ಇದ್ದರೆ ಅದು ಇರಲಿ ಬಿಡಿ. ಆದರೆ ಕಾಶಿ ವಿಶ್ವನಾಥ, ಕೇದಾರನಾಥ ದೇವಸ್ಥಾನ ಮತ್ತು ಇನ್ನೂ ಕೆಲವೆಡೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಗರ್ಭಗುಡಿಯನ್ನು ಪ್ರವೇಶಿಸಿ ಶಿವಲಿಂಗವನ್ನು ರ್ಸ³ಸಬಹುದೆಂಬ ಪದ್ಧತಿಯಿದೆ. ಶಾಸ್ತಗಳಲ್ಲಿ ಲಿಂಗಭೇದ ಎಂಬುದು ಎಲ್ಲೂ ಇಲ್ಲ ಎನ್ನುವ ವಿಷಯ ಅನೇಕ ಜನರಿಗೆ ತಿಳಿದಿಲ್ಲ. ಲಿಂಗಭೇದವನ್ನು ಜನರು ಅನುಸರಿಸುತ್ತಿದ್ದರೆ, ಅದಕ್ಕೆ ಯಾವ ಶಾಸ್ತಗಳ ಆಧಾರವೂ ಇಲ್ಲ.
ಅವರಾಗಿಯೇ ಅನುಸರಿಸುತ್ತಿರುವ ಪದ್ಧತಿಯದು. ಆದರೆ ಈ ವಿಷಯಗಳ ಬಗ್ಗೆ ಎರಡೂ ಪಕ್ಷದವರು ಹೋರಾಟದ ಧೋರಣೆಯನ್ನು ಹೊಂದಿ, ಅಹಂಕಾರದ ಘರ್ಷಣೆಯನ್ನಾಗಿ ಮಾಡುವ ಅವಶ್ಯಕತೆಯಿಲ್ಲ. ಧಾರ್ವಿುಕ ವ್ಯಕ್ತಿಗಳೆಲ್ಲರೂ ಸೇರಿ ಲಿಂಗಭೇದವನ್ನು ಒಮ್ಮತದಿಂದ ಅಳಿಸಿ ಹಾಕಬೇಕು.
ಅನೇಕ ಶತಮಾನಗಳಿಂದ ಮಾಡದೆ ಇರುವುದನ್ನು ಈಗ ಮಾಡಿದರೆ ಏನು ಅನಾಹುತ ಆಗುತ್ತದೊ ಎಂಬ ಭೀತಿ ಜನರನ್ನು ಕಾಡುತ್ತದೆ. ಎಲ್ಲಾ ರೀತಿಯ ಜನರೂ ದೇವಸ್ಥಾನದೊಳಗೆ ಬಂದು ಪ್ರಾರ್ಥನೆಯನ್ನು ಸಲ್ಲಿಸಿದರೆ ಭಗವಂತನಿಗೇನೂ ಕೋಪ ಬರುವುದಿಲ್ಲ. ಬದಲಿಗೆ ಭಗವಂತ ಸಂತೋಷ ಪಡುತ್ತಾನೆ. ಶಿಂಗ್ಣಾಪುರದ ಶನಿದೇವನು, ಮಹಿಳೆಯರು ಆತನ ದೇವಸ್ಥಾನದೊಳಗೆ ಬಂದು ಪ್ರಾರ್ಥಿಸಿದರೆ ಖಂಡಿತವಾಗಿಯೂ ಸಂತೋಷಿಸುತ್ತಾನೆ. ಲಿಂಗಭೇದವನ್ನು ಅಳಿಸಲು ಯಾವ ರೀತಿಯ ಮಾನಸಿಕ ಭೀತಿಯನ್ನೂ ಜನರು ಹೊಂದಬೇಕಿಲ್ಲ.
ಎಲ್ಲ ಮನುಷ್ಯರೂ ಸಮಾನರು: ಒಂದು ರೀತಿಯ ಮನುಷ್ಯರಿಗಿಂತಲೂ ಮತ್ತೊಂದು ರೀತಿಯವರೇ ಹೆಚ್ಚು ಎಂದು ಧರ್ಮವು ಹೇಳಿದರೆ, ಅದನ್ನು ಖಂಡಿತ ಒಪ್ಪಬೇಡಿ. ಎಲ್ಲಾ ಮನುಷ್ಯರೂ ಸರಿಸಮಾನರು, ಎಲ್ಲರೂ ಸುಂದರವಾದ ವ್ಯಕ್ತಿಗಳು. ಪಾಶ್ಚಿಮಾತ್ಯ ಹಾಗೂ ಪೌರಾತ್ಯ ದೇಶಗಳ ಧರ್ಮಗಳ ನಡುವೆ ಇರುವ ವ್ಯತ್ಯಾಸವೇ ಇದು. ಪೌರಾತ್ಯ ದೇಶಗಳಲ್ಲಿ ಮೊದಲು ತಾವು ಅನುಭವಿಸಿ ನಂತರ ನಂಬು ಎಂದರೆ, ಪಾಶ್ಚಿಮಾತ್ಯ ದೇಶಗಳಲ್ಲಿ, ಮೊದಲು ನಂಬು. ಒಂದು ದಿನ ಅದು ನಿನ್ನ ಅನುಭವಕ್ಕೆ ಬರುತ್ತದೆ ಎನ್ನುತ್ತಾರೆ. ಇಬ್ಬರೂ ತಮ್ಮದೇ ರೀತಿಗಳಲ್ಲಿ ಸರಿಯಾಗಿದ್ದಾರೆ. ಆದರೆ ವಿಜ್ಞಾನಕ್ಕೆ ಪಾಶ್ಚಿಮಾತ್ಯ ದೇಶಗಳನ್ನು ಅನುಸರಿಸಲಾಗಲಿಲ್ಲ, ಏಕೆಂದರೆ ವಿಜ್ಞಾನವು ಮೊದಲು ಅನುಭವಿಸಿ ನಂತರ ನಂಬು ಎನ್ನುತ್ತದೆ. ಈ ಕಾರಣದಿಂದಾಗಿ ಪಾಶ್ಚಿಮಾತ್ಯ ದೇಶಗಳಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮಿಕತೆಯ ನಡುವೆ ಸದಾ ಘರ್ಷಣೆ ಇದ್ದಿತು. ಆದರೆ ಪೌರಾತ್ಯ ದೇಶಗಳಲ್ಲಿ ಎಂದಿಗೂ ವಿಜ್ಞಾನ ಮತ್ತು ಅಧ್ಯಾತ್ಮದ ನಡುವೆ ಈ ಸಮಸ್ಯೆ ಏಳಲೇ ಇಲ್ಲ.
ಯೋಗ ಒಂದು ವಿಜ್ಞಾನ: ಯೋಗ ಒಂದು ವಿಜ್ಞಾನ. ಮೊದಲು ಪಂಚಭೂತಗಳ ಬಗ್ಗೆ ತಿಳಿದುಕೊ ಎನ್ನುತ್ತದೆ ಯೋಗ. ಪೃಥ್ವಿ, ಅಗ್ನಿ, ಜಲ, ವಾಯು, ಆಕಾಶ ಇವು ಪಂಚಭೂತಗಳು. ಇವುಗಳ ಬಗ್ಗೆ ತಿಳಿದ ನಂತರ ಮನಸ್ಸಿನ ಬಗ್ಗೆ ತಿಳಿದುಕೊ ಎನ್ನುತ್ತದೆ ಯೋಗ. ದೇಹವನ್ನು ತಿಳಿದುಕೊಂಡು, ಅದರ ಮೂಲಕ ಮನಸ್ಸನ್ನು ತಿಳಿಯುವುದು. ಆದ್ದರಿಂದ ಆಧ್ಯಾತ್ಮಿಕತೆ ಮತ್ತು ವಿಜ್ಞಾನವು ಸಹಬಾಳ್ವೆಯನ್ನು ನಡೆಸಲೇಬೇಕು. ಆಧ್ಯಾತ್ಮಿಕತೆಯು ವೈಜ್ಞಾನಿಕವಾಗಿರಬೇಕು ಮತ್ತು ವಿಜ್ಞಾನವು ಆಧ್ಯಾತ್ಮಿಕತೆಯ ಹೃದಯವನ್ನು ಹೊಂದಿರಬೇಕು. ಇಲ್ಲವಾದರೆ ವಿಜ್ಞಾನದ ಮೂಲಕ ವಿನಾಶವನ್ನು ಉಂಟು ಮಾಡಲು ಪ್ರಾರಂಭಿಸುತ್ತೇವೆ.