ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಸಾಂಸ್ಕೃತಿಕ ದಿನಕ್ಕೆ ಜಿ.ಎಸ್.ನಾರಾಯಣ ರಾವ್ ಚಾಲನೆ ನೀಡಿದರು. ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಎಸ್.ವೈ.ವಿನಯ್, ಡಾ.ಜಿ.ನಾರಾಯಣಮೂರ್ತಿ ಇತರರಿದ್ದರು.  
ನ್ಯೂಸ್

ಸರಳ, ಸಜ್ಜನಿಕೆ ನಮ್ಮದಾಗಿರಲಿ: ಜಿ.ಎಸ್.ನಾರಾಯಣ ರಾವ್

ಶಿವಮೊಗ್ಗ: ನಮ್ಮ ಜೀವನ ಬೇರೆಯವರಿಗೆ ಪ್ರೇರಣೆ ನೀಡುವ ಬರೆದಿಟ್ಟ ಪುಸ್ತಕವಾಗಬೇಕು. ಆ ಪುಸ್ತಕವನ್ನು ಎಲ್ಲರೂ ಓದುವಂತಿರಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಹೇಳಿದರು.

ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಿಂದ ಶುಕ್ರವಾರ ಏರ್ಪಡಿಸಿದ್ದ ಕಲಾ ಸಂಭ್ರಮ-2023 ಸಾಂಸ್ಕೃತಿಕ ದಿನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನಲ್ಲಿ ಸಾಂಸ್ಕೃತಿಕ ಜೀವಂತಿಕೆ ಅತಿ ಮುಖ್ಯ. ಅಂತಹ ಜೀವಂತಿಕೆ ಬದುಕಿನಲ್ಲಿ ಎದುರಾಗುವ ಪ್ರತಿಯೊಂದು ಸವಾಲುಗಳನ್ನು ಎದುರಿಸಲು ಸಹಾಯ ಮಾಡುತ್ತದೆ. ಸಾಂಸ್ಕೃತಿಕ ಕಲೆ ಬೆಳೆಸುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ.ಹೀಗಾಗಿ ಪ್ರಾಥಮಿಕದಿಂದ ಪದವಿಯವರೆಗೆ ಸಾಂಸ್ಕೃತಿಕ ಲವಲವಿಕೆಯನ್ನು ಜೀವಂತಿಕೆಯಿಂದ ಇರಿಸಬೇಕು ಎಂದರು.
ಬದಲಾದ ಕಾಲಮಾನದಲ್ಲಿ ನಮಗೆ ಸಿಗುವ ಅಧಿಕಾರ ಅಂತಸ್ತಿನ ಅಹಂಕಾರಕ್ಕಿಂತ ಸರಳತೆ ಸಜ್ಜನಿಕೆಗೆ ಹೆಚ್ಚು ಒಲವು ನೀಡಬೇಕು. ಅದೃಷ್ಟದಿಂದ ಅಹಂಕಾರವನ್ನು ಪಡೆದರೆ, ಕಷ್ಟಪಟ್ಟು ಪಡೆದ ಸಂಪಾದನೆ ವ್ಯಕ್ತಿತ್ವವನ್ನು ಕೊಡುತ್ತದೆ. ಜೀವನದಲ್ಲಿ ಎಡವಿ ಬಿದ್ದಾಗ ಎಲ್ಲರೂ ನೋಡುವಂತೆ ಎದ್ದು ನಿಲ್ಲಬೇಕೆಂದರು.
ಔಷಧೀಯ ಗುಣಮಟ್ಟ ಪರಿಶೋಧಕ ಎಸ್.ವೈ.ವಿನಯ್ ಮಾತನಾಡಿ, ಸಮಾಜದೊಂದಿಗೆ ಬೆರೆಯುವುದರಿಂದ ಬದುಕು ಸುಂದರವಾಗುತ್ತದೆ. ದೇಶದಲ್ಲಿ ಆರೋಗ್ಯ ಕ್ಷೇತ್ರದಲ್ಲಿನ ಸಂಶೋಧನೆ ಅದ್ಭುತವನ್ನೇ ಸೃಷ್ಟಿಸಿದೆ. ಭವಿಷ್ಯದಲ್ಲಿ ಇಂತಹ ಕ್ಷೇತ್ರದಲ್ಲಿ ಕೆಲಸ ಮಾಡಲಿರುವ ಇಂದಿನ ವಿದ್ಯಾರ್ಥಿಗಳಲ್ಲಿ ಸಮಾಜಮುಖಿ ಜವಾಬ್ದಾರಿ ಮೂಡಬೇಕಿದೆ ಎಂದು ಹೇಳಿದರು.
ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಎನ್‌ಇಎಸ್ ನಿರ್ದೇಶಕ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಇತರರಿದ್ದರು.