ಶಿವಮೊಗ್ಗ: ವೈದ್ಯರ ವಲಯದಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಸಂಶೋಧನೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೈಗೊಳ್ಳಬೇಕೆಂದು ಸಿಮ್ಸ್ ನಿರ್ದೇಶಕ ಡಾ. ವಿ.ವಿರೂಪಾಕ್ಷಪ್ಪ ಹೇಳಿದರು.
ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಶ್ರಯದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಸಂಶೋಧನಾ ವಿಧಾನಶಾಸ್ತ್ರ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಸಿಮ್ಸ್‌ನ ಎಂಆರ್‌ಯು ಘಟಕ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಡಿಎಚ್‌ಆರ್‌ನಿಂದ ಉತ್ತಮ ಘಟಕವೆಂದು ಮೆಚ್ಚುಗೆ ಪಡೆದಿದೆ. ಈ ಘಟಕದಿಂದ ಈಗಾಗಲೇ ಉತ್ತಮ ಸಂಶೋಧನಾ ಯೋಜನೆಗಳು ಹೊರಹೊಮ್ಮಿವೆ. ಇದು ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ ಎಂದರು.
ಜಿಲ್ಲಾ ಸರ್ಜನ್ ಡಾ. ಸಿದ್ದನ ಗೌಡ ಪಾಟೀಲ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ನಮ್ಮ ದೇಶದಲ್ಲಿ ವೈದ್ಯಕೀಯ ಸಂಶೋಧನೆಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಅದರಲ್ಲೂ ಕರೊನಾ ಸಂದರ್ಭ ಕೇವಲ 8 ತಿಂಗಳ ಅವಧಿಯೊಳಗೆ ಭಾರತ ಲಸಿಕೆ ಕಂಡು ಹಿಡಿದಿದ್ದು ದೇಶದ ಸಂಶೋಧಕರ ಹೆಗ್ಗಳಿಕೆ ಎಂದು ಹೇಳಿದರು.
ಸಿಮ್ಸ್ ಪ್ರಾಚಾರ್ಯ ಡಾ. ಕೆ.ರಮೇಶ್‌ಬಾಬು, ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಡಾ. ಡೆನಿಸ್ ಜೇವಿಯರ್, ಎಂಆರ್‌ಯು ನೋಡಲ್ ಅಧಿಕಾರಿ ಡಾ. ಮೊಹಮ್ಮದ್ ಆರೀಫ್ ಉಪಸ್ಥಿತರಿದ್ದರು.