ಶಿವಮೊಗ್ಗ: ಬಹುಮಾಧ್ಯಮ (ಮಲ್ಟಿಮಿಡಿಯಾ ಪ್ರೋಸೆಸಿಂಗ್) ನಿರ್ವಹಣೆಯಲ್ಲಿ ಹೊಸ ಸಾಧ್ಯತೆ ಕುರಿತು ಸಂಶೋಧನೆ ಅವಶ್ಯವಿದೆ. ವಿದ್ಯಾಸಂಸ್ಥೆಗಳಲ್ಲಿ ಸಂಶೋಧನಾ ಕೇಂದ್ರಗಳು ಆರಂಭವಾಗಬೇಕಿದೆ ಎಂದು ಬೆಂಗಳೂರು ಐಐಎಸ್‌ಸಿ ಪ್ರಾಧ್ಯಾಪಕ ಟಿ.ಶ್ರೀನಿವಾಸ ಅಭಿಪ್ರಾಯಪಟ್ಟರು.
ಜೆಎನ್‌ಎನ್ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಶುಕ್ರವಾರ ಏರ್ಪಡಿಸಿದ್ದ ಮಲ್ಟಿಮೀಡಿಯಾ ಪ್ರೋಸೆಸಿಂಗ್, ಕಮ್ಯುನಿಕೇಷನ್ ಮತ್ತು ಇನ್ಫಾರ್ಮೇಷನ್ ಟೆಕ್ನಾಲಜಿ ಕುರಿತ 4ನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಇಂಜಿನಿಯರಿಂಗ್ ವಿದ್ಯಾಭ್ಯಾಸ ಈಗ ಮೊದಲಿನಂತಿಲ್ಲ. ಪಠ್ಯದ ಅಧ್ಯಯನಕ್ಕೆ ಸೀಮಿತವಾಗದೆ ವಾಸ್ತವ ಜ್ಞಾನ ಪಡೆದುಕೊಳ್ಳಬೇಕಿದೆ. ಭವಿಷ್ಯದ ತಾಂತ್ರಿಕ ಆವಿಷ್ಕಾರಗಳ ಅವಶ್ಯಕತೆ ಕುರಿತು ಚಿಂತನೆಗಳಿಗೆ ಇಂತಹ ಕಾರ್ಯಾಗಾರ ಪ್ರೇರಣೆಯಾಗಲಿ ಎಂದರು.
ಪ್ರಸ್ತುತ ಮಲ್ಟಿಮೀಡಿಯಾ ಬಹುದೊಡ್ಡ ಶಕ್ತಿ. ಮಾಧ್ಯಮಗಳಲ್ಲಿ ಕಾಣುವ ನೇರ ಪ್ರಸಾರ, ಸುದ್ದಿ ಪ್ರಸರಣ ಎಲ್ಲವೂ ಸೇರಿದೆ. ಅಂತಹ ಪ್ರಸರಣಕ್ಕೆ ಮತ್ತಷ್ಟು ವೇಗ ಮತ್ತು ನಿಖರತೆ ಕುರಿತು ಮತ್ತಷ್ಟು ಸಂಶೋಧನೆಗಳ ಬಗ್ಗೆ ಈ ವಿಚಾರ ಸಂಕಿರಣದಲ್ಲಿ ಚರ್ಚೆ ನಡೆಯಲಿ ಎಂದು ಆಶಿಸಿದರು.
ಆಸ್ಟ್ರೇಲಿಯಾ ಡಿಕಿನ್ ವಿಶ್ವವಿದ್ಯಾಲಯದ ಡಾ. ಗ್ಯಾಂಗ್ ಲೀ ಮಾತನಾಡಿ, ಕೃತಕ ಬುದ್ದಿಮತ್ತೆ ಎಂಬುದು ಸಾಮಾನ್ಯ ಜನರ ಜೀವನಕ್ಕೆ ಬಹಳ ಹತ್ತಿರವಾಗಿದೆ. ಮಲ್ಟಿಮೀಡಿಯಾ ಕ್ಷೇತ್ರದಲ್ಲಿ ಎಐ ತಂತ್ರಜ್ಞಾನವು ಅದ್ಭುತ ನಿಖರತೆ ನೀಡುತ್ತಿದೆ. ತಂತ್ರಜ್ಞಾನ ಬೆಳೆದಂತೆಲ್ಲ, ಮನುಷ್ಯನಲ್ಲಿರುವ ನೈತಿಕತೆ ಮತ್ತು ವೃತ್ತಿಪರತೆ ಕಡಿಮೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಎಮೋಷನಲ್ ಎಐ ದೈನಂದಿನ ಕಾರ್ಯಗಳ ಜತೆಗೆ ಭಾವನಾತ್ಮಕವಾಗಿ ಸ್ಪಂದಿಸಲು ಆರಂಭಿಸುತ್ತಿದೆ. ಅನೇಕ ಸೃಜನಶೀಲ ಚಿಂತನೆಗಳನ್ನು ತಂತ್ರಜ್ಞಾನವೇ ಶಿಫಾರಸು ಮಾಡುವ ಕಾಲ ಸನಿಹವಾಗಿದೆ. ಇದರಿಂದ ಜನರ ಸಮೂಹದಿಂದಲೇ ದೂರವಾಗಿ ಯಾಂತ್ರೀಕರಣದ ಗುಲಾಮರಾಗುವ ಆತಂಕ ಎದುರಾಗುತ್ತಿದೆ ಎಂದು ಹೇಳಿದರು.
ಐಇಇಇ ಮಂಗಳೂರು ಉಪವಿಭಾಗದ ಮುಖ್ಯಸ್ಥ ಡಾ. ವಾಸುದೇವ, ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ಎನ್‌ಇಎಸ್ ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶ್ರೇಷ್ಠಿ, ಎಚ್.ಸಿ.ಶಿವಕುಮಾರ್, ಆಜೀವ ಸದಸ್ಯರಾದ ಕಿಶೋರ್ ಶೀರ್ನಾಳಿ, ಗುರುಪ್ರಸಾದ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಕಾರ್ಯಕ್ರಮ ಸಂಯೋಜಕರಾದ ಡಾ. ಶೀಲಾ, ಡಾ. ಪ್ರಮೋದ್ ಇತರರಿದ್ದರು.