ಸುದ್ದಿಗೋಷ್ಠಿಯಲ್ಲಿ ಉಮೇಶ್ ಬಾಪಟ್ ಮಾತನಾಡಿದರು. ಎಸ್.ದತ್ತಾತ್ರಿ, ಕೆ.ವಿ.ಅಣ್ಣಪ್ಪ. ಡಾ.ಶ್ರೀನಿವಾಸ್ ರೆಡ್ಡಿ, ಋಷಿಕೇಶ್ ಪೈ ಇದ್ದರು. 
ನ್ಯೂಸ್

ರಾಹುಲ್ ಗಾಂಧಿ ದೇಶದ ಕ್ಷಮೆ ಕೇಳಲಿ

ಶಿವಮೊಗ್ಗ: ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅಗ್ನಿವೀರ್ ಯೋಜನೆ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ಸೈನಿಕರಿಗೆ ಅಪಮಾನ ಮಾಡಿದ್ದಾರೆ. ಕೂಡಲೇ ದೇಶದ ಜನರ ಬಳಿ ಕ್ಷಮೆ ಕೇಳಬೇಕು ಎಂದು ಬಿಜೆಪಿ ಪೂರ್ವ ಸೈನಿಕರ ಪ್ರಕೋಷ್ಠದ ಸಂಚಾಲಕ ಉಮೇಶ್ ಬಾಪಟ್ ಒತ್ತಾಯಿಸಿದರು.

ಅಗ್ನಿವೀರ್ ಯೋಜನೆಯು ಭಾರತದ ಸೈನ್ಯವನ್ನು ಬಲಪಡಿಸುವ, ದೇಶವನ್ನು ಕಾಪಾಡುವ, ದೇಶಸೇವೆಯೇ ಪರಮೋಚ್ಚ ಎಂದು ಪ್ರೇರೇಪಿಸುವ ಯೋಜನೆ. ಆದರೆ ರಾಹುಲ್ ಗಾಂಧಿ ಯೋಜನೆ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಬಲ ತುಂಬುತ್ತಿದ್ದಾರೆ. ಸೈನಿಕರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸುತ್ತಿದ್ದಾರೆ. ಯುವ ಸೈನಿಕರು ಹೆಚ್ಚಾಗಬೇಕು ಎನ್ನುವ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ. 80 ಸಾವಿರ ಯುವಕರು ಯೋಜನೆಯಡಿ ದೇಶ ಸೇವೆ ಮಾಡುತ್ತಿದ್ದಾರೆ. ವರ್ಷಾಂತ್ಯದೊಳಗೆ 1.75 ಲಕ್ಷ ಸೈನಿಕರು ನೇಮಕವಾಗಲಿದ್ದಾರೆ ಎಂದರು.
18 ವರ್ಷ ಮೇಲ್ಪಟ್ಟವರು ಯೋಜನೆಯಡಿ ಸೈನ್ಯಕ್ಕೆ ಸೇರಬಹುದು. ತರಬೇತಿಗಾಗಿ ಕೋಟ್ಯಂತರ ರೂ. ವ್ಯಯಿಸಲಾಗುತ್ತಿದೆ. ಇದು 4 ವರ್ಷದ ಅವಧಿಯದ್ದಾಗಿದೆ. ಸೇನೆಯಿಂದ ಮರಳಿದ ಮೇಲೆ ಪದವಿ ಪ್ರಮಾಣ ಪತ್ರದ ಜತೆಗೆ 12 ಲಕ್ಷ ರೂ. ನೀಡಲಾಗುತ್ತದೆ. ಇದರ ಜತೆ ಪ್ರತಿ ತಿಂಗಳು 35ರಿಂದ 45 ಸಾವಿರ ರೂ.ವರೆಗೆ ವೇತನ ನೀಡಲಾಗುತ್ತದೆ. ದೇಶಸೇವೆ ಜತೆಗೆ ಆರ್ಥಿಕವಾಗಿ ಯುವಕರಿಗೆ ಸಹಾಯವಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಪ್ರಮುಖರಾದ ಋಷಿಕೇಶ್ ಪೈ, ಡಾ. ಶ್ರೀನಿವಾಸ್ ರೆಡ್ಡಿ, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.